ಕರ್ನಾಟಕ

karnataka

ETV Bharat / state

ದಾಖಲೆಗಳಲ್ಲಿ ಹೆಸರು ಬದಲಾಯಿಸಿ ಮತ್ತೊಬ್ಬರ ಹೆಸರಿದ್ದ ತಕ್ಷಣ ಆಸ್ತಿ ಮಾಲೀಕತ್ವ ಬದಲಾಗದು: ಹೈಕೋರ್ಟ್ - High Court - HIGH COURT

ಆಸ್ತಿಯ ದಾಖಲೆ ಬದಲಾವಣೆಗೆ ಸಂಬಂಧಪಟ್ಟಂತೆ ಹೈಕೋರ್ಟ್​ ಮಹತ್ವದ ತೀರ್ಪು ಪ್ರಕಟಿಸಿದೆ. ಜನರು ತಮ್ಮ ಆಸ್ತಿಗಾಗಿ ವಕ್ಫ್​ ಟ್ರಿಬ್ಯುನಲ್‌ ಮೊರೆ ಹೋಗಬೇಕಾಗಿಲ್ಲ. ಖಾಸಗಿ ಮಾಲೀಕರ ಹೆಸರು ಬದಲಿಸಿ, ವಕ್ಫ್​ ಮಂಡಳಿ ಹೆಸರನ್ನು ಸೇರಿಸಿದಾಕ್ಷಣ ಅದು ವಕ್ಫ್​ ಆಸ್ತಿಯಾಗದು ಎಂದು ನ್ಯಾಯಾಲಯ ಹೇಳಿದೆ.

high court
ಹೈಕೋರ್ಟ್ (ETV Bharat)

By ETV Bharat Karnataka Team

Published : Aug 26, 2024, 7:36 PM IST

ಬೆಂಗಳೂರು:ಖಾಸಗಿ ವ್ಯಕ್ತಿಯ ಹೆಸರಿನಲ್ಲಿದ್ದ ಕಂದಾಯ ದಾಖಲೆಗಳನ್ನು ಬದಲಾಯಿಸಿ, ವಕ್ಫ್ ಬೋರ್ಡ್‌ ಹೆಸರು ಸೇರ್ಪಡೆ ಮಾಡಿದಾಕ್ಷಣ ಆ ಆಸ್ತಿ ವಕ್ಫ್​ ಆಸ್ತಿಯಾಗಿ ಬದಲಾಗುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಚಿಕ್ಕರಗಿ ಗ್ರಾಮದ ಚೆನ್ನಮ್ಮ ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರಿದ್ದ ಕಲಬುರಗಿಯ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೆ, ಹೆಸರು ಸೇರ್ಪಡೆಗೆ ಮುನ್ನ ಆಸ್ತಿಯ ಹಕ್ಕಿನ ಬಗ್ಗೆ ಪರಿಶೀಲನೆ ಆಗಬೇಕು ಎಂದು ಹೈಕೋರ್ಟ್‌ ಆದೇಶಿಸಿದೆ.

ಪ್ರಾದೇಶಿಕ ಆಯುಕ್ತರು ಮತ್ತು ಜಿಲ್ಲಾಧಿಕಾರಿ ಇಬ್ಬರೂ ಹೊರಡಿಸಿರುವ ಆದೇಶಗಳನ್ನು ತಹಶೀಲ್ದಾರ್‌ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಒಂದು ಆಸ್ತಿ ವಕ್ಫ್​ ಮಂಡಳಿಗೆ ಸೇರಿದ್ದರೆ ಅಂತಹ ಸಂದರ್ಭದಲ್ಲಿ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲನೆ ನಡೆಸಿ, ನಂತರ ದಾಖಲೆಗಳಲ್ಲಿ ಹೆಸರು ಸೇರ್ಪಡೆ ಮಾಡುವಂತಾಗಬೇಕು. ಆದರೆ, ಈ ಪ್ರಕರಣದಲ್ಲಿ ಯಾವುದೇ ಪರಿಶೀಲನೆ ನಡೆಸದೆ, ಏಕಾಏಕಿ ಹೆಸರು ಬದಲಾವಣೆ ಮಾಡಲಾಗಿದೆ ಎಂದು ನ್ಯಾಯಪೀಠ ಹೇಳಿದೆ.

ಜೊತೆಗೆ, ತಹಶೀಲ್ದಾರ್‌ ಅವರು ಖಾಸಗಿ ಮಾಲೀಕರ ಹೆಸರು ಅಳಿಸಿ ಹಾಕಿ ವಕ್ಫ್​ ಮಂಡಳಿ ಹೆಸರು ಸೇರಿಸುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಅಲ್ಲದೆ, ಅರ್ಜಿದಾರರು ತಮ್ಮ ಆಸ್ತಿಗಾಗಿ ವಕ್ಫ್​ ಟ್ರಿಬ್ಯುನಲ್‌ ಮೊರೆ ಹೋಗಬೇಕಾಗಿಲ್ಲ. ಹಾಗಾಗಿ, ಪ್ರಾದೇಶಿಕ ಆಯುಕ್ತರು ಹೊರಡಿಸಿದ್ದ ಆದೇಶವನ್ನು ತಹಶೀಲ್ದಾರರು ಪರಿಶೀಲನೆ ಮಾಡಬೇಕು. ಅರ್ಜಿದಾರರು ತಮ್ಮ ಅಹವಾಲು ಸಲ್ಲಿಸಲು ಅವಕಾಶ ನೀಡಬೇಕು. ಆನಂತರವೇ ಸೂಕ್ತ ಆದೇಶ ಹೊರಡಿಸಬೇಕು ಎಂದು ಕೋರ್ಟ್​ ನಿರ್ದೇಶನ ನೀಡಿದೆ.

ಆಸ್ತಿಗೆ ಸಂಬಂಧಿಸಿದಂತೆ ವ್ಯಾಜ್ಯವಿದ್ದರೆ ಆಗ ಪ್ರಾದೇಶಿಕ ಆಯುಕ್ತರು ವಕ್ಫ್​ ನ್ಯಾಯ ಮಂಡಳಿ ಮೊರೆ ಹೋಗಿ ಎಂದು ಹೇಳಬಹುದು. ಆದರೆ, ಈ ಪ್ರಕರಣದಲ್ಲಿ ಆಸ್ತಿ ವಕ್ಫ್ ಬೋರ್ಡ್‌ಗೆ ಸೇರಿದ್ದು ಎಂದು ಹೇಳಲು ದಾಖಲೆಗಳಿಲ್ಲ. ಆದರೂ ಆ ರೀತಿಯ ಆದೇಶವನ್ನು ಹೊರಡಿಸಬಾರದಿತ್ತು ಎಂದು ನ್ಯಾಯಾಲಯ ತಿಳಿಸಿದೆ.

ಪ್ರಕರಣದ ಹಿನ್ನೆಲೆ:2012ರಲ್ಲಿ ಕ್ರಯಪತ್ರದ ಮೂಲಕ ಸ್ವಲ್ಪ ಜಮೀನು ಖರೀದಿಸಿದ್ದರು. ಆನಂತರ ಕಂದಾಯ ದಾಖಲೆಗಳಲ್ಲಿ ಅವರ ಹೆಸರನ್ನು ನಮೂದಿಸಲಾಗಿತ್ತು. ಆದರೆ, ಪ್ರಾದೇಶಿಕ ಆಯುಕ್ತರು ಜಿಲ್ಲಾಧಿಕಾರಿಗಳಿಗೆ ವಕ್ಫ್ ಆಸ್ತಿಗಳ ಬಗ್ಗೆ ಪರಿಶೀಲನೆ ನಡೆಸಿ, ಒಂದು ವೇಳೆ ಕಂದಾಯ ದಾಖಲೆಗಳಲ್ಲಿ ಹೆಸರು ಬದಲಾವಣೆ ಆಗಿದ್ದರೆ ಅವುಗಳನ್ನು ತೆಗೆದು ವಕ್ಫ್​ ಹೆಸರನ್ನು ನಮೂದಿಸುವಂತೆ ಆದೇಶ ನೀಡಿದ್ದರು. ಅದರಂತೆ ಜಿಲ್ಲಾಧಿಕಾರಿ 2017ರ ಅ.5ರಂದು ತಹಶೀಲ್ದಾರ್‌ಗೆ ಆದೇಶಿಸಿದ್ದರು. 2018-19ರಲ್ಲಿ ಆಸ್ತಿಯ ಕಂದಾಯ ದಾಖಲೆಗಳಲ್ಲಿ ವಕ್ಫ್​ ಮಂಡಳಿಯ ಹೆಸರನ್ನು ಜಿಲ್ಲಾಧಿಕಾರಿ ದಾಖಲಿಸಿದ್ದರು.

ನಂತರ ಅರ್ಜಿದಾರರು ಕಂದಾಯ ದಾಖಲೆಗಳಲ್ಲಿ ತಮ್ಮ ಹೆಸರೇ ಹಾಕುವಂತೆ ಕೋರಿ ಮನವಿ ಸಲ್ಲಿಸಿದ್ದರು. ಆದರೆ, ಅದನ್ನು ಅಧಿಕಾರಿಗಳು ಪುರಸ್ಕರಿಸದೇ ಇದ್ದಾಗ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯ ಅವರ ಮನವಿ ಪರಿಗಣಿಸುವಂತೆ ಸೂಚನೆ ನೀಡಿತ್ತು. ಆದರೆ, ಉಪವಿಭಾಗಾಧಿಕಾರಿಯು ಅರ್ಜಿದಾರರ ಮನವಿ ತಿರಸ್ಕರಿಸಿ, ವಕ್ಫ್​ ಕಾಯ್ದೆ ಸೆಕ್ಷನ್‌ 83ರ ಪ್ರಕಾರ ವಕ್ಫ್​ ಟ್ರಿಬ್ಯುನಲ್‌ಗೆ ಅರ್ಜಿ ಸಲ್ಲಿಸುವಂತೆ ಆದೇಶಿಸಿದ್ದರು. ಅವರ ಆದೇಶ ಪ್ರಶ್ನಿಸಿ ಅರ್ಜಿದಾರರು ಮತ್ತೆ ಹೈಕೋರ್ಟ್‌ ಮೊರೆ ಹೋಗಿದ್ದರು.

ಇದನ್ನೂ ಓದಿ:ಪೋಷಕರೇ ಹುಷಾರ್!.. ಅಪ್ರಾಪ್ತ ಮಕ್ಕಳ ಕೈಗೆ ವಾಹನ ಕೊಟ್ಟರೆ ನಿಮಗೆ ಬೀಳಲಿದೆ ದೊಡ್ಡ ಮಟ್ಟದ ದಂಡ! - Court Fined

ABOUT THE AUTHOR

...view details