ಕರ್ನಾಟಕ

karnataka

ಬಿಎಸ್​ವೈ ರಾಜೀನಾಮೆ ಕೊಟ್ಟು ಮಾದರಿಯಾಗಿದ್ರು, ನೀವೂ ಅದೇ ರೀತಿ ಮಾಡಿ: ಆರ್.ಅಶೋಕ್ - R Ashok

By ETV Bharat Karnataka Team

Published : Aug 18, 2024, 8:10 PM IST

ಈ ಹಿಂದೆ ಕಾನೂನಿಗೆ ತಲೆಬಾಗಿ ಯಡಿಯೂರಪ್ಪನವರು ರಾಜೀನಾಮೆ ಕೊಟ್ಟು ಮಾದರಿಯಾದರು. ಅದೇ ರೀತಿ ನೀವೂ ಮಾಡಿ ಎಂದು ಸಿಎಂ ಸಿದ್ದರಾಮಯ್ಯಗೆ ವಿಪಕ್ಷ ನಾಯಕ ಆರ್​.ಅಶೋಕ್​ ಸಲಹೆ ನೀಡಿದ್ದಾರೆ.

ವಿಪಕ್ಷ ನಾಯಕ ಆರ್​, ಅಶೋಕ್​
ಪ್ರತಿಪಕ್ಷ ನಾಯಕ ಆರ್​.ಅಶೋಕ್​ (ETV Bharat)

ಬೆಂಗಳೂರು: ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ಕೊಟ್ಟಾಗ ರಾಜೀನಾಮೆ ಕೊಡಿ ಅಂತ ಸಿದ್ದರಾಮಯ್ಯ ಆಗ್ರಹಿಸಿದ್ದರು. ಈಗ ಅದೇ ಸಿದ್ದರಾಮಯ್ಯ ರಾಜೀನಾಮೆಗೆ ನಿರಾಕರಿಸಿದ್ದಾರೆ. ಹಾಗಾಗಿ ಅವರು ರಾಜೀನಾಮೆ ಕೊಡಲಿ ಎಂದು ಒತ್ತಾಯಿಸಿ ನಾಳೆ ನಾವು 11.30ಕ್ಕೆ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ಮಾಡುತ್ತೇವೆ. ಜೆಡಿಎಸ್ ಶಾಸಕರನ್ನೂ ಕಳಿಸುವಂತೆ ಕುಮಾರಸ್ವಾಮಿ ಜೊತೆ ಮಾತನಾಡಿದ್ದೇನೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದರು.

ಮಲ್ಲೇಶ್ವರದಲ್ಲಿರುವ ಪಕ್ಷದ ಕಚೇರಿ ಜಗನ್ನಾಥ ಭವನದಲ್ಲಿಂದು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಕಳೆದ 15 ತಿಂಗಳ ಆಡಳಿತದ ನಡಿಗೆ ಭ್ರಷ್ಟಾಚಾರದ ಕಡೆಗೆ ಇತ್ತು. ಕಾಂಗ್ರೆಸ್ ನಡಿಗೆ ಭ್ರಷ್ಟಾಚಾರದ ಕಡೆಗೆ ಅಂತ ರಾಜ್ಯದ ಜನ ಮಾತನಾಡುತ್ತಿದ್ದಾರೆ. ಜನರ ನಿರೀಕ್ಷೆಯನ್ನು ಈ ಸರ್ಕಾರ ಹುಸಿಗೊಳಿಸಿದೆ. ಭ್ರಷ್ಟಾಚಾರ, ದಲಿತರ ಸಾವು, ಅಕ್ರಮಗಳೇ ಗ್ಯಾರಂಟಿ ಆಗಿಹೋಗಿದೆ. ಸಿದ್ದರಾಮಯ್ಯ ತಾವು ಕ್ಲೀನ್ ಕ್ಲೀನ್ ಅಂತಾರೆ, ಅದೇನು ಕ್ಲೀನೋ?. ಕಳೆದ ಸಲ‌ ಸಿದ್ದರಾಮಯ್ಯ ವಿರುದ್ಧ 65 ಕೇಸ್ ಇದ್ವು, ಅವುಗಳನ್ನೆಲ್ಲ ಎಸಿಬಿ ಮೂಲಕ ಮುಚ್ಚಿಹಾಕಿಸಿದರು ಎಂದು ಟೀಕಿಸಿದರು.

ರಾಜ್ಯಪಾಲರು ಪ್ರಾಸಿಕ್ಯೂಷನ್​ಗೆ ಅನುಮತಿ ಕೊಟ್ಟಿದ್ದನ್ನು ಕಾಂಗ್ರೆಸ್‌ನವರು ಸ್ವಾಗತ ಮಾಡಬೇಕಿತ್ತು. ಅವರು ತಾವು ಕ್ಲೀನ್ ಅಂತಾರಲ್ಲ, ತನಿಖೆ ನಡೆಯಲಿ ಅಂತ ಸ್ವಾಗತ ಮಾಡಬೇಕಿತ್ತು. ನಾಳೆ ಕಾಂಗ್ರೆಸ್‌ನವರು ಹೋರಾಟಕ್ಕೆ ಕರೆ ಕೊಟ್ಟಿದ್ದಾರೆ. ವಿಧಾನಸೌಧದಲ್ಲಿ ಮುಡಾ ಚರ್ಚೆ ಮಾಡದೇ ಓಡಿ ಹೋದರು. ಆಗಲೇ ಜನಕ್ಕೆ ಅನುಮಾನ ಬಂತು. ರಾಜ್ಯಪಾಲರು ಕಾನೂನು ತಜ್ಞರ ಜೊತೆ ಚರ್ಚಿಸಿ ಅನುಮತಿ ಕೊಟ್ಟಿದ್ದಾರೆ ಎಂದರು.

ರಾಜ್ಯಪಾಲರ ವಿರುದ್ಧ ಇಡೀ ಕಾಂಗ್ರೆಸ್ ಎದ್ದು ನಿಂತಿದೆ. ಯಡಿಯೂರಪ್ಪ ಪ್ರಾಸಿಕ್ಯೂಷನ್ ವೇಳೆ ನಮ್ಮ ಹೈಕಮಾಂಡ್ ರಾಜೀನಾಮೆ ಕೊಡಲು ಹೇಳಿದ್ದರು, ತನಿಖೆ ಎದುರಿಸಿ ಹೊರಗೆ ಬನ್ನಿ, ಆ ವಿಶ್ವಾಸ ಇದೆ ಅಂದರು. ಆದರೆ ಈಗ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಪರ ನಿಂತಿದೆ. ಯಾವ ನೈತಿಕತೆ ಇಟ್ಕೊಂಡು ಸಿದ್ದರಾಮಯ್ಯ ಪರ ನಿಲ್ತಾರೆ ಎಂದು ಪ್ರಶ್ನಿಸಿದರು.

2011ರಲ್ಲೂ ಖಾಸಗಿ ವ್ಯಕ್ತಿ ದೂರಿನ ಮೇಲೆ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿದ್ದರು. ಈಗ ಕಾಂಗ್ರೆಸ್ ಹೈಕಮಾಂಡ್ ರಾಜೀನಾಮೆ ನೀಡುವಂತೆ ಸಿಎಂಗೆ ಹೇಳಬೇಕು. ಹಿಂದೆ ನಮ್ಮ ವರಿಷ್ಠ ನಾಯಕ ಎಲ್.ಕೆ.ಅಡ್ವಾನಿ ಅವರ ಮೇಲೆ ಸಣ್ಣ ಆರೋಪ ಬಂದಿದ್ದಕ್ಕೆ ಅವರು ರಾಜೀನಾಮೆ ಕೊಟ್ಟರು. ಅಂತಹ ಪರಂಪರೆ ನಮ್ಮ ದೆಹಲಿ ನಾಯಕರದ್ದು ಆದರೆ ರಾಹುಲ್ ಗಾಂಧಿ ಅವರ ಮೇಲೆ ಕೇಸ್ ಇದೆ ಎಂದರು.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಗರಣ ಆಗಿರೋದನ್ನ ಒಪ್ಪಿದಾರೆ. ಮುಡಾ ಹಗರಣ ವಿಚಾರದಲ್ಲಿ ನಾನು ಯಾವುದಕ್ಕೂ ಸಹಿ ಹಾಕಿಲ್ಲ ಎಂದಿದ್ದಾರೆ. ಕದ್ದ ಮಾಲು ನಿಮ್ಮ ಬಳಿ ಇದೆ, ಇದಕ್ಕಿಂತ ಸಾಕ್ಷಿ ಏನು ಬೇಕು. 62 ಕೋಟಿ ಪರಿಹಾರ ಕೊಡಿ ಎಂದಿದ್ದಾರೆ. ಕಾನೂನಿಗೆ ತಲೆಬಾಗಿ ಯಡಿಯೂರಪ್ಪನವರು ರಾಜೀನಾಮೆ ಕೊಟ್ಟು ಮಾದರಿ ಆದರು, ಅದೇ ರೀತಿ ನೀವು ಮಾಡಿ ಎಂದು ಕಿವಿಮಾತು ಹೇಳಿದರು.

ಇದನ್ನೂ ಓದಿ:ಸಿಎಂ ವಿರುದ್ಧ ತನಿಖೆಗೆ ರಾಜ್ಯಪಾಲರ ಅನುಮತಿ: ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದೇನು? - MUDA Scam

ABOUT THE AUTHOR

...view details