ಬಾಗಲಕೋಟೆ/ದಾವಣಗೆರೆ: ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ನೀತಿ ಸಂಹಿತೆ ಜಾರಿಯಾಗಿದೆ. ಪೊಲೀಸರು ಮತ್ತು ಚುನಾವಣಾಧಿಕಾರಿಗಳು ಅಕ್ರಮ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.
ಬಾಗಲಕೋಟೆಯಲ್ಲಿ ವಾಹನ ತಪಾಸನೆಯ ವೇಳೆ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 1.72 ಲಕ್ಷ ರೂಪಾಯಿ ನಗದನ್ನು ತೇರದಾಳ ಹತ್ತಿರದ ಚೆಕ್ ಪೋಸ್ಟ್‌ನಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸಹಾಯಕ ಚುನಾವಣಾಧಿಕಾರಿ ಸಾಜಿದ ಅಹಮದ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಇನ್ನೊಂದೆಡೆ, 9.84 ಲಕ್ಷ ರೂ. ಮೌಲ್ಯದ ಮದ್ಯ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಕೂಡಲಸಂಗಮ ಕ್ರಾಸ್ನ ಚೆಕ್ ಪೋಸ್ಟ್‌ನಲ್ಲಿ ಒಟ್ಟು 75,526 ರೂ. ಮೌಲ್ಯದ 10.80 ಲೀಟರ್ ಅಕ್ರಮ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ. ಮುಧೋಳ ತಾಲೂಕಿನ ದಾದನಟ್ಟಿ ಕ್ರಾಸ್ ಚೆಕ್ ಪೋಸ್ಟ್‌ನಲ್ಲಿ ಪರಿಶೀಲನೆಯ ವೇಳೆ ಒಟ್ಟು 9.09 ಲಕ್ಷ ರೂ. ಮೌಲ್ಯದ 40.50 ಲೀಟರ್ ಮದ್ಯ ಸಿಕ್ಕಿದೆ. ಬಾಗಲಕೋಟೆಯ ಜಿಲ್ಲೆಯ ಎರಡು ಚೆಕ್ ಪೋಸ್ಟ್‌ಗಳಲ್ಲಿ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಮದ್ಯ ಜಪ್ತಿ ಮಾಡಲಾಗಿದೆ. ಆರೋಪಿಗಳಾದ ಕೂಡಲಸಂಗಮ ಗ್ರಾಮದ ಶಂಕರಯ್ಯ ಸರಗನಾಚಾರಿ, ಬಸವನ ಬಾಗೆವಾಡಿಯ ಆಕಾಶ ಅಂದೊಡಗಿ ಎಂಬವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.