ಬೆಂಗಳೂರು: ದೇಶಕ್ಕೆ ಸ್ವಾತ್ರಂತ್ಯ ತಂದುಕೊಟ್ಟವರು ಮಹಾತ್ಮ ಗಾಂಧೀಜಿ. ಅವರೇ ನಿಜವಾದ ಗಾಂಧಿ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಇವರೆಲ್ಲಾ ನಕಲಿ ಗಾಂಧಿಗಳು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಲೇವಡಿ ಮಾಡಿದರು.
ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ ಕಾನೂನು ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದರೂ, ಸರ್ಕಾರ ಸಮಾವೇಶ ಮಾಡುತ್ತಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಇವರೆಲ್ಲಾ ಸ್ವಾತಂತ್ರ್ಯ ಹೋರಾಟ ಮಾಡಿದ್ದಾರಾ? ಬೆಳಗಾವಿ ಕಾರ್ಯಕ್ರಮ ನಕಲಿ ಗಾಂಧಿಗಳ ಸಮಾವೇಶ ಎಂದು ಕಿಡಿಕಾರಿದರು.
ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕೊಯ್ದ ಘಟನೆ ಮಾಸುವ ಮುನ್ನವೇ, ಹೊನ್ನಾವರದಲ್ಲಿ ಕೂಡ ಗರ್ಭಿಣಿ ಹಸುವನ್ನು ಭೀಕರವಾಗಿ ಕೊಲ್ಲಲಾಗಿದೆ. ಕರ್ನಾಟಕದಲ್ಲಿ ಗೋವುಗಳಿಗೆ ರಕ್ಷಣೆ ಇಲ್ಲ ಎಂಬುದು ಸಾಬೀತಾಗಿದೆ. ಇದು ಕಿವುಡ ಮತ್ತು ಕುರುಡು ಸರ್ಕಾರ. ರಾಜ್ಯದಲ್ಲಿ ಗೃಹ ಸಚಿವರು ಯಾರು ಎನ್ನುವುದೇ ಗೊತ್ತಾಗುತ್ತಿಲ್ಲ. ಎಲ್ಲ ಸಚಿವರು ಗೃಹ ಇಲಾಖೆಯಲ್ಲಿ ಕೈಯಾಡಿಸುತ್ತಿದ್ದಾರೆ. ಭ್ರಷ್ಟಾಚಾರ ಹಾಗೂ ಲಂಚಾವತಾರ ಮಿತಿ ಮೀರಿದೆ. ಶೇ.60 ರಷ್ಟು ಕಮಿಷನ್ ಕೊಟ್ಟರೆ ಮಾತ್ರ ಈ ಸರ್ಕಾರದಲ್ಲಿ ಫೈಲ್ ಮುಂದೆ ಹೋಗುತ್ತದೆ ಎಂದು ಆರೋಪಿಸಿದರು.
ವಿಜಯಪುರಲ್ಲಿ ಕಾರ್ಮಿಕರನ್ನು ನಡುರಸ್ತೆಯಲ್ಲಿಯೇ ಥಳಿಸುತ್ತಿರುವ ಹೃದಯವಿದ್ರಾವಕ ಘಟನೆಯನ್ನು ಮಾಧ್ಯಮದಲ್ಲಿ ನೋಡಿದೆ. ಬೀದಿಯಲ್ಲೇ ನಿಂತು ರಾಜಾರೋಷವಾಗಿ ಹೊಡೆಯುತ್ತಿದ್ದಾರೆ ಎಂದರೆ ರಾಜ್ಯದಲ್ಲಿರುವ ದರೋಡೆಕೋರರಿಗೆ, ರೌಡಿಗಳಿಗೆ ಪೊಲೀಸರ ಬಗ್ಗೆ ಏನು ಸಂದೇಶ ಹೋಗುತ್ತಿದೆ? ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಿಲ್ಲ ಎಂಬುದಕ್ಕೆ ಇದು ಉದಾಹರಣೆ. ಹಾಡಹಗಲೇ ಬ್ಯಾಂಕ್ ದರೋಡೆ ನಡೆಯುತ್ತಿದೆ. ಇಷ್ಟೆಲ್ಲಾ ಆದರೂ ರಾಜ್ಯ ಸರ್ಕಾರ ಸುಮ್ಮನೆ ಕುಳಿತಿದೆ. ಇದೊಂದು ಕುಂಭಕರ್ಣ ಸರ್ಕಾರ ಎಂದು ಆರ್ ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.