ಕಾರವಾರ: ಶಿರೂರಿನ ಗುಡ್ಡ ಕುಸಿತದಲ್ಲಿ ನಾಪತ್ತೆಯಾದವರಿಗಾಗಿ ಇದೀಗ ಎರಡು ತಿಂಗಳ ಬಳಿಕ ಮತ್ತೆ ಶೋಧ ಕಾರ್ಯಾಚರಣೆ ಮುಂದುವರಿಯಲಿದೆ. ಕಾರ್ಯಾಚರಣೆಗೆ ಬಳಸಲು ಗೋವಾದಿಂದ ಬಾರ್ಜ್ ಸಹಿತ ಡ್ರೆಜ್ಜಿಂಗ್ ಮಷಿನ್ ಕಾರವಾರ ಬಂದರಿಗೆ ಆಗಮಿಸಿದೆ.
ಜುಲೈ 16ರಂದು ಅಂಕೋಲಾದ ಶಿರೂರಿನಲ್ಲಿ ಬೃಹತ್ ಗುಡ್ಡ ಕುಸಿದು 11 ಜನರು ಸಾವಿಗೀಡಾಗಿದ್ದರು. ಈ ಪೈಕಿ 8 ಮಂದಿಯ ಮೃತದೇಹ ಮಾತ್ರ ದೊರತಿತ್ತು. ಇನ್ನೂ ಮೂವರ ಮೃತದೇಹಕ್ಕಾಗಿ ಸಾಕಷ್ಟು ಶೋಧ ನಡೆಸಿದ್ದರೂ ಕೂಡ ಯಾವುದೇ ಪ್ರಯೋಜನವಾಗಲಿಲ್ಲ. ಶಿರೂರಿನ ಜಗನ್ನಾಥ್ ನಾಯ್ಕ, ಗಂಗೆಕೊಳ್ಳದ ಲೋಕೇಶ್ ನಾಯ್ಕ ಹಾಗೂ ಕೇರಳ ಮೂಲದ ಅರ್ಜುನ್ ಮೃತದೇಹ ಇನ್ನಷ್ಟೇ ಪತ್ತೆಯಾಗಬೇಕಿದೆ. ಘಟನೆಯ ಬಳಿಕ ಸುಮಾರು ಒಂದು ತಿಂಗಳವರೆಗೂ ಗಂಗಾವಳಿ ನದಿ ಹಾಗೂ ನದಿ ದಡದಲ್ಲಿ ಸಾಕಷ್ಟು ಹುಡುಕಾಟ ನಡೆಸಲಾಗಿತ್ತು. ಅಲ್ಲದೇ ನದಿ ಹರಿವಿನ ವೇಗ ಕೂಡ ಹೆಚ್ಚಾಗಿದ್ದ ಕಾರಣ ಕಾರ್ಯಾಚರಣೆಯನ್ನು ಕೈಬಿಡಲಾಗಿತ್ತು.
ಆದರೆ ಕೆಲ ದಿನಗಳ ಬಳಿಕ ಉಡುಪಿಯ ಈಶ್ವರ ಮಲ್ಪೆ ಅವರ ತಂಡ ಶೋಧ ನಡೆಸಿದಾಗ ಲಾರಿ ಹಾಗೂ ಟ್ಯಾಂಕರ್‌ನ ಅವಶೇಷಗಳು ಪತ್ತೆಯಾಗಿದ್ದವು. ಈ ಹಿಂದೆ ಡ್ರೆಜ್ಜಿಂಗ್ ಮಷಿನ್ ತರಿಸಿ ಕಾರ್ಯಾಚರಣೆ ನಡೆಸಬೇಕೆಂಬ ಒತ್ತಾಯ ಕೇಳಿಬಂದಿತ್ತು. ಆದರೆ ಮತ್ತೆ ಮಳೆ ಜೋರಾಗಿ ಕಾರ್ಯಾಚರಣೆ ನಿಲ್ಲಿಸಲಾಗಿತ್ತು. ಇದೀಗ ಮಳೆ ಕಡಿಮೆಯಾಗಿದೆ. ಜಿಲ್ಲಾಡಳಿತ ಹಾಗೂ ಸ್ಥಳೀಯ ಶಾಸಕರ ಪ್ರಯತ್ನದ ಫಲವಾಗಿ ಡ್ರೆಜ್ಜಿಂಗ್ ಮಷಿನ್ ಬಂದಿದೆ. ಆದರೆ, ಕಾರ್ಯಾಚರಣೆಗೆ ಗಾಳಿ ಹಾಗೂ ಸಮುದ್ರದ ಭರತ- ಇಳಿತ ಅಡ್ಡಿಯಾಗುತ್ತಿದ್ದು, ಗಂಗಾವಳಿ ಅಳಿವೆ ಪ್ರದೇಶದಲ್ಲಿ ಡ್ರೆಜ್ಜಿಂಗ್ ಮಷಿನ್ ಪ್ರವೇಶಕ್ಕೆ ಸಮುದ್ರ ಭರತವಾಗಬೇಕಿದೆ. ಆಗ ಮಾತ್ರ ಅಳಿವೆಯಿಂದ ನದಿಗೆ ಬಾರ್ಜ್ ಸಹಿತ ಡ್ರೆಜ್ಜಿಂಗ್ ಮಷಿನ್ ಪ್ರವೇಶ ಮಾಡಲಿದೆ ಎಂದು ಡ್ರೆಜ್ಜಿಂಗ್ ಮಷಿನ್ ಸಿಬ್ಬಂದಿ ಮಾಹಿತಿ ನೀಡಿದರು.