ಕರ್ನಾಟಕ

karnataka

By ETV Bharat Karnataka Team

Published : Apr 23, 2024, 8:25 AM IST

ETV Bharat / state

ಪದ್ಮಶ್ರೀ ಗೌರವ ಸ್ವೀಕರಿಸಿದ ಕರುನಾಡ 'ನವ' ಸಾಧಕರು: ಸುಟ್ಟಗಾಯದಿಂದ ಬದುಕುಳಿದ ಸರ್ಜನ್​, ಗಾಲಿಕುರ್ಚಿ ಶಿಕ್ಷಕನಿಗೆ ಪ್ರಶಸ್ತಿ ಪ್ರದಾನ - 9 Padma award to karnataka

2024 ನೇ ಸಾಲಿನ ಪದ್ಮ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ನೀಡಿದ್ದು, ಕರ್ನಾಟಕದ 8 ಮಂದಿ ಪದ್ಮ ಪ್ರಶಸ್ತಿ ಹಾಗೂ ಒಬ್ಬರು ಪದ್ಮಭೂಷಣ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಪ್ಲಾಸ್ಟಿಕ್​ ಸರ್ಜನ್​ ಪ್ರೇಮಾ, ಶ್ರೀಧರ್ ಮಾಕಂ ಕೃಷ್ಣಮೂರ್ತಿ
ಪ್ಲಾಸ್ಟಿಕ್​ ಸರ್ಜನ್​ ಪ್ರೇಮಾ, ಶ್ರೀಧರ್ ಮಾಕಂ ಕೃಷ್ಣಮೂರ್ತಿ

ಬೆಂಗಳೂರು/ ನವದೆಹಲಿ:ಕೇಂದ್ರ ಸರ್ಕಾರವು ನೀಡುವ ಅತ್ಯುನ್ನತ ನಾಗರಿಕ ಸೇವಾ ಪ್ರಶಸ್ತಿಯಾದ ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳಿಗೆ ಕರ್ನಾಟಕದ 9 ಮಂದಿ ಭಾಜನರಾಗಿದ್ದಾರೆ. ಈ ಎಲ್ಲ ಸಾಧಕರಿಗೆ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ಮುರ್ಮು ಅವರು ಪ್ರಶಸ್ತಿ ಫಲಕಗಳನ್ನು ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್​ ಶಾ ಸೇರಿದಂತೆ ಗಣ್ಯಾತಿಗಣ್ಯರು ಸಮಾರಂಭದಲ್ಲಿ ಭಾಗಿಯಾಗಿದ್ದರು.

ಕರುನಾಡ ಖ್ಯಾತ ಕೈಗಾರಿಕೋದ್ಯಮಿ ಸೀತಾರಾಮ್ ಜಿಂದಾಲ್ ಅವರು ಸೋಮವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪದ್ಮಭೂಷಣ ಪ್ರಶಸ್ತಿಯನ್ನು ಸ್ವೀಕರಿಸಿದರು. ಇವರು 90 ವರ್ಷದ ಹಿರಿಯ ಕೈಗಾರಿಕೋದ್ಯಮಿಯಾಗಿದ್ದು, ಬೆಂಗಳೂರಿನ ಜಿಂದಾಲ್ ನೇಚರ್‌ಕ್ಯೂರ್ ಇನ್‌ಸ್ಟಿಟ್ಯೂಟ್ ಮೂಲಕ ಪ್ರಕೃತಿ ಚಿಕಿತ್ಸಾ ಪದ್ಧತಿಯನ್ನು ಪ್ರಚಾರ ಮಾಡುತ್ತಿದ್ದಾರೆ.

ಬೆಂಕಿಯಲ್ಲಿ ಅರಳಿದ ಪ್ಲಾಸ್ಟಿಕ್​ ಸರ್ಜನ್​ ಪ್ರೇಮಾಗೆ ಪದ್ಮಶ್ರೀ :ಸಣ್ಣ ವಯಸ್ಸಿನಲ್ಲಿ ಗ್ಯಾಸ್​ ಸ್ಟವ್​ ಸ್ಫೋಟದಿಂದ ದೇಹ ಸುಟ್ಟು, ಹಲವು ಬಾರಿ ಶಸ್ತ್ರಚಿಕಿತ್ಸೆಯಾಗಿ ಬದುಕುಳಿದ 72 ವರ್ಷದ ಪ್ರೇಮಾ ಧನರಾಜ್ ಬಳಿಕ ತಾವೇ ಶಸ್ತ್ರಚಿಕಿತ್ಸಕರಾಗಿ, ಇದುವರೆಗೆ 25,000 ಸುಟ್ಟು ಗಾಯಗೊಂಡ ರೋಗಿಗಳಿಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಇವರ ಸಾಮಾಜಿಕ ಕಾರ್ಯಕ್ಕೆ ಪದ್ಮಶ್ರೀ ಒಲಿದು ಬಂದಿದೆ.

ಇನ್ನು ಪೋಲಿಯೊದಿಂದ ತಮ್ಮ ಎರಡೂ ಕೈ ಕಾಲುಗಳನ್ನು ಕಳೆದುಕೊಂಡಿದ್ದ ಕೆ.ರಾಜಣ್ಣ ಅವರು ಸಾಮಾಜಿಕ ಕಾರ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.

ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಗಾಗಿ ಶ್ರೀಧರ್ ಮಾಕಂ ಕೃಷ್ಣಮೂರ್ತಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ದೊರಕಿದೆ. 69 ವರ್ಷ ವಯಸ್ಸಿನ ಇವರು ಗಾಲಿಕುರ್ಚಿಯ ಶಿಕ್ಷಣ ತಜ್ಞರಾಗಿದ್ದು, ರಾಷ್ಟ್ರದ ಶಿಕ್ಷಣ ನೀತಿಗಳಿಗೆ ಪ್ರಮುಖ ಕೊಡುಗೆಗಳನ್ನು ನೀಡಿದ್ದಾರೆ.

ಇನ್ನು, ಚಂದ್ರಶೇಖರ್ ಚನ್ನಪಟ್ಟಣ ರಾಜಣ್ಣಾಚಾರ್​ ಅವರು ಮಾನಸಿಕ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ನೀಡುತ್ತಿದ್ದಾರೆ. 75 ವರ್ಷ ವಯಸ್ಸಿನ ಹಿರಿಯ ಮನೋವೈದ್ಯರಾಗಿರುವ ಇವರು 50,000 ರೋಗಿಗಳಿಗೆ ಉಚಿತ ಮಾನಸಿಕ ಆರೋಗ್ಯ ಚಿಕಿತ್ಸೆಯನ್ನು ಒದಗಿಸುತ್ತಿದ್ದಾರೆ ಮತ್ತು 20,000 ವೃತ್ತಿಪರರಿಗೆ ತರಬೇತಿ ನೀಡಿದ್ದಾರೆ. ಈ ಕಾರ್ಯಕ್ಕೆ ಇವರಿಗೆ ಪದ್ಮ ಪ್ರಶಸ್ತಿ ದೊರೆತಿದೆ.

59 ವರ್ಷದ ಅನುಪಮಾ ಹೊಸ್ಕೆರೆ ಕಲಾ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದಾರೆ. ಅನುಪಮಾ ಕರ್ನಾಟಕ ಮತ್ತು ಇತರ ಸ್ಥಳಗಳಲ್ಲಿ ಮೂರು ದಶಕಗಳಿಂದ 'ಧಾತು ಗೊಂಬೆಯಾಟ'ವನ್ನು ಪ್ರಚಾರ ಮಾಡುತ್ತಿರುವ ಗೊಂಬೆಯಾಟ ಕಲಾವಿದೆ. ಅನುಪಮಾ ಹೊಸ್ಕೆರೆ ಅವರು ಅಂತರರಾಷ್ಟ್ರೀಯ ಬೊಂಬೆ ಉತ್ಸವಗಳಲ್ಲಿ ಕೂಡ ಪ್ರದರ್ಶನ ನೀಡಿದ್ದಾರೆ. ಅಲ್ಲದೇ, ಜಾಗತಿಕವಾಗಿ ಬೊಂಬೆಯಾಟಗಾರರಿಗೆ ತರಬೇತಿ ನೀಡಿದ್ದಾರೆ.

ಡಬಲ್ಸ್ ವಿಶ್ವ ನಂಬರ್ 1 ರೋಹನ್ ಬೋಪಣ್ಣಗೆ ಒಲಿದ ಪದ್ಮ: ಖ್ಯಾತ ಕ್ರೀಡಾಪಟು ರೋಹನ್ ಬೋಪಣ್ಣ ಎಂದೇ ಖ್ಯಾತರಾಗಿರುವ ರೋಹನ್ ಮಚಂಡ ಬೋಪಣ್ಣ ಅವರ ಕ್ರೀಡಾಕ್ಷೇತ್ರದಲ್ಲಿನ ಸಾಧನೆಗೆ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. 43 ವರ್ಷದ ಅನುಭವಿ ಟೆನಿಸ್ ಆಟಗಾರ ರೋಹನ್​ ಪ್ರಸ್ತುತ ಡಬಲ್ಸ್ ವಿಶ್ವ ನಂಬರ್ 1 ಆಗಿದ್ದಾರೆ.

ಸಮಾಜ ಸೇವೆಗಾಗಿ 66 ವರ್ಷದ ಸೋಮಣ್ಣ ಅವರು ಪದ್ಮಶ್ರೀ ಪ್ರಶಸ್ತಿ ಪಡೆದಿದ್ದಾರೆ. ಮೈಸೂರಿನ ಬುಡಕಟ್ಟು ಕಲ್ಯಾಣ ಕಾರ್ಯಕರ್ತರಾಗಿರುವ ಇವರು, ನಾಲ್ಕು ದಶಕಗಳಿಂದ ಜೇನು ಕುರುಬ ವನವಾಸಿ ಸಮುದಾಯದ ಅಭ್ಯುದಯಕ್ಕಾಗಿ ಶ್ರಮಿಸುತ್ತಿದ್ದಾರೆ.

ಹಾಗೇ, ವ್ಯಾಪಾರ ಮತ್ತು ಕೈಗಾರಿಕೆಗೆ ನೀಡಿದ ಕೊಡುಗೆಗಳಿಗಾಗಿಶಶಿ ಸೋನಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಇದನ್ನೂ ಓದಿ:2024ನೇ ಸಾಲಿನ ಪದ್ಮ ಪ್ರಶಸ್ತಿಗಳ ಘೋಷಣೆ: ಕರ್ನಾಟಕದ ಸೋಮಣ್ಣ, ಪ್ರೇಮಾ ಸೇರಿ 34 ಸಾಧಕರಿಗೆ ಪದ್ಮಶ್ರೀ

ABOUT THE AUTHOR

...view details