ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಕೇಂದ್ರಿತ ಆಡಳಿತ ನಡೆಸುತ್ತಿದೆ. ಪಂಚ ಗ್ಯಾರಂಟಿಗಾಗಿ ಹೆಚ್ಚಿನ ಅನುದಾನ ಬಿಡುಗಡೆ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ, ಅಭಿವೃದ್ಧಿಗೂ ಹಣ ಹೊಂದಿಸುವ ಕಸರತ್ತು ನಡೆಸುತ್ತಿದೆ. ಆರ್ಥಿಕ ಹೊರೆಯ ಮಧ್ಯೆ ಪಂಚ ಗ್ಯಾರಂಟಿಗೆ ಹಣ ಬಿಡುಗಡೆ ಮಾಡುವ ಅನಿವಾರ್ಯತೆ ಸರ್ಕಾರದ್ದಾಗಿದೆ.
ವಿಳಂಬಗಳೊಂದಿಗೆ ಮಾಸಿಕ ಪಂಚ ಗ್ಯಾರಂಟಿ ಹಣವು ಫಲಾನುಭವಿಗಳ ಖಾತೆಗೆ ಜಮೆಯಾಗುತ್ತಿವೆ. ಎಸ್ಸಿಎಸ್ಪಿ-ಟಿಎಸ್ಪಿ ಅನುದಾನವನ್ನೂ ಪಂಚ ಗ್ಯಾರಂಟಿಗಳಿಗೆ ಬಳಕೆ ಮಾಡಿ ಹಣಕಾಸು ನಿರ್ವಹಣೆ ಮಾಡಲಾಗುತ್ತಿದೆ. ಆರ್ಥಿಕ ವರ್ಷದ ಐದು ತಿಂಗಳಲ್ಲಿ ಪಂಚ ಗ್ಯಾರಂಟಿಗಳಿಗೆ ಬಿಡುಗಡೆಯಾದ ಹಣವೆಷ್ಟು ಎಂಬ ಮಾಹಿತಿ ಈ ಕೆಳಗಿನಂತಿದೆ.
ಪಂಚ ಗ್ಯಾರಂಟಿಗೆ ಒಟ್ಟು ಬಿಡುಗಡೆಯಾದ ಹಣವೆಷ್ಟು?: ಗೃಹ ಲಕ್ಷ್ಮಿ, ಶಕ್ತಿ, ಗೃಹ ಜ್ಯೋತಿ, ಅನ್ನಭಾಗ್ಯ ಮತ್ತು ಯುವನಿಧಿ ಪಂಚ ಗ್ಯಾರಂಟಿಗಾಗಿ ಸಿದ್ದರಾಮಯ್ಯ ಸರ್ಕಾರ 2024-25ರ ಸಾಲಿನಲ್ಲಿ 52,000 ಕೋಟಿ ರೂ. ಬಜೆಟ್ ಅನುದಾನ ಹಂಚಿಕೆ ಮಾಡಿದೆ. ಕೆಡಿಪಿ ಪ್ರಗತಿ ಅಂಕಿ-ಅಂಶದ ಪ್ರಕಾರ, ಏಪ್ರಿಲ್ನಿಂದ ಆಗಸ್ಟ್ವರೆಗೆ ಒಟ್ಟು 16,418 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಬಹುತೇಕ ಅಷ್ಟೇ ಪ್ರಮಾಣದಲ್ಲಿ ಪಂಚ ಗ್ಯಾರಂಟಿಗಳಿಗೆ ಹಣ ವೆಚ್ಚ ಮಾಡಲಾಗಿದೆ. ಅಂದರೆ ಅಷ್ಟು ಹಣ ಫಲಾನುಭವಿಗಳ ಖಾತೆಗೆ ಜಮೆಯಾಗಿವೆ.
ಈ ಮೇಲಿನ ಒಟ್ಟು ಹಂಚಿಕೆ ಹಾಗೂ ಬಿಡುಗಡೆ ಪೈಕಿ ಎಸ್ಸಿಎಸ್ಪಿ-ಟಿಎಸ್ಪಿ ಅನುದಾನದಿಂದ ಪಂಚ ಗ್ಯಾರಂಟಿಗಾಗಿ 2024-25ನೇ ಸಾಲಿನಲ್ಲಿ ಒಟ್ಟು 14,279 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ಆಗಸ್ಟ್ವರೆಗೆ ಒಟ್ಟು 4,698 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಒಟ್ಟು ಹಂಚಿಕೆಯಾದ 52,000 ಕೋಟಿ ರೂ. ಅನುದಾನದ ಪೈಕಿ ಪಂಚ ಗ್ಯಾರಂಟಿಗಳಿಗೆ ಶೇ 31.57 ಹಣ ಬಿಡುಗಡೆಯಾಗಿದೆ. ಅಂದರೆ, ಸರ್ಕಾರ ಒಟ್ಟು ರಾಜಸ್ವ ವೆಚ್ಚದಲ್ಲಿ ಪಂಚ ಗ್ಯಾರಂಟಿಗಳಿಗೆ ಹೆಚ್ಚಿನ ಹಣ ಬಿಡುಗಡೆಗೊಳಿಸಿದೆ.
ಯಾವ ಯೋಜನೆಗೆ ಎಷ್ಟು ಹಣ?: ಶಕ್ತಿ ಯೋಜನೆಗೆ 2024-25 ಸಾಲಿನಲ್ಲಿ ಒಟ್ಟು 5,015 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಈ ಪೈಕಿ ಆಗಸ್ಟ್ವರೆಗೆ 2,089 ಕೋಟಿ ರೂ. ಬಿಡುಗಡೆಯಾಗಿದೆ. ಅಷ್ಟೇ ಪ್ರಮಾಣದಲ್ಲಿ 2,089 ಕೋಟಿ ರೂ. ವೆಚ್ಚ ಮಾಡಲಾಗಿದೆ.
ಗೃಹ ಲಕ್ಷ್ಮಿ ಯೋಜನೆಗೆ ಪ್ರಸಕ್ತ ವರ್ಷದಲ್ಲಿ ಒಟ್ಟು 28,608 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಆಗಸ್ಟ್ವರೆಗೆ 8,612 ಕೋಟಿ ರೂ. ಬಿಡುಗಡೆಯಾಗಿದೆ. ಈ ಪೈಕಿ ಸುಮಾರು 8,465 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಕೆಡಿಪಿ ಪ್ರಗತಿ ಅಂಕಿ-ಅಂಶದಲ್ಲಿ ತಿಳಿಸಲಾಗಿದೆ.
ಅನ್ನಭಾಗ್ಯ ಡಿಬಿಟಿ ಯೋಜನೆಗೆ ಪ್ರಸಕ್ತ ವರ್ಷದಲ್ಲಿ ಒಟ್ಟು 8,079 ಕೋಟಿ ರೂ. ಹಂಚಿಕೆಯಾಗಿದೆ. ಆಗಸ್ಟ್ವರೆಗೆ 1,938 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಈ ಪೈಕಿ 1,936 ಕೋಟಿ ರೂ. ವೆಚ್ಚ ಮಾಡಲಾಗಿದೆ.
ಗೃಹ ಜ್ಯೋತಿ ಯೋಜನೆಗೆ ಪ್ರಸಕ್ತ ವರ್ಷದಲ್ಲಿ ಒಟ್ಟು 9,657 ಕೋಟಿ ರೂ. ಹಂಚಿಕೆಯಾಗಿದೆ. ಆಗಸ್ಟ್ವರೆಗೆ 3,660 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. 3,660 ಕೋಟಿ ರೂ. ಪೂರ್ಣ ಪ್ರಮಾಣದ ಹಣ ವೆಚ್ಚ ಮಾಡಲಾಗಿದೆ.
ಯುವನಿಧಿ ಯೋಜನೆಗೆ 2024-25 ಸಾಲಿನಲ್ಲಿ ಒಟ್ಟು 650 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಆಗಸ್ಟ್ವರೆಗೆ 119 ಕೋಟಿ ರೂ. ಬಿಡುಗಡೆಗೊಂಡಿದೆ. ಈ ಪೈಕಿ ಆಗಸ್ಟ್ವರೆಗೆ 56.67 ಕೋಟಿ ರೂ. ವೆಚ್ಚ ಮಾಡಲಾಗಿದೆ.
ಇದನ್ನೂ ಓದಿ: ಬಡತನದಲ್ಲಿ ಅರಳಿದ ಪ್ರತಿಭೆ: ರಾಜ್ಯಶಾಸ್ತ್ರ ವಿಭಾಗದಲ್ಲಿ ಏಳು ಚಿನ್ನದ ಪದಕ ಪಡೆದ ಮಯೂರ್ ಖಿಲಾರಿ! - KUD Convocation
ಎಸ್ಸಿಎಸ್ಪಿ-ಟಿಎಸ್ಪಿ ಅನುದಾನ ಬಳಕೆ ಹೇಗಿದೆ?: ಗೃಹ ಜ್ಯೋತಿ ಯೋಜನೆಗೆ 2024-25 ಸಾಲಿನಲ್ಲಿ ಒಟ್ಟು 2,585 ಕೋಟಿ ರೂ. ಎಸ್ಸಿಎಸ್ಪಿ-ಟಿಎಸ್ಪಿ ಹಣ ಹಂಚಿಕೆ ಮಾಡಲಾಗಿದೆ. ಈ ಪೈಕಿ ಆಗಸ್ಟ್ವರೆಗೆ ಒಟ್ಟು 1,272 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ.
ಅನ್ನಭಾಗ್ಯ ಯೋಜನೆಗೆ ಪ್ರಸಕ್ತ ವರ್ಷ ಒಟ್ಟು 2,187 ಕೋಟಿ ರೂ. ಎಸ್ಸಿಎಸ್ಪಿ-ಟಿಎಸ್ಪಿ ಹಣ ಹಂಚಿಯಾಗಿದೆ. ಇದರಲ್ಲಿ ಆಗಸ್ಟ್ವರೆಗೆ ಒಟ್ಟು 423 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ.
ಶಕ್ತಿ ಯೋಜನೆಗೆ ಪ್ರಸಕ್ತ ವರ್ಷದಲ್ಲಿ 1,451 ಕೋಟಿ ರೂ. ಎಸ್ಸಿಎಸ್ಪಿ-ಟಿಎಸ್ಪಿ ಅನುದಾನ ಹಂಚಿಕೆಯಾಗಿದ್ದು, ಆಗಸ್ಟ್ವರೆಗೆ ಒಟ್ಟು 717 ಕೋಟಿ ರೂ. ಬಿಡುಗಡೆಗೊಂಡಿದೆ.
ಗೃಹ ಲಕ್ಷ್ಮಿ ಯೋಜನೆಗೆ ಪ್ರಸಕ್ತ ವರ್ಷದಲ್ಲಿ ಒಟ್ಟು 7,881 ಕೋಟಿ ರೂ. ಎಸ್ಸಿಎಸ್ಪಿ-ಟಿಎಸ್ಪಿ ಹಣ ಹಂಚಿಕೆ ಮಾಡಿದ್ದು, ಆಗಸ್ಟ್ವರೆಗೆ ಒಟ್ಟು 2,286 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.
ಯುವನಿಧಿ ಯೋಜನೆಗೆ ಈ ಸಾಲಿನಲ್ಲಿ ಒಟ್ಟು 175 ಕೋಟಿ ರೂ. ಎಸ್ಸಿಎಸ್ಪಿ-ಟಿಎಸ್ಪಿ ಹಣ ಹಂಚಿಕೆ ಮಾಡಿದ್ದು, ಈವರೆಗೆ ಯಾವುದೇ ಹಣ ಬಿಡುಗಡೆ ಮಾಡಿಲ್ಲ.
ಇದನ್ನೂ ಓದಿ: ಜೀವ ಉಳಿಸಲು ರಸ್ತೆ ಸುರಕ್ಷತೆ ತಂತ್ರಜ್ಞಾನ ಅವಶ್ಯಕ: ಡಿಸಿಎಂ ಡಿಕೆ ಶಿವಕುಮಾರ್ ಅಭಿಮತ - Road Safety