ಬೆಂಗಳೂರು:ಆಕ್ಷೇಪಾರ್ಹ ಟ್ವೀಟ್ ಪ್ರಕರಣ ಸಂಬಂಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ, ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಮತ್ತು ಬಿಜೆಪಿಯ ಐಟಿ ಸೆಲ್ ವಿಭಾಗದ ರಾಷ್ಟ್ರೀಯ ಸಂಚಾಲಕ ಅಮಿತ್ ಮಾಳವೀಯ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ನೋಟಿಸ್ ತಲುಪಿದ 7 ದಿನಗಳ ಒಳಗೆ ಪ್ರಕರಣದ ತನಿಖಾಧಿಕಾರಿಯ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ.
ಕರ್ನಾಟಕದ ಬಿಜೆಪಿಯ ಅಧಿಕೃತ 'ಎಕ್ಸ್' ಖಾತೆಯಲ್ಲಿ ಆಕ್ಷೇಪಾರ್ಹ ಪೋಸ್ಟ್ ಪ್ರಕಟಿಸಲಾಗಿತ್ತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಸಿಎಂ ಸಿದ್ದರಾಮಯ್ಯ ಅವರು ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗಗಳ ಹೆಸರಿನ ಮೊಟ್ಟೆಗಳಿರುವ ಗೂಡಿನಲ್ಲಿ ಮುಸ್ಲಿಂ ಹೆಸರಿನ ಮೊಟ್ಟೆ ತಂದಿಟ್ಟು ಪೋಷಿಸುವಂತೆ, ಅದೇ ಮುಸ್ಲಿಂ ಹೆಸರಿನ ಮೊಟ್ಟೆಯಿಂದ ಹೊರಬಂದ ಮರಿ ಕೊನೆಗೆ ಇತರ ಹಕ್ಕಿಗಳನ್ನು ಓಡಿಸುತ್ತಿರುವಂತೆ ಸೂಚಿಸುವ ಕಾರ್ಟೂನ್ ವಿಡಿಯೋವೊಂದನ್ನು ಮೇ 4ರಂದು ಬಿಜೆಪಿ ಹಂಚಿಕೊಂಡಿತ್ತು.
ಈ ವಿವಾದಿತ ಪೋಸ್ಟ್ ವಿರುದ್ಧ ಕೆಪಿಸಿಸಿಯ ಮಾಧ್ಯಮ ಮತ್ತು ಸಂವಹನ ವಿಭಾಗದ ಮುಖ್ಯಸ್ಥ ರಮೇಶ್ ದೂರು ನೀಡಿದ್ದರು. ಇದರನ್ವಯ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಅಲ್ಲದೇ, ಜೆ. ಪಿ. ನಡ್ಡಾ, ವಿಜಯೇಂದ್ರ, ಅಮಿತ್ ಮಾಳವೀಯ ಅವರಿಗೆ ಮೇ 6ರಂದೇ ಪೊಲೀಸರು ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದಾರೆ.
ಕಾಂಗ್ರೆಸ್ ದೂರೇನು?:ಬಿಜೆಪಿ ತನ್ನ ವಿವಾದಿತಪೋಸ್ಟ್ ಮೂಲಕ ಕಾಂಗ್ರೆಸ್ ಎಸ್‌ಸಿ, ಎಸ್‌ಟಿ ಸಮುದಾಯ, ಹಿಂದುಳಿದ ವರ್ಗದವರಿಗೆ ಮೀಸಲಿಟ್ಟ ಅನುದಾನವನ್ನು ಮುಸ್ಲಿಮರಿಗೆ ನೀಡಿ ಪೋಷಿಸುತ್ತಿದೆ ಎಂದು ಬಿಂಬಿಸಲು ಹೊರಟಿದೆ. ಜೊತೆಗೆ ಇಂತಹ ವಿಡಿಯೋ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕದಂತೆ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಲಾಗಿದೆ ಎಂದು ಕಾಂಗ್ರೆಸ್ ಕಿಡಿಕಾರಿತ್ತು.
'ಇದು ಉದ್ದೇಶಪೂರ್ವಕವಾಗಿ ಗಲಭೆ ಪ್ರಚೋದಿಸುವುದು ಮತ್ತು ವಿವಿಧ ಧರ್ಮಗಳ ನಡುವೆ ದ್ವೇಷವನ್ನು ಉತ್ತೇಜಿಸುತ್ತದೆ. ನಿರ್ದಿಷ್ಟ ಅಭ್ಯರ್ಥಿಗೆ ಮತ ಹಾಕದಂತೆ ಎಸ್‌ಸಿ, ಎಸ್‌ಟಿ ಸಮುದಾಯದವರನ್ನು ಬೆದರಿಸುವುದು ಮತ್ತು ಎಸ್‌ಸಿ, ಎಸ್‌ಟಿ ಸಮುದಾಯದ ವಿರುದ್ಧ ದ್ವೇಷವನ್ನು ಉಂಟು ಮಾಡುವುದರ ಹೊರತಾಗಿ ಸೌಹಾರ್ದತೆ ಕಾಪಾಡಲು ಪೂರ್ವಾಗ್ರಹ ಪೀಡಿತವಾಗಿದೆ ಎಂದು ಕಾಂಗ್ರೆಸ್ ದೂರು ನೀಡಿತ್ತು.
ಅಲ್ಲದೇ, ಇದೇ ಪೋಸ್ಟ್ ಸಂಬಂಧ ಜೆ. ಪಿ. ನಡ್ಡಾ, ಅಮಿತ್ ಮಾಳವೀಯ ಮತ್ತು ಬಿ. ವೈ. ವಿಜಯೇಂದ್ರ ವಿರುದ್ಧ ಚುನಾವಣಾ ಆಯೋಗಕ್ಕೂ ಕಾಂಗ್ರೆಸ್ ದೂರು ಸಲ್ಲಿಸಿದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ಹಾಕಬೇಡಿ ಎಂದು ಪರಿಶಿಷ್ಟ ಜಾತಿ/ಪಂಗಡದ ಸದಸ್ಯರನ್ನು ಬೆದರಿಸುವ ಉದ್ದೇಶದಿಂದ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಇದು ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ತನ್ನ ದೂರಿನಲ್ಲಿ ತಿಳಿಸಿದೆ.
ಇದನ್ನೂ ಓದಿ:ಎಕ್ಸ್ ಪೋಸ್ಟ್: ನಡ್ಡಾ, ಮಾಳವಿಯಾ, ವಿಜಯೇಂದ್ರ ವಿರುದ್ಧ ಎಫ್ಐಆರ್