ಕರ್ನಾಟಕ

karnataka

ETV Bharat / state

ನಾಳೆ ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ; ಸಿಎಂಗೆ ಸಪ್ತ ಪ್ರಶ್ನೆಗಳ ಸವಾಲೆಸೆದ ಪ್ರತಿಪಕ್ಷ ನಾಯಕ ಆರ್ ಅಶೋಕ್ - LOP R ASHOK ON MUDA SCAM

ಮೈಸೂರಿನ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಸಪ್ತ ಪ್ರಶ್ನೆಗಳನ್ನು ಕೇಳಿದ್ದಾರೆ. ಅಲ್ಲದೇ ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಮನೆಗೆ ಮುತ್ತಿಗೆ ಹಾಕಿ ಹೋರಾಟ ನಡೆಸುತ್ತೇವೆ ಎಂದಿದ್ದಾರೆ.

By ETV Bharat Karnataka Team

Published : Jul 2, 2024, 6:19 PM IST

Ashok and siddaramaiah
ಆರ್ ಅಶೋಕ್ ಹಾಗೂ ಸಿಎಂ ಸಿದ್ದರಾಮಯ್ಯ (ETV Bharat)

ಬೆಂಗಳೂರು :ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ ಸಂಬಂಧ ನೈತಿಕ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ನಾಳೆ ಮುಖ್ಯಮಂತ್ರಿಗಳ ನಿವಾಸ ಮುತ್ತಿಗೆ ಹಾಕಿ ಹೋರಾಟ ನಡೆಸುತ್ತೇವೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಹೇಳಿದರು.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮಾಜಿ ಸಚಿವ ಬಿ. ನಾಗೇಂದ್ರ ಅವರನ್ನು ಬಲಿಪಶು ಮಾಡಿ ದೊಡ್ಡ ತಲೆಗಳನ್ನು ರಕ್ಷಿಸಲಾಗುತ್ತಿದೆ. ಈ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಸಿಗುವವರೆಗೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಜುಲೈ 3 ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಹಾಗೂ ನಾನು ಕಾರ್ಯಕರ್ತರೊಂದಿಗೆ ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಹಾಕಲಿದ್ದೇವೆ. ಬುಧವಾರ ಬೆಳಗ್ಗೆ 9.30 ಕ್ಕೆ ಕುಮಾರಕೃಪಾ ಅತಿಥಿ ಗೃಹದಿಂದ ಮೆರವಣಿಗೆಯಲ್ಲಿ ಹೊರಟು ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ತಿಳಿಸಿದ್ದಾರೆ.

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಾದ ಕೋಟ್ಯಂತರ ರೂಪಾಯಿ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇರವಾಗಿ ಶಾಮೀಲಾಗಿದ್ದು, ನೈತಿಕತೆಯ ಹೊಣೆ ಹೊತ್ತು ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು, ಮುಖ್ಯಮಂತ್ರಿ ರಾಜೀನಾಮೆ ನೀಡದಿದ್ದಲ್ಲಿ ಬಿಜೆಪಿಯಿಂದ ಇನ್ನಷ್ಟು ತೀವ್ರ ಹೋರಾಟ ನಡೆಸಲಾಗುವುದು ಎಂದು ಖಡಕ್‌ ಎಚ್ಚರಿಕೆ ನೀಡಿದರು.

ಈ ಹಗರಣದಲ್ಲಿ ಮಾಜಿ ಸಚಿವ ಬಿ. ನಾಗೇಂದ್ರ ಸಣ್ಣ ನೆಪ ಮಾತ್ರ. ಇದರ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇರ ಪಾತ್ರವಿದೆ. ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿಯ ಗಮನಕ್ಕೆ ಬಾರದೆ 187 ಕೋಟಿ ರೂ. ಮೊತ್ತದ ಹಗರಣ ನಡೆಯಲು ಸಾಧ್ಯವೇ ಇಲ್ಲ. ಸಿದ್ದರಾಮಯ್ಯ ತಮ್ಮ ಕುರ್ಚಿ ಉಳಿಸಿಕೊಳ್ಳಲು ಲೋಕಸಭಾ ಚುನಾವಣೆಗಾಗಿ ರಾಹುಲ್‌ ಗಾಂಧಿ ಬಳಗಕ್ಕೆ ಈ ಹಣ ತಲುಪಿಸಲು ಪ್ರಯತ್ನ ಮಾಡಿದ್ದಾರೆ. ಆದರೆ ಕಾಂಗ್ರೆಸ್‌ನ ದುರದೃಷ್ಟವೆಂಬಂತೆ ಪ್ರಾಮಾಣಿಕ ಅಧಿಕಾರಿಯ ಆತ್ಮಹತ್ಯೆಯಿಂದಾಗಿ ಹಗರಣ ಹೊರಬಂದಿದೆ. ಈಗ ಇದನ್ನು ಮುಚ್ಚಿಹಾಕಲು ಎಲ್ಲ ಬಗೆಯ ಪ್ರಯತ್ನಗಳನ್ನು ಮಾಡಲಾಗಿದೆ ಎಂದು ಆರೋಪಿಸಿದರು.

ದಲಿತರ ಚಾಂಪಿಯನ್‌ ಎಂದು ಕರೆದುಕೊಳ್ಳುವ ಸಿಎಂ ಸಿದ್ದರಾಮಯ್ಯ ಈ ಹಗರಣ ಮಾಡಿಯೇ ತಮ್ಮ ಸ್ಥಾನ ಭದ್ರ ಮಾಡಿಕೊಳ್ಳಲು ನೋಡಿದ್ದರು. ಹೈಕಮಾಂಡ್‌ಗೆ ಕಪ್ಪ ಸಲ್ಲಿಸದೇ ಇದ್ದಲ್ಲಿ ಸಿಎಂ ಸ್ಥಾನ ಕಳೆದುಕೊಂಡು ಅದನ್ನು ಡಿ.ಕೆ ಶಿವಕುಮಾರ್‌ಗೆ ಬಿಟ್ಟುಕೊಡಬೇಕಾಗಿತ್ತು. ಅದನ್ನು ತಪ್ಪಿಸಲು ದಲಿತರ ಹಣವನ್ನು ದುರ್ಬಳಕೆ ಮಾಡಿದ್ದಾರೆ. ಸಚಿವ ಬಿ. ನಾಗೇಂದ್ರ ಅವರಿಂದ ರಾಜೀನಾಮೆ ಪಡೆದು ತಮ್ಮ ತಲೆಯನ್ನು ಉಳಿಸಿಕೊಂಡಿದ್ದಾರೆ ಎಂದು ಅಶೋಕ್​ ದೂರಿದ್ದಾರೆ.

ದಲಿತರ ಹಣ ಯಾರು ಕೊಡುತ್ತಾರೆ?: ದಲಿತರಿಗೆ ಸೇರಿದ ಒಟ್ಟು 187 ಕೋಟಿ ರೂಪಾಯಿಯನ್ನು ಬೇನಾಮಿ ಐಟಿ ಕಂಪನಿಗಳ ಖಾತೆಗೆ ವರ್ಗಾಯಿಸಲಾಗಿದೆ. ಈವರೆಗೆ ಆರೋಪಿಗಳಿಂದ 14 ಕೋಟಿ ರೂ, ಬ್ಯಾಂಕ್‌ ಖಾತೆಗಳಿಂದ 10 ಕೋಟಿ ರೂ. ವಶಕ್ಕೆ ಪಡೆಯಲಾಗಿದೆ. ಉಳಿದ ಹಣವನ್ನು ಸಿಎಂ ಸಿದ್ದರಾಮಯ್ಯ ತಮ್ಮ ಜೇಬಿನಿಂದ ಕೊಡುತ್ತಾರಾ ಅಥವಾ ಕೆಪಿಸಿಸಿ ಬ್ಯಾಂಕ್‌ ಖಾತೆಯಿಂದ ಪಡೆಯಲಾಗುವುದೇ? ಎಂಬ ಬಗ್ಗೆ ಮಾಹಿತಿ ಇಲ್ಲ. ನಷ್ಟವಾದ ಈ ಹಣ ದಲಿತರಿಗೆ ಸೇರಿದ್ದು, ಇದನ್ನು ವಾಪಸ್‌ ಪಡೆಯಲು ಏನು ಮಾಡುತ್ತಾರೆ? ಎಂದು ಸರ್ಕಾರ ಸ್ಪಷ್ಟ ಮಾಹಿತಿ ನೀಡಬೇಕಿದೆ ಎಂದು ಒತ್ತಾಯಿಸಿದ್ದಾರೆ.

ಬಾಕಿ ಹಣ ಎಲ್ಲಿ ಹೋಯಿತು? ಅಂದರೆ ಅದನ್ನು ಗುಳುಂ ಮಾಡಲಾಗಿದೆಯೇ? ನಿಗಮದ ಹಣ ಪಕ್ಕದ ತೆಲಂಗಾಣ ರಾಜ್ಯದ ಚಿನ್ನಾಭರಣ ಅಂಗಡಿಗಳು, ಮದ್ಯದ ಅಂಗಡಿಗಳು ಸೇರಿದಂತೆ ನೂರಾರು ಖಾತೆಗಳಿಗೆ ವರ್ಗಾವಣೆ ಆಗಿದೆ. ಅದು ಸಹ ಮಾರ್ಚ್ ತಿಂಗಳ ಅಂತ್ಯದಲ್ಲಿ ನಡೆದಿದೆ. ಅಂತಾರಾಜ್ಯ ವಹಿವಾಟು ಆಗಿರುವ ಇಷ್ಟೊಂದು ದೊಡ್ಡ ಬಹುಕೋಟಿ ಹಗರಣವನ್ನು ಸಿಬಿಐಗೆ ಕೊಡಲು ಹಿಂದೇಟು ಯಾಕೆ? ಈ ಹಗರಣಕ್ಕೂ ತೆಲಂಗಾಣ ಚುನಾವಣೆಗೂ ಇರುವ ನಂಟು ಹೊರಬರಬಹುದು ಎಂಬ ಭಯವೇ? ಎಂದು ಅವರು ಮುಖ್ಯಮಂತ್ರಿಯವರನ್ನು ಪ್ರಶ್ನೆ ಮಾಡಿದ್ದಾರೆ.

ವಿಶೇಷ ತನಿಖಾ ದಳ ಯಾರು ಯಾರನ್ನೋ ವಿಚಾರಣೆ ಮಾಡುತ್ತಿದೆ. ಆದರೆ ಈವರೆಗೆ ಮಾಜಿ ಸಚಿವ ಬಿ. ನಾಗೇಂದ್ರ ಅವರನ್ನು ಕೂರಿಸಿ ವಿಚಾರಣೆ ನಡೆಸಿಲ್ಲ. ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿಗಳ ಬಳಿ ಪೊಲೀಸರು ಯಾವುದೇ ಪ್ರಶ್ನೆಗಳನ್ನು ಕೇಳಿಲ್ಲ. ಹಣಕಾಸು ಇಲಾಖೆಯ ಗಮನಕ್ಕೆ ಬಾರದೆ ಇದು ನಡೆದಿಲ್ಲ ಎಂದಾದ ಮೇಲೆ ಸಿದ್ದರಾಮಯ್ಯ ಯಾಕೆ ಈ ಬಗ್ಗೆ ಮಾತನಾಡುತ್ತಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.

ಸಿಎಂ ಸಿದ್ದರಾಮಯ್ಯಗೆ ಸಪ್ತ ಪ್ರಶ್ನೆ : ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂಪಾಯಿ ದಲಿತರ ಹಣವನ್ನ ಗುಳುಂ ಮಾಡಿರುವ 'ಸಿದ್ಧ'ಹಸ್ತರು ಈಗ ಮೈಸೂರಿನ ಮುಡಾದಲ್ಲಿ ₹4,000 ಕೋಟಿ ಗುಳುಂ ಮಾಡುವ ಮೂಲಕ ಮತ್ತೊಮ್ಮೆ ತಮ್ಮ 'ಕೈ'ಚಳಕ ಪ್ರದರ್ಶನ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿರುವ ಪ್ರತಿಪಕ್ಷ ನಾಯಕ ಆರ್. ಅಶೋಕ್, ಸಿಎಂ ಸಿದ್ದರಾಮಯ್ಯಗೆ ಸಪ್ತ ಪ್ರಶ್ನೆಗಳ ಸವಾಲೆಸೆದಿದ್ದಾರೆ.

ಗೋಲ್ಮಾಲ್ ಸಿಎಂ ಸಿದ್ದರಾಮಯ್ಯನವರೇ, ಈ ಪ್ರಶ್ನೆಗಳಿಗೆ ನಿಮ್ಮ ಬಳಿ ಉತ್ತರವಿದೆಯೇ? ಎನ್ನುವ ಟ್ವೀಟ್​ನೊಂದಿಗೆ ಏಳು ಪ್ರಶ್ನೆಗಳನ್ನು ಅಶೋಕ್ ಕೇಳಿದ್ದಾರೆ.

1.) ಗೋಲ್ಮಾಲ್ ಸಿಎಂ ಸಿದ್ದರಾಮಯ್ಯನವರೇ, ತಮ್ಮ ಧರ್ಮ ಪತ್ನಿ ಅವರ ಹೆಸರಿನಲ್ಲೂ ನಿಯಮ ಬಾಹಿರವಾಗಿ ನಿವೇಶನ ವರ್ಗಾವಣೆ ಆಗಿರುವ ಸುದ್ದಿ ಹೊರಬಂದಿದೆಯಲ್ಲ ಇದನ್ನ ಹೇಗೆ ಸಮರ್ಥನೆ ಮಾಡಿಕೊಳ್ಳುತ್ತೀರಿ?.

2.) ಆರೋಪ ಕೇಳಿಬಂದಿರುವ ಮುಡಾ ಅಧಿಕಾರಿಗಳನ್ನ ಅಮಾನತು ಮಾಡದೆ, ಕೇವಲ ವರ್ಗಾವಣೆ ಮಾಡಿ ಕೈತೊಳೆದುಕೊಂಡಿದ್ದೀರಲ್ಲ, ಯಾರನ್ನು ರಕ್ಷಣೆ ಮಾಡಲು ಹೊರಟಿದ್ದೀರಿ?.

3.) 4,000 ಕೋಟಿ ರೂಪಾಯಿ ಮೌಲ್ಯದ ಈ ಬ್ರಹ್ಮಾಂಡ ಭ್ರಷ್ಟಾಚಾರ ಪ್ರಕರಣವನ್ನ ಅಸಲಿಗೆ ಸಿಬಿಐಗೆ ವಹಿಸಬೇಕು ಅಥವಾ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ತನಿಖಾ ಆಯೋಗಕ್ಕೆ ನೀಡಬೇಕು. ಅದು ಬಿಟ್ಟು ತನಿಖೆಗೆ ಇಬ್ಬರು ಐಎಎಸ್ ಅಧಿಕಾರಿಗಳನ್ನ ನೇಮಿಸಿ ಪ್ರಕರಣವನ್ನ ಮುಚ್ಚಿಹಾಕಲು ಹೊರಟಿದ್ದೀರಲ್ಲ, ಈ ಹಗರಣದಲ್ಲಿ ತಮ್ಮ ಪಾಲೆಷ್ಟು?.

4.) 50:50 ಅನುಪಾತ ಹಂಚಿಕೆಗೆ ಅನುಮತಿ ನೀಡಿದ್ದು ಯಾರು?.

5.) ಪರ್ಯಾಯ ನಿವೇಶನ ನೀಡುವಾಗ ಅದೇ ಬಡಾವಣೆ ಬಿಟ್ಟು ಲಾಭದ ಬಡಾವಣೆಗಳಲ್ಲಿ ಅವಕಾಶಕ್ಕೆ ಶಿಫಾರಸ್ಸು ಮಾಡಿದ್ದು ಯಾರು?.

6.) ಸಚಿವ ಸಂಪುಟದ ಅನುಮತಿ ಪಡೆಯದೆ ಮನಸ್ಸಿಗೆ ಬಂದಂತೆ ನಿವೇಶನ ನೀಡಲು ಅನುಮತಿ ನೀಡಿದ್ದು ಯಾರು?.

7.) ನಿಮ್ಮ ತವರು ಜಿಲ್ಲೆಯಲ್ಲಿ, ಸ್ವಂತ ಊರಿನಲ್ಲಿ, ತಮ್ಮ ಆಪ್ತ ಸಚಿವರ ಇಲಾಖೆಯಲ್ಲಿ, ಇಂಥದ್ದೊಂದು ಬೃಹತ್ ಹಗರಣ ತಮ್ಮ ಗಮನಕ್ಕೆ ಬಾರದೆ, ತಮ್ಮ ಕೈವಾಡವಿಲ್ಲದೆ ನಡೆಯಲು ಸಾಧ್ಯವೇ?. ಎಂದು ಆರ್​ ಅಶೋಕ್​ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ :ತಮ್ಮ‌ ಪತ್ನಿಗೆ ಅಕ್ರಮವಾಗಿ ಮುಡಾ ನಿವೇಶನ ವರ್ಗಾವಣೆ ಆರೋಪ: ಸಿಎಂ ಸಿದ್ದರಾಮಯ್ಯ ಹೇಳಿದ್ದೇನು? - Alleged transfer of Muda site

ABOUT THE AUTHOR

...view details