ಕರ್ನಾಟಕ

karnataka

ETV Bharat / state

ಸಿಎಂ, ಡಿಸಿಎಂಗೆ ಟಿಪ್ಪು ದೆವ್ವ ಹಿಡಿದಿದೆ, ಅದಕ್ಕೆ ಸರಿಯಾದ ಶಾಸ್ತಿ: ಆರ್.ಅಶೋಕ್ - R ASHOK

ಸಿಎಂ, ಡಿಸಿಎಂಗೆ ಟಿಪ್ಪು ದೆವ್ವ ಮೆಟ್ಟಿಕೊಂಡಿದೆ. ಮಂತ್ರ ಊದಿ ಇವರಿಗೆ, ಇವರ ಸರ್ಕಾರಕ್ಕೆ ಹತ್ತಿರುವ ಟಿಪ್ಪು ದೆವ್ವ ಬಿಡಿಸಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.

ಆರ್.ಅಶೋಕ್
ಆರ್.ಅಶೋಕ್ (ETV Bharat)

By ETV Bharat Karnataka Team

Published : Oct 29, 2024, 6:49 PM IST

ಬೆಂಗಳೂರು: "ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಟಿಪ್ಪು ದೆವ್ವ ಹಿಡಿದಿದೆ. ಈ ದೆವ್ವಕ್ಕೆ ಜನ ಸರಿಯಾದ ಶಾಸ್ತಿ ಮಾಡಬೇಕು" ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.‌

ವಿಧಾನಸೌಧದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಸಿಎಂ, ಡಿಸಿಎಂಗೆ ಟಿಪ್ಪು ದೆವ್ವ ಮೆಟ್ಟಿಕೊಂಡಿದೆ. ಮಂತ್ರ ಊದಿ ಇವರಿಗೆ, ಇವರ ಸರ್ಕಾರಕ್ಕೆ ಹತ್ತಿರುವ ಟಿಪ್ಪು ದೆವ್ವ ಬಿಡಿಸಬೇಕು. ಹಿಂದೂಗಳನ್ನು ಎರಡನೇ ದರ್ಜೆಯ ಪ್ರಜೆಗಳಾಗಿ ಪರಿಗಣಿಸಲಾಗಿದೆ. ಇದರ ವಿರುದ್ಧ ಹೋರಾಟ ಮಾಡಬೇಕಿದೆ. ಇಲ್ಲವಾದರೆ ವಿಧಾನಸೌಧ, ಸಂಸತ್ತು, ಬಳಿಕ ದೇವಸ್ಥಾನಗಳನ್ನೂ ವಕ್ಫ್‌ ಆಸ್ತಿ ಎನ್ನುತ್ತಾರೆ" ಎಂದು ಟೀಕಿಸಿದರು.‌

"ರಾಜ್ಯದಲ್ಲಿ ಲವ್‌ ಜಿಹಾದ್‌ನಂತೆಯೇ, ವಕ್ಫ್‌ ಬೋರ್ಡ್‌ನಿಂದ ಲ್ಯಾಂಡ್‌ ಜಿಹಾದ್‌ ನಡೆಯುತ್ತಿದೆ. ಭೂಮಿಯನ್ನು ಹೇಗೆ ಕಬಳಿಸಬೇಕೆಂದು ಸಚಿವ ಜಮೀರ್‌ ಅಹ್ಮದ್‌ ಯೋಜನೆ ರೂಪಿಸಿದ್ದಾರೆ. ಇನ್ನೂ ಕೆಲವರು ಸಂಸತ್ತು ನಮ್ಮದು, ವಿಧಾನಸೌಧವೂ ನಮ್ಮದು ಎಂದಿದ್ದಾರೆ. ಮುಸ್ಲಿಂ ಮತಾಂಧರ ವಿರುದ್ಧ ಇದ್ದ ಕೇಸು ವಾಪಸ್‌ ಪಡೆಯುವುದು, ಭಯೋತ್ಪಾದನೆ, ಪಾಕಿಸ್ತಾನಕ್ಕೆ ಜೈಕಾರ ಮೊದಲಾದವುಗಳಿಗೆ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ" ಎಂದು ದೂರಿದರು.

"ವಕ್ಫ್‌ ಬೋರ್ಡ್‌ ರೈತರ ಜಮೀನುಗಳನ್ನು ಕಬಳಿಸುತ್ತಿದೆ. ಇದು ಭಾರತಕ್ಕೆ ಸೇರಿದ ಆಸ್ತಿ. ಕಂಡ ಜಮೀನುಗಳೆಲ್ಲ ತಮ್ಮದೇ ಎಂದು ಇವರು ಹೇಳುತ್ತಿದ್ದಾರೆ. ಕೆಲವು ಮತಾಂಧ ಅಧಿಕಾರಿಗಳು ಖಬರ್‌ಸ್ತಾನ, ವಕ್ಫ್‌ ಬೋರ್ಡ್‌ ಆಸ್ತಿ ಎಂದು ದಾಖಲೆ ಸೃಷ್ಟಿಸುತ್ತಿದ್ದಾರೆ. ಈ ಮೂಲಕ ರೈತರ ಅನ್ನ ಕೀಳುವ ಕೆಲಸ ಮಾಡುತ್ತಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.

"ಕಾಂಗ್ರೆಸ್‌ ಸರ್ಕಾರ ತುಷ್ಟೀಕರಣ ಮಾಡುತ್ತಿರುವುದರಿಂದಲೇ ಭಯೋತ್ಪಾದನೆ, ಮತಾಂಧತೆ ನಡೆಯುತ್ತಿದೆ. ಹಿಂದೂಗಳು ಗಣೇಶನ ಮೂರ್ತಿಯ ಮೆರವಣಿಗೆ ಕೂಡ ಮಾಡುವಂತಿಲ್ಲ. ಸಂಜೆಯಿಂದ ರಾತ್ರಿಯವರೆಗೆ ಪಟಾಕಿ ಸಿಡಿಸಲು ಅವಕಾಶವಿದೆ. ಆದರೆ ಹಸಿರು ಪಟಾಕಿ ಮಾತ್ರ ಸಿಡಿಸಬೇಕು, ಅದು ಕೂಡ ಎರಡು ಗಂಟೆ ಮಾತ್ರ ಎಂದು ಕಾಂಗ್ರೆಸ್‌ ಸರ್ಕಾರ ನಿಯಮ ವಿಧಿಸಿದೆ. ವಕ್ಫ್‌ ಆಸ್ತಿಗಳನ್ನು ದೊಡ್ಡ ದೊಡ್ಡ ನಾಯಕರು ನುಂಗಿದ್ದಾರೆ. ಈ ಕುರಿತ ವರದಿಯನ್ನು ಹಿಂದೆ ವಿಧಾನ ಪರಿಷತ್‌ನಲ್ಲಿ ಮಂಡಿಸಲಾಗಿತ್ತು. ಕಾಂಗ್ರೆಸ್‌ ಸರ್ಕಾರ ಈಗ ಆ ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸಲಿ" ಎಂದರು.

"ಕಾಂಗ್ರೆಸ್ ಸರ್ಕಾರ ಬಂದರೆ ಮತಾಂಧ ಶಕ್ತಿಗಳಿಗೆ ಪ್ರೋತ್ಸಾಹ ನೀಡುವುದು. ಲವ್ ಜಿಹಾದ್ ಮಾಡುವುದು. ಪಾಕಿಸ್ತಾನ ಜಿಂದಾಬಾದ್ ಘೋಷಣೆಗೆ ಉತ್ತೇಜನ ನೀಡುತ್ತೆ. ವಕ್ಫ್ ಆಸ್ತಿ ಲೂಟಿ ಮಾಡಿರುವುದು ಮುಸ್ಲಿಂ ನಾಯಕರೇ. ಅದರ ವರದಿನೂ ಇದೆ. ಈ ಬಗ್ಗೆ ಸಿಎಂ ಬಾಯಿ ಬಿಟ್ಟಿದ್ದೀರಾ. ಸ್ವಲ್ಪ ಬಾಯಿ ಬಿಡಿ. ಯಾದಗಿರಿ, ಧಾರವಾಡ ಕಡೆನೂ ಈ ಸಮಸ್ಯೆ ಇದೆ. ಇವರೆಲ್ಲ ಇರಾಕ್‌, ಇರಾನ್‌ನಿಂದ ಭೂಮಿ ತಂದಿದ್ದಾರೆ. ಇದು ಭಾರತದ ಆಸ್ತಿ‌. ಜೆಸಿಬಿಯಲ್ಲಿ ಭೂಮಿ ಎತ್ತಿಕೊಂಡು ಬಂದಿದ್ದರೆ ಕೇಳಲಿ. ಸಿಕ್ಕ ಎಲ್ಲಾ ಆಸ್ತಿ ನಮ್ಮದೇ ಅಂದ್ರೆ ಹೇಗೆ?. ಕೆಲ ಮತಾಂಧ ಅಧಿಕಾರಿಗಳು ಇದ್ದಾರೆ. ಕಾಂಗ್ರೆಸ್ ಬಂದಾಗ ಇದೊಂದು ಛಾಳಿ. ಬಿಜೆಪಿ ಅವಧಿಯಲ್ಲಿ ರೈತರಿಗೆ ನೋಟಿಸ್​ ನೀಡಿದ್ದರೆ ಅವರನ್ನು ಜೈಲಿಗೆ ಹಾಕಿ. ನಿಮ್ಮ ಚಿತಾವಣೆಯಿಂದ ಕೋಮು ಗಲಭೆ, ವಕ್ಫ್ ಆಸ್ತಿ ಹೇಳಿ ರೈತರ ಆಸ್ತಿ ನುಂಗುತ್ತಿದ್ದೀರಿ. ಹೋರಾಟ ಮಾಡಿ ರೈತರ ಭೂಮಿ ವಾಪಸ್ ಮಾಡುವ ತನಕ ಬಿಡಲ್ಲ" ಎಂದರು.

ವಿಳಂಬ ಮಾಡದೆ ಒಳಮೀಸಲಾತಿ ಜಾರಿಗೊಳಿಸಿ:"ಕಾಂಗ್ರೆಸ್‌ ಸರ್ಕಾರ ಒಳಮೀಸಲಾತಿಯನ್ನು ಕೂಡಲೇ ಜಾರಿ ಮಾಡಿ ಅನ್ಯಾಯಕ್ಕೊಳಗಾದ ಸಮುದಾಯಗಳಿಗೆ ನ್ಯಾಯ ನೀಡಬೇಕು. ಕಾಂಗ್ರೆಸ್‌ ಸರ್ಕಾರ ಒಳಮೀಸಲಾತಿ ವಿಚಾರದಲ್ಲಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಒಳಮೀಸಲಾತಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ ಮಲ್ಲಿಕಾರ್ಜುನ ಖರ್ಗೆ, ಡಾ.ಜಿ.ಪರಮೇಶ್ವರ ಸೇರಿದಂತೆ ರಾಜ್ಯದ ಕಾಂಗ್ರೆಸ್‌ ನಾಯಕರಿಗೆ ಇದು ಜಾರಿಯಾಗಲು ಇಷ್ಟವಿಲ್ಲ. ಎಲ್ಲ ಅವಕಾಶವಿದ್ದರೂ ಮತ್ತೆ ಆಯೋಗ ರಚಿಸಿ, ಮೂರು ತಿಂಗಳವರೆಗೆ ಕಾಯಲು ನಿರ್ಧರಿಸಲಾಗಿದೆ. ಇನ್ನು ಜನಗಣತಿ ಆರಂಭವಾದರೆ ಆಗ ಮತ್ತೊಂದು ಸಬೂಬು ಹೇಳಬಹುದು. ಜನರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ" ಎಂದರು.

ಇದನ್ನೂ ಓದಿ:ವಿಜಯಪುರದಲ್ಲಿ ಯಾವ ರೈತರನ್ನೂ ಒಕ್ಕಲೆಬ್ಬಿಸುವುದಿಲ್ಲ: ಸಿಎಂ ಅಭಯ

ABOUT THE AUTHOR

...view details