ದಾವಣಗೆರೆ:ನಿರಂತರವಾಗಿ ಜಿಲ್ಲೆಯಲ್ಲಿ ಮಳೆ ಸುರಿಯುತ್ತಿದ್ದು, ಕೆರೆ ಕಟ್ಟೆಗಳಿಗೆ ಜೀವ ಕಳೆ ಬಂದಿದೆ. ಮಳೆ ಇಲ್ಲದೆ ಸೊರಗಿದ್ದ ಜಿಲ್ಲೆಯ ಹರಿಹರ ತಾಲೂಕಿನ ದೇವರಬೆಳಕೆರೆ ಪಿಕಪ್ ಡ್ಯಾಂಗೆ ಜಲ ರಾಶಿ ಹರಿದು ಬರುತ್ತಿದೆ. ಜೀವಜಲದಿಂದ ನಳನಳಿಸುತ್ತಿರುವ ಡ್ಯಾಂ ಭರ್ತಿಯಾಗಿದ್ದು, ಗೇಟ್ಗಳ ಮೂಲಕ ನೀರು ಹೊರಬಿಡಲಾಗಿದೆ. ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿರುವ ನೀರಿನ ಈ ಮನಮೋಹಕ ದೃಶ್ಯ ಕಣ್ತುಂಬಿಕೊಳ್ಳಲು ಪ್ರವಾಸಿಗರು ಲಗ್ಗೆ ಇಡ್ತಿದ್ದಾರೆ. ಇದು ಒನ್ ಡೇ ಪಿಕ್ನಿಕ್ಗೆ ಹೇಳಿ ಮಾಡಿಸಿದ ಸ್ಥಳ ಕೂಡ ಹೌದು.
ಪಿಕಪ್ ಡ್ಯಾಂ ತುಂಬಿರುವುದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. 20ಕ್ಕೂ ಹೆಚ್ಚು ಹಳ್ಳಿಗಳ ರೈತರಿಗೆ ಆಸರೆಯಾಗಿದೆ ಈ ಡ್ಯಾಂ. ಈ ಜಲಾಶಯದ ಹೆಚ್ಚಿನ ನೀರು ತುಂಗಭದ್ರಾ ನದಿಗೆ ಹರಿಬಿಡಲಾಗಿದೆ. ಗೇಟ್ ಮೂಲಕ ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿರುವ ನೀರು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.
ಏಳು ಗೇಟ್ಗಳ ಮೂಲಕ ನೀರು ಹೊರ ಹೋಗ್ತಿರುವುದು ಜನ್ರನ್ನು ಆಕರ್ಷಿಸುತ್ತಿದೆ. ದುರಂತ ಎಂದರೇ ಈ ಡ್ಯಾಂ ನಿರ್ಮಿಸಿ ಹಲವು ವರ್ಷಗಳೇ ಉರುಳಿದರು ಕೂಡ ಮೂಲಭೂತ ಸೌಕರ್ಯಗಳು ಮಾತ್ರ ಮರೀಚಿಕೆಯಾಗಿವೆ. ಇದಲ್ಲದೆ ಡ್ಯಾಂಗೆ ಭೇಟಿ ನೀಡುವ ಪ್ರವಾಸಿಗರ ಸುರಕ್ಷತೆಗಾಗಿ ತಡೆಗೋಡೆ ಅವಶ್ಯಕತೆ ಇದೆ. ಈಗಾಗಲೇ ಇರುವ ತಡೆಗೋಡೆಗಳು ಸಂಪೂರ್ಣವಾಗಿ ಹಾನಿಯಾಗಿವೆ. ಈ ಮಳೆಗಾಲದಲ್ಲಿ ಸುತ್ತಮುತ್ತಲಿನ ಹಳ್ಳಿಗಳಿಂದ ಹರಿದು ಬರುವ ನೀರು ದೇವರಬೆಳೆಕೆರೆ ಡ್ಯಾಂ ಸೇರುತ್ತದೆ. ಈಗಾಗಲೇ ದೇವರಬೆಳೆಕೆರೆಗೆ ಅಡ್ಡಲಾಗಿ ನಿರ್ಮಿಸಿರುವ ಈ ಡ್ಯಾಂ ಸಾಕಷ್ಟು ನೀರನ್ನು ಹಿಡಿದಿಟ್ಟುಕೊಳ್ಳಲಿದೆ. ಈ ಪಿಕಪ್ ಡ್ಯಾಂ ನಲ್ಲಿ ಹೆಚ್ಚು ಹೂಳು ತುಂಬಿಕೊಂಡಿದ್ದು, ಅದನ್ನು ತೆರವು ಮಾಡ್ಬೇಕೆಂಬುದು ರೈತರ ಒತ್ತಾಯವಾಗಿದೆ.