ಕರ್ನಾಟಕ

karnataka

ETV Bharat / state

ಪಿಎಸ್ಐ ಪರುಶುರಾಮ್​ ಸಾವು ಪ್ರಕರಣವನ್ನು ಸಿಬಿಐಗೆ ವಹಿಸಿ: ಆರ್‌. ಅಶೋಕ್​ - PSI death case

ಪಿಎಸ್ಐ ಪರಶುರಾಮ್​ ಅವರ ಸಾವು ಪ್ರಕರಣ ಸಂಬಂಧ ಯಾದಗಿರಿ ಎಂಎಲ್ಎ ಹಾಗೂ ಅವರ ಮಗನನ್ನು ಬಂಧಿಸಬೇಕು ಎಂದು ವಿಪಕ್ಷ ನಾಯಕ ಆರ್. ಅಶೋಕ್​ ಆಗ್ರಹಿಸಿದ್ದಾರೆ.

ಆರ್‌. ಅಶೋಕ್
ಆರ್‌. ಅಶೋಕ್ (ETV Bharat)

By ETV Bharat Karnataka Team

Published : Aug 4, 2024, 10:41 PM IST

Updated : Aug 4, 2024, 10:53 PM IST

ಆರ್‌. ಅಶೋಕ್​ (ETV Bharat)

ಕೊಪ್ಪಳ: ಪಿಎಸ್​ಐ ಪರಶುರಾಮ್ ಸಾವಿನ ಪ್ರಕರಣವನ್ನು ಸಿಒಡಿಗೆ ಬಿಟ್ಟು ಸಿಬಿಐಗೆ ವಹಿಸುವಂತೆ ವಿಪಕ್ಷ ನಾಯಕ ಆರ್. ಅಶೋಕ್​ ಆಗ್ರಹಿಸಿದ್ದಾರೆ. ಕಾರಟಗಿ ತಾಲೂಕಿನ ಸೋಮನಾಳ ಗ್ರಾಮದ ಪರಶುರಾಮ್​ ಮನೆಗೆ ಭಾನುವಾರ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಳಿಕ ಅವರು ಮಾಧ್ಯಮದರೊಂದಿಗೆ ಮಾತನಾಡಿದರು.

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರ ಹಾಗೂ ಈ ಸರ್ಕಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ಪೊಲೀಸರ ಬಗ್ಗೆ ಬಹಳ ಬೇಜಾರುಗುತ್ತಿದೆ. ಅನ್ಯಾಯವನ್ನು ನೋಡಿಕೊಂಡು ಅಲ್ಲಿನ ಅಧಿಕಾರ ವರ್ಗ ಸುಮ್ಮನೆ ಇದೆ. ಕಾಂಗ್ರೆಸ್ ಸರ್ಕಾರದ ಒಬ್ಬ ಎಂಎಲ್ಎ ದಲಿತ ಅಧಿಕಾರಿಗಳು ಇರಬಾರದು ಎಂದು ಹೇಳಿದರಂತೆ. ಎಲ್ಲ ಜನಾಂಗದವರು ಬದುಕುತ್ತಿರುವುದು ಅಂಬೇಡ್ಕರ್ ಬರೆದ ಸಂವಿಧಾನದ ಅಡಿಯಲ್ಲಿ. ಆದರೆ, ಈ ಸರ್ಕಾರದ ಶಾಸಕರು ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಮಿತಿಮೀರಿದ ಲಂಚಾವತಾರ: ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಲಂಚಾವತಾರ ಮಿತಿಮೀರಿದೆ. ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ ಎನ್ನುವಂತೆ ಸಿಎಂ ಸಿದ್ದರಾಮಯ್ಯನವರೇ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಇನ್ನು ಸಚಿವರು ಶಾಸಕರು ಸುಮ್ಮನಿರಲು ಹೇಗೆ ಸಾಧ್ಯ. ಕಳೆದ ಬಿಜೆಪಿ ಸರ್ಕಾರದಲ್ಲಿ ನಾನು ಗೃಹಮಂತ್ರಿ ಇದ್ದಾಗ ಯಾವುದೇ ವರ್ಗಾವಣೆ ಇರಲಿ ಸೇವಾ ಅವಧಿ 2 ವರ್ಷ ಖಾಯಂ ಮಾಡುವಂತೆ ಕಾನೂನು ಮಾಡಿದ್ದೆ. ಆದರೆ, ಈಗ ಈ ಮನೆಹಾಳರು ಬಂದ ಮೇಲೆ 1 ವರ್ಷಕ್ಕೆ ಅದನ್ನ ಕಡಿತ ಮಾಡಿದರು. ಪಿಎಸ್​ಐ ಪರಶುರಾಮ್​ ಅವರನ್ನು ಏಳು ತಿಂಗಳಿಗೆ ಹೇಗೆ ವರ್ಗಾವಣೆ ಮಾಡಿದರು?. ಇದೆಲ್ಲ ಸಮಗ್ರ ತನಿಖೆಯಾಗಬೇಕು. ವರ್ಗಾವಣೆಗೆ ಸಹಿ ಹಾಕಿದ ಅಧಿಕಾರಿಯ ಮೇಲೂ ಕ್ರಮವಾಗಬೇಕು ಎಂದು ಅಶೋಕ್​ ಆಗ್ರಹಿಸಿದರು.

ಬೇಲಿಯೇ ಎದ್ದು ಹೊಲ ಮೇಯ್ದಂತೆ:ಸದ್ಯ ಪ್ರತಿಯೊಂದು ಇಲಾಖೆಯಲ್ಲಿ ಹಣ ಕೊಡದಿದ್ದರೆ ಪೋಸ್ಟಿಂಗ್ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ಪೊಲೀಸರ ಬಳಿಯೇ ಲಂಚ ವಸೂಲಿ ಮಾಡುತ್ತಿದ್ದಾರೆ ಅಂದರೆ ಇನ್ಯಾರನ್ನು ಇವರು ಬಿಡುತ್ತಾರೆ. ಇದು ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ. ಪರಶುರಾಮ್ ಅವರ ಎಫ್ಎಸ್ಎಲ್ ವರದಿ ಬಾರದೇ ಹೃದಯಾಘಾತ ಎಂದು ಗೃಹ ಸಚಿವರು ಈಗಾಗಲೇ ಡಿಕ್ಲೇರ್ ಮಾಡಿದ್ದಾರೆ. ಸಾವು ಸಂಭವಿಸಿದ ಬಳಿಕ ಸಾವಿನ ಬಗ್ಗೆ ಅನುಮಾನವಿದೆ ಎಂದು ಮೃತನ ಪತ್ನಿ, ಕುಟುಂಬಸ್ಥರು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದರೂ 16 ಗಂಟೆಯಾದರೂ ಸಹ ಎಫ್ಐಆರ್ ದಾಖಲು ಮಾಡಿರಲಿಲ್ಲ. ಇವರ ಭ್ರಷ್ಟಾಚಾರದ ಮೂಲಕ್ಕೆ ಮತ್ತೊಬ್ಬ ಅಧಿಕಾರಿ ಸಾವನ್ನಪ್ಪಿದ್ದಾನೆ. ರಾಜ್ಯದಲ್ಲಿ ಇನ್ನೆಷ್ಟು ಸಾವುಗಳನ್ನ ನೋಡಬೇಕೆಂದಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವರ್ಗಾವಣೆ ದಂಧೆ ಬಗ್ಗೆ ರಾಯರೆಡ್ಡಿ ಹೇಳಿದ್ದು ಸತ್ಯ:ರಾಜ್ಯದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿರುವುದರಲ್ಲಿ ಸತ್ಯವಿದೆ. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪಿಎಸ್ಐ ಹಗರಣ ಎಂದು ಕಾಂಗ್ರೆಸ್ ನವರು ರೇಟ್ ಬೋರ್ಡ್ ಹಾಕಿ ಬೊಬ್ಬೆ ಹೊಡೆದಿದ್ದರು. ಆದರೆ, ಈಗ ಪಿಎಸ್ಐ ವರ್ಗಾವಣೆಯಲ್ಲಿ ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಲೂಟಿ ಮಾಡುತ್ತಿದ್ದರಲ್ಲ ನಾಚಿಕೆಯಾಗೋದಿಲ್ವಾ?. ನೀವು, ನಿಮ್ಮ ಸಚಿವರು, ಶಾಸಕರು ವರ್ಗಾವಣೆ ದಂಧೆ ಮಾಡಿ ರಾಜ್ಯದ ಜನರ ಎದುರು ಬೆತ್ತಲಾಗಿದ್ದೀರಿ ಎಂದು ಪ್ರತಿಪಕ್ಷ ನಾಯಕ ಆರ್​. ಅಶೋಕ್​ ಹರಿಹಾಯ್ದರು.

ಯಾದಗಿರಿ ಎಂಎಲ್ಎ, ಅವರ ಮಗನನ್ನು ಬಂಧಿಸಬೇಕು:ಪಿಎಸ್​ಐಪರಶುರಾಮ್​ ಅವರ ಸಾವು ಪ್ರಕರಣ ಸಂಬಂಧ ಯಾದಗಿರಿ ಎಂಎಲ್ಎ ಹಾಗೂ ಅವರ ಮಗನನ್ನು ಬಂಧಿಸಬೇಕು. ಈ ಪ್ರಕರಣದ‌ ಕುರಿತು ಹೋರಾಟ ಮಾಡುತ್ತೇವೆ. ನ್ಯಾಯ ಸಿಗುವವರೆಗೂ ನಾವು ಪರಶುರಾಮ್ ಕುಟುಂಬಸ್ಥರ ಜೊತೆ ನಿಲ್ಲುತ್ತೇವೆ ಎಂದು ಭರವಸೆ ನೀಡಿದರು.

ಇದನ್ನೂ ಓದಿ:ಪಿಎಸ್ಐ ಪರಶುರಾಮ್​ ಹೃದಯಾಘಾತದಿಂದ ಸಾವು: ಸ್ವಗ್ರಾಮದಲ್ಲಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ - PSI Parashuram

Last Updated : Aug 4, 2024, 10:53 PM IST

ABOUT THE AUTHOR

...view details