ಬೆಂಗಳೂರು: ಸ್ವಂತ ಸೂರು ಹೊಂದಿರಬೇಕೆಂಬ ಆಸೆ ಪ್ರತಿಯೊಬ್ಬರಲ್ಲೂ ಇರುತ್ತದೆ. ಆದರೆ, ಅದನ್ನು ಕಾರ್ಯಗತ ಮಾಡಿಕೊಳ್ಳುವುದು ಸುಲಭವಲ್ಲ. ಬಡ ಕುಟುಂಬಗಳ ಆರ್ಥಿಕ ಸಮಸ್ಯೆ ಇದಕ್ಕೆ ಕಾರಣ. ಹಾಗಾಗಿ, ರಾಜಧಾನಿ ಬೆಂಗಳೂರಿನಲ್ಲಿ ಬಹುತೇಕ ಜನರು ಸ್ವಂತ ಮನೆಯ ಕನಸಿನಲ್ಲೇ ಜೀವನ ಸಾಗಿಸುತ್ತಾರೆ. ಅಂತವರಿಗೆ ನೆರವಾಗಲು ರಾಜ್ಯ ಸರ್ಕಾರ ಮುಂದಾಗಿದ್ದು, 2024ರ ಅಂತ್ಯದ ವೇಳೆಗೆ ಮುಖ್ಯಮಂತ್ರಿ ಬಹುಮಹಡಿ ವಸತಿ ಯೋಜನೆ ಮೂಲಕ ಸುಮಾರು 4 ಸಾವಿರ ಫಲಾನುಭವಿಗಳಿಗೆ ವಸತಿ ಸೌಲಭ್ಯ ಸಿಗಲಿದೆ.
ಈ ಯೋಜನೆಗೆ 2017ರಲ್ಲೇ ಶಂಕುಸ್ಥಾಪನೆ ನೆರವೇರಿಸಿದರೂ, ಜಮೀನು ಲಭ್ಯತೆ ಹಾಗೂ ತಾಂತ್ರಿಕ ಕಾರಣದಿಂದ ಕಾಲಮಿತಿಯೊಳಗೆ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಸ್ವತಃ ಮುಖ್ಯಮಂತ್ರಿ ಖುದ್ದು ಆಸಕ್ತಿ ವಹಿಸಿ ವಸತಿ ಕಾರ್ಯಕ್ರಮ ಅನುಷ್ಠಾನ ಕುರಿತು ಇತ್ತೀಚೆಗೆ ಪರಾಮರ್ಶನಾ ಸಭೆ ನಡೆಸಿ, ಯೋಜನೆಗೆ ಮರುಚಾಲನೆ ನೀಡಲಾಗಿದ್ದು, ಕಾಮಗಾರಿಗೆ ವೇಗ ನೀಡಲಾಗಿದೆ. ವಿವಿಧ ಸ್ಥಳಗಳಲ್ಲಿ ನಿರ್ಮಾಣವಾಗುತ್ತಿರುವ ಫ್ಲ್ಯಾಟ್ ಸಮುಚ್ಚಯಗಳಲ್ಲಿ ಬಾಕಿ ಇರುವ ಕಾರ್ಯವನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಸತಿ ಇಲಾಖೆ ಆಧಿಕಾರಿಗಳು ತಿಳಿಸಿದ್ದಾರೆ.
ನಿರ್ಮಾಣದ ಹಂತದಲ್ಲಿರುವ ಘಟಕಗಳು: ಈ ಯೋಜನೆ ಅಡಿಯಲ್ಲಿ ಒಂದು ಲಕ್ಷ ಮನೆಗಳನ್ನು ನಿರ್ಮಿಸಲಿದ್ದರೂ, ಸದ್ಯ ಹಲವು ಕಡೆಗಳಲ್ಲಿ ಒಟ್ಟು 46,500 ಘಟಕಗಳು ನಿರ್ಮಾಣದ ಹಂತದಲ್ಲಿವೆ. ಯೋಜನೆಯ ಸೌಲಭ್ಯ ಪಡೆಯಲು ಮೊದಲು ಅರ್ಜಿ ಹಾಕಿರುವ 12,153 ಫಲಾನುಭವಿಗಳಿಗೆ ಹೆಚ್ಚುವರಿಯಾಗಿ ರಾಜ್ಯ ಸರ್ಕಾರ 1 ಲಕ್ಷ ರೂ. ಸಬ್ಸಿಡಿ ನೀಡಲಿದೆ.
ಇದಕ್ಕಾಗಿ ಇತ್ತೀಚೆಗೆ ಸರ್ಕಾರ 121.53 ಕೋಟಿ ರೂ. ಮೊತ್ತಕ್ಕೆ ಮಂಜೂರಾತಿ ನೀಡಿದೆ. ಇದರಿಂದಾಗಿ ಇಷ್ಟೂ ಕುಟುಂಬಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಅಲ್ಲದೆ, ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಡವರಿಗೆ ಒಂದು ಲಕ್ಷ ರೂ. ಹೊರೆ ಕಡಿಮೆ ಮಾಡಲು ಒಪ್ಪಿಗೆ ಸೂಚಿಸಲಾಗಿದೆ.
ಘಟಕದ ವೆಚ್ಚವೆಷ್ಟು?: ಮುಖ್ಯಮಂತ್ರಿ ಬಹುಮಹಡಿ ವಸತಿ ಯೋಜನೆಯಡಿ ನಿರ್ಮಿಸುತ್ತಿರುವ ಫ್ಲ್ಯಾಟ್ ಒಂದಕ್ಕೆ 11.20 ಲಕ್ಷ ರೂ. (ಜಿಎಸ್‌ಟಿ ಮೊತ್ತ ಸೇರಿ) ನಿಗದಿಪಡಿಸಲಾಗಿದೆ. ಈ ಮೊತ್ತದಲ್ಲಿ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ 2.70 ಲಕ್ಷ ರೂ. ಹಾಗೂ ಪರಿಶಿಷ್ಟರಿಗೆ 3.50 ಲಕ್ಷ ರೂ. ಸಬ್ಸಿಡಿ ನೀಡಲಾಗುತ್ತಿದೆ. ಈ ಮೊದಲು ಠೇವಣಿ ಪಾವತಿಸಿದ್ದ 12,153 ಫಲಾನುಭವಿಗಳಿಗೆ ಸರ್ಕಾರದಿಂದ ಮತ್ತೆ 1 ಲಕ್ಷ ರೂ. ಹೆಚ್ಚುವರಿಯಾಗಿ ಸಬ್ಸಿಡಿ ನೀಡಲಾಗುತ್ತದೆ.
ಯೋಜನೆ ಜಾರಿ ಎಲ್ಲೆಲ್ಲಿ?: ಮುಖ್ಯಮಂತ್ರಿ ಬಹುಮಹಡಿ ವಸತಿ ಯೋಜನೆಗೆ ಯಲಹಂಕ, ಕೆ.ಆರ್.ಪುರ, ಮಹದೇವಪುರ, ಯಶವಂತಪುರ, ದಾಸರಹಳ್ಳಿ, ಬೆಂಗಳೂರು ದಕ್ಷಿಣ ಹಾಗೂ ಆನೇಕಲ್ ವಿಧಾನಸಭಾ ಕ್ಷೇತ್ರಗಳಲ್ಲಿನ ಆಯ್ದ ಕೆಲ ಪ್ರದೇಶಗಳಲ್ಲಿ ಪ್ಲ್ಯಾಟ್ಗಳನ್ನು ನಿರ್ಮಿಸಲಾಗುತ್ತಿದೆ. ಒಂದು ಬಿಹೆಚ್‌ಕೆ ಮಾದರಿಯ ಪ್ಲ್ಯಾಟ್‌ಗಳು ಫಲಾನುಭವಿಗಳಿಗೆ ವಿತರಣೆಯಾಗಲಿವೆ. ನಗರದಲ್ಲಿ ಜಾಗದ ಅಲಭ್ಯತೆಯಿಂದಾಗಿ ಮನೆ ಬದಲು ಪ್ಲ್ಯಾಟ್ ನಿರ್ಮಾಣ ಮಾಡಿ ವಿತರಿಸಲಾಗುತ್ತಿದೆ.
ಇದನ್ನೂ ಓದಿ: ಖಾಸಗಿ ಆಸ್ಪತ್ರೆಗೆ ಸೆಡ್ಡು ಹೊಡೆದ ಚಿಟಗುಪ್ಪಿ ಆಸ್ಪತ್ರೆ; ಬಡವರ ಪಾಲಿಗೆ ಆಯ್ತು ಸಂಜೀವಿನಿ - Chitaguppi Hospital
ಆಯಾ ಅಪಾರ್ಟ್ಮೆಂಟ್ಗಳಲ್ಲಿ ವಾಸಿಸುವ ಫಲಾನುಭವಿಗಳಿಗೆ ನಾಗರಿಕ ಸೌಲಭ್ಯಗಳನ್ನು ಒದಗಿಸಲು ರಸ್ತೆ, ಕುಡಿಯುವ ನೀರು, ಚರಂಡಿ, ಒಳಚರಂಡಿ ಸೌಲಭ್ಯ ಕಲ್ಪಿಸಲಾಗುತ್ತದೆ. ಯಶವಂತಪುರದ ಚಿಕ್ಕಲ್ಲೂರು ಬಳಿ ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ಈ ಯೋಜನೆಯಡಿ ನಿರ್ಮಿಸಿರುವ ವಸತಿ ಸಮುಚ್ಚಯವನ್ನು ಕಳೆದ ತಿಂಗಳು ವಸತಿ ಸಚಿವ ಜಮೀರ್ ಅಹಮದ್ ಖಾನ್, ಶಾಸಕ ಎಸ್.ಟಿ.ಸೋಮಶೇಖರ್ ಹಾಗೂ ಅಧಿಕಾರಿಗಳ ಜೊತೆ ತೆರಳಿ ವೀಕ್ಷಿಸಿದ್ದಾರೆ.
''ಮುಖ್ಯಮಂತ್ರಿ ಬಹುಮಹಡಿ ವಸತಿ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ಆರ್ಥಿಕ ಹೊರೆ ತಗ್ಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹತ್ವದ ತೀರ್ಮಾನ ತೆಗೆದುಕೊಂಡಿದ್ದಾರೆ. ಇದರಿಂದ 12,153 ಕುಟುಂಬಗಳಿಗೆ ಅನುಕೂಲವಾಗಲಿದೆ. ಪ್ರತಿ ಮನೆಗೆ ಒಂದು ಲಕ್ಷ ರೂ.ಗಳಂತೆ 121 ಕೋಟಿ 53 ಲಕ್ಷ ರೂ.ಗಳನ್ನು ಸರ್ಕಾರವೇ ಭರಿಸಲು ಒಪ್ಪಿಗೆ ಸಿಕ್ಕಿದೆ. ಆದಷ್ಟು ಶೀಘ್ರವೇ ಫಲಾನುಭವಿಗಳಿಗೆ ವಸತಿ ಸೌಲಭ್ಯ ಸಿಗಲಿದೆ" ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.