ಕರ್ನಾಟಕ

karnataka

ETV Bharat / state

ಹವಾಮಾನ ಇಲಾಖೆ ಮುನ್ಸೂಚನೆ: ಬೆಂಗಳೂರಲ್ಲಿ ಸಾಧಾರಣ ಮಳೆ ಸಾಧ್ಯತೆ, ಕೆಲ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ - Orange alert in coastal - ORANGE ALERT IN COASTAL

ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮುಂಗಾರು ಮಳೆ ಮುಂದುವರೆದಿರುವುದರಿಂದ ಅಲ್ಲಿನ ಮೂರು ಜಿಲ್ಲೆಗಳಿಗೆ ಎರಡು ದಿನಗಳವರೆಗೆ ಆರೆಂಜ್ ಅಲರ್ಟ್​ ನೀಡಲಾಗಿದೆ.

orange-alert
ಆರೆಂಜ್ ಅಲರ್ಟ್ (ಹವಮಾನ ಇಲಾಖೆ)

By ETV Bharat Karnataka Team

Published : Aug 30, 2024, 6:58 PM IST

ಬೆಂಗಳೂರು:ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮುಂಗಾರು ಮಳೆ ಮುಂದುವರೆದಿದೆ. ಈ ಹಿನ್ನೆಲೆ ಅಲ್ಲಿನ ಮೂರೂ ಜಿಲ್ಲೆಗಳಿಗೆ ಎರಡು ದಿನಗಳ ಕಾಲ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಇಂದು ಸಂಜೆಯಿಂದ 48 ಗಂಟೆಗಳ ಕಾಲ ಆರೆಂಜ್ ಅಲರ್ಟ್ ನೀಡಲಾಗಿದೆ. ಇನ್ನು ಉತ್ತರ ಒಳನಾಡಿನ ಕಲಬುರ್ಗಿ, ರಾಯಚೂರು, ಯಾದಗಿರಿ ಜಿಲ್ಲೆಗಳಿಗೆ ಮತ್ತು ಮಲೆನಾಡಿನ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಿಗೆ ಮುಂದಿನ 24 ಗಂಟೆಗಳ ಕಾಲ ಆರೆಂಜ್ ಮತ್ತು ನಂತರದ ಒಂದು ದಿನ ಯೆಲ್ಲೋ ಅಲರ್ಟ್ ಕೊಡಲಾಗಿದೆ. ಉಳಿದಂತೆ ವಿಜಯಪುರ, ಹಾಸನ ಮತ್ತು ಕೊಡಗು ಜಿಲ್ಲೆಗೆ ಎರಡೂ ದಿನ ಯೆಲ್ಲೋ ಅಲರ್ಟ್ ನೀಡಲಾಗಿದೆ.

ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದ್ದು, ಪ್ರತಿ ಗಂಟೆಗೆ 35 ರಿಂದ 45 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಇನ್ನು ಬೆಳಗಾವಿ, ಹಾಸನ, ಕೊಡಗು ಜಿಲ್ಲೆಗಳಲ್ಲಿ ಸಹ ಗಾಳಿ ಮಳೆಯಾಗಲಿದೆ. ಉಳಿದಂತೆ ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಬಳ್ಳಾರಿ, ಬೆಣಲೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಬೀಳುವ ಸಂಭವ ಹೆಚ್ಚಿದೆ. ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಮಧ್ಯಮ ಮಳೆ ಮತ್ತು ನಿರಂತರ ಗಾಳಿ ಇರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಮೀನುಗಾರರಿಗೆ ಎಚ್ಚರಿಕೆ: ಕರಾವಳಿ ಕರ್ನಾಟಕದಲ್ಲಿ ಗಾಳಿಯ ವೇಗ 45 ರಿಂದ 55 ಕಿ. ಮೀ ಇರಲಿದೆ. ಗಾಳಿಯು ಕರ್ನಾಟಕ ಕರಾವಳಿಯ ಉದ್ದಕ್ಕೂ ಮತ್ತು ಹೊರಗೆ ಚಾಲ್ತಿಯಲ್ಲಿರಲಿದೆ. ಹೀಗಾಗಿ ಮೀನುಗಾರರಿಗೆ ಎಚ್ಚರಿಕೆಯ ಸಂದೇಶವನ್ನು ಹವಾಮಾನ ಇಲಾಖೆ ನೀಡಿದೆ.

ಸಿಲಿಕಾನ್ ಸಿಟಿಯಲ್ಲಿ ಸಾಧಾರಣ ಮಳೆ: ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಮುಂದಿನ 48 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ಆಕಾಶ ಇರಲಿದೆ. ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ನಿರಂತರ ಗಾಳಿ ಬೀಸಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 27 ಡಿಗ್ರಿ ಮತ್ತು 20 ಡಿಗ್ರಿ ದಾಖಲಾಗಲಿದೆ ಎಂದಿದೆ.

ಧರ್ಮಸ್ಥಳದಲ್ಲಿ ಅತಿ ಹೆಚ್ಚು ಮಳೆ:ನಿನ್ನೆಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ಅತಿ ಹೆಚ್ಚು 6 ಸೆ. ಮೀ ಮಳೆಯಾಗಿದೆ. ಇನ್ನು ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿ 5 ಸೆ. ಮೀ ಮಳೆ ದಾಖಲಾಗಿದೆ. ಭಾಗಮಂಡಲ (ಕೊಡಗು ಜಿಲ್ಲೆ) ಮತ್ತು ಬೆಂಗಳೂರು ಹೆಚ್​ಎಎಲ್ ವೀಕ್ಷಣಾಲಯದಲ್ಲಿ (ಬೆಂಗಳೂರು ನಗರ ಜಿಲ್ಲೆ) 4 ಸೆ ಮೀ ಮಳೆ ಸುರಿದಿದೆ. ಬೆಳ್ತಂಗಡಿ (ದಕ್ಷಿಣ ಕನ್ನಡ ಜಿಲ್ಲೆ), ಉಡುಪಿ (ಉಡುಪಿ ಜಿಲ್ಲೆ), ಕದ್ರಾ (ಉತ್ತರ ಕನ್ನಡ ಜಿಲ್ಲೆ), ಮಂಕಿ (ಉತ್ತರ ಕನ್ನಡ ಜಿಲ್ಲೆ), ಸಿದ್ದಾಪುರ (ಉಡುಪಿ ಜಿಲ್ಲೆ), ಕೊಪ್ಪ (ಚಿಕ್ಕಮಗಳೂರು ಜಿಲ್ಲೆ), ಬೆಂಗಳೂರು ನಗರ ವೀಕ್ಷಣಾಲಯದಲ್ಲಿ (ಬೆಂಗಳೂರು ನಗರ ಜಿಲ್ಲೆ) 3 ಸೆ. ಮೀ ಮಳೆ ದಾಖಲಾಗಿದೆ.

'ಮುಂಗಾರು ಮಾರುತಗಳು ಸರಾಸರಿ ಸಮುದ್ರ ಮಟ್ಟದಲ್ಲಿ ಕಡಲಾಚೆಯ ಟ್ರಫ್ ಈಗ ದಕ್ಷಿಣ ಗುಜರಾತ್‌ನಿಂದ ಕೇರಳ ತೀರದವರೆಗೆ ಸಾಗುತ್ತಿದೆ. ನೈಋತ್ಯ ಮಾನ್ಸೂನ್ ಕರಾವಳಿ ಕರ್ನಾಟಕ ಮತ್ತು ದಕ್ಷಿಣ ಒಳನಾಡಿನಲ್ಲಿ ಸಾಮಾನ್ಯವಾಗಿದ್ದು, ಉತ್ತರ ಒಳನಾಡು ಮೇಲೆ ದುರ್ಬಲವಾಗಿದೆ. ಇಂದು ಕರಾವಳಿ ಕರ್ನಾಟಕದ ಹೆಚ್ಚಿನ ಸ್ಥಳಗಳಲ್ಲಿ, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡು ಮೇಲೆ ಪ್ರತ್ಯೇಕ ಸ್ಥಳಗಳಲ್ಲಿ ಮಳೆಯಾಗಿದೆ' ಎಂದು ಬೆಂಗಳೂರು ಹವಾಮಾನ ಕೇಂದ್ರದ ನಿರ್ದೇಶಕ ಸಿ. ಎಸ್ ಪಾಟೀಲ್ ಹೇಳಿದ್ದಾರೆ.

ಇದನ್ನೂ ಓದಿ :ಮುಂಗಾರು ಮಳೆಯ ಅಬ್ಬರ; ಮಲೆನಾಡು, ಕರಾವಳಿ ಜಿಲ್ಲೆಗಳಿಗೆ ಮತ್ತೆ ಎರಡು ದಿನ ಹೈಅಲರ್ಟ್ - Monsoon Rain

ABOUT THE AUTHOR

...view details