ಮಂಗಳೂರು:ರಾಜ್ಯದ ಶಾಲಾ ಹಂತಗಳಲ್ಲಿ 'ರಂಗೋತ್ಸವ' ನಡೆಸಲು ಸರ್ಕಾರ ಸೂಚಿಸಿದ್ದು, ಭೂತಾರಾಧನೆಗೂ ಅವಕಾಶ ನೀಡಿ ಸುತ್ತೋಲೆ ಹೊರಡಿಸಿರುವುದಕ್ಕೆ ಕರಾವಳಿಯಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಶಾಲೆಯಲ್ಲಿ ಶಿಕ್ಷಕರು ದಿನನಿತ್ಯದ ದಿನಚರಿಯಲ್ಲಿ ರಂಗೋತ್ಸವ ಕಲೆಯನ್ನು ಸಂಯೋಜಿಸಬೇಕು. ಇದರಲ್ಲಿ ಕಲಾ ಉತ್ಸವ, ಸಂಗೀತ ಸ್ಪರ್ಧೆಸಹಿತವಾಗಿ ಭೂತಾರಾಧನೆ ಮುಂತಾದ ಸಾಂಸ್ಕೃತಿಕ ಚಟುವಟಿಕೆ ಹಮ್ಮಿಕೊಳ್ಳುವುದರ ಮೂಲಕ ಶಾಲೆಗಳಲ್ಲಿ ಸಂತೋಷದಾಯಕ ಕಲಿಕೆಯ ವಾತಾವರಣ ಸೃಷ್ಟಿಸಬೇಕು ಎಂದು ಸರ್ಕಾರ ಹೊರಡಿಸಿರುವ ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ. ಇದು ಕರಾವಳಿಯ ಭೂತಾರಾಧನೆಯನ್ನು ನಂಬಿಕೊಂಡಿರುವವರ ವಿರೋಧಕ್ಕೆ ಕಾರಣವಾಗಿದೆ. ಹಾಗಾಗಿ, ಇದನ್ನು ಪಟ್ಟಿಯಿಂದ ತೆಗೆಯಬೇಕು ಎಂದು ಆಗ್ರಹಿಸಲಾಗುತ್ತಿದೆ.
ಸರ್ಕಾರದ ಸುತ್ತೋಲೆ (ETV Bharat) ಕ್ಷಮೆ ಕೇಳುವಂತೆ ಶಾಸಕ ಕಾಮತ್ ಆಗ್ರಹ:''ರಾಜ್ಯದ ಶಾಲೆಗಳ ರಂಗೋತ್ಸವದಲ್ಲಿ ಬೊಂಬೆಯಾಟ, ಕೋಲಾಟದಂತಹ ಮನೋರಂಜನಾ ಕಲೆಗಳ ಸಾಲಿಗೆ ಸಾವಿರಾರು ವರ್ಷಗಳ ಶ್ರದ್ಧಾ ಭಕ್ತಿಯ ಇತಿಹಾಸ ಹೊಂದಿರುವ ತುಳುನಾಡಿನ ಭೂತಾರಾಧನೆ ಸೇರಿಸಿರುವುದು ಖಂಡನೀಯ. ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ಈ ಆದೇಶವನ್ನು ಹಿಂಪಡೆಯಬೇಕು. ಹಾಗೂ ರಾಜ್ಯ ಸರ್ಕಾರ ಕೂಡಲೇ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸುತ್ತೇನೆ'' ಎಂದು ಶಾಸಕ ವೇದವ್ಯಾಸ ಕಾಮತ್ ಎಕ್ಸ್ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತುಳು ಅಕಾಡೆಮಿಯಿಂದ ಪತ್ರ:ರಂಗೋತ್ಸವ ಕಾರ್ಯಕ್ರಮದ ಪಟ್ಟಿಯಿಂದ ಭೂತಾರಾಧನೆಯ ಉಲ್ಲೇಖವನ್ನು ಕೈಬಿಡುವಂತೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಯೋಜನಾ ನಿರ್ದೇಶಕರಿಗೆ ಪತ್ರದ ಮೂಲಕ ಆಗ್ರಹಿಸಿದ್ದಾರೆ.
ರಂಗೋತ್ಸವದ ಸಲುವಾಗಿ ನೀಡಲಾಗಿರುವ ಪಟ್ಟಿಯಲ್ಲಿ ಭೂತಾರಾಧನೆಯನ್ನು ಉಲ್ಲೇಖಿಸಿರುವುದು ಸರಿಯಾದ ನಡೆಯಲ್ಲ. ಭೂತಾರಾಧನೆಯು ಕರಾವಳಿಯ ಅತ್ಯುನ್ನತ ಸಾಂಸ್ಕೃತಿಕ ಹಾಗೂ ಆರಾಧನಾ ಪರಂಪರೆ. ಆದರೆ ಭೂತಾರಾಧನೆಯನ್ನು ಸಾಂಸ್ಕೃತಿಕ ಸ್ಪರ್ಧೆಯ ಭಾಗವಾಗಿ ಪರಿಗಣಿಸುವುದು ಸೂಕ್ತವಲ್ಲ. ಆರಾಧನಾ ಪ್ರಕಾರವನ್ನು ಸ್ಪರ್ಧಾ ವೇದಿಕೆಗೆ ತಂದಾಗ ನಂಬಿಕೆಗೆ ಘಾಸಿಯಾಗುವುದು ಸಹಜ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ದೈವಾರಾಧಕ ತಮ್ಮಣ್ಣ ಶೆಟ್ಟಿ (ETV Bharat) ಈ ಬಗ್ಗೆ ಮಾತನಾಡಿರುವ ದೈವಾರಾಧಕರಾದ ತಮ್ಮಣ್ಣ ಶೆಟ್ಟಿ, ''ಈಗಾಗಲೇ ದೈವಾರಾಧನೆಯನ್ನು ವ್ಯಾಪಾರಕ್ಕಾಗಿ, ಸ್ವಾರ್ಥಕ್ಕಾಗಿ ಬಳಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡಲೇ ಇದನ್ನು ರದ್ದುಪಡಿಸಬೇಕು. ಜಿಲ್ಲೆಯ ಶಾಸಕರು, ಸಂಸದರು ಇದನ್ನು ಆಗದಂತೆ ನೋಡಿಕೊಳ್ಳಬೇಕಿತ್ತು. ಶಾಲಾ ರಂಗೋತ್ಸವದಲ್ಲಿ ಭೂತಾರಾಧನೆ ಮಾಡಿಸುವ ಬದಲಿಗೆ ಕರಾವಳಿಯ ದೈವಾರಾಧನೆಯ ಬಗ್ಗೆ ಪಠ್ಯಪುಸ್ತಕದಲ್ಲಿ ಪಾಠ ಸೇರಿಸುವುದು ಸೂಕ್ತ. ರಂಗೋತ್ಸವದಲ್ಲಿ ಭೂತಾರಾಧನೆ ಮಾಡಲು ಸೂಚಿಸಿರುವುದು, ವೇಷ ಧರಿಸಿ ಭೂತಾರಾಧನೆ ಮಾಡುವ ಮೂರು ಜನಾಂಗಕ್ಕೆ ಮಾಡಿರುವ ದ್ರೋಹ" ಎಂದು ಹೇಳಿದ್ದಾರೆ.
ಇದನ್ನೂ ಓದಿ:ಸ್ಟೆರಿಲಿಟಿ ಟೆಸ್ಟ್ನಲ್ಲಿ ಫೇಲ್: 9 ಔಷಧಗಳ ನಿರ್ಬಂಧಿಸುವಂತೆ ಕೇಂದ್ರಕ್ಕೆ ಸಚಿವ ಗುಂಡೂರಾವ್ ಪತ್ರ