ಬೆಂಗಳೂರು : ನಗರದ ನೃಪತುಂಗ ರಸ್ತೆಯಲ್ಲಿರುವ ಕೆಂಪಮ್ಮ ಉಪಹಾರ ಗೃಹ ಕಾಲೇಜು ವಿದ್ಯಾರ್ಥಿಗಳು, ಸರ್ಕಾರಿ ಅಧಿಕಾರಿಗಳು ಮತ್ತು ಚಾಲಕರಿಗೆ ಅಚ್ಚುಮೆಚ್ಚಿನ ತಿಂಡಿ ಮತ್ತು ಊಟದ ತಾಣವಾಗಿ ಮಾರ್ಪಟ್ಟಿದೆ.
15 ವರ್ಷಗಳ ಹಿಂದೆ ಕೆಂಪಮ್ಮ (55 ವರ್ಷ ವಯಸ್ಸು) ಅನ್ನಪೂರ್ಣೇಶ್ವರಿ ಹೋಟೆಲ್ ಅನ್ನು ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಕೇಂದ್ರ ಕಚೇರಿ ಬಳಿಯ ಖಾಲಿ ಜಾಗದಲ್ಲಿ ಪ್ರಾರಂಭಿಸಿದರು. ಅದಕ್ಕೂ ಮೊದಲು ತಳ್ಳುವ ಗಾಡಿಯಲ್ಲಿ ಊಟ ತಿಂಡಿಯನ್ನು ಐದು ವರ್ಷಗಳ ಕಾಲ ಮಾರುತ್ತಿದ್ದರು. ಸದ್ಯ ಕೆಂಪಮ್ಮ 32 ಜನ ಸಿಬ್ಬಂದಿ ಜೊತೆ ನೃಪತುಂಗ ರಸ್ತೆಯ ಬಳಿ ಹೋಟೆಲ್ ನಡೆಸುತ್ತಿದ್ದಾರೆ.
ಕುಣಿಗಲ್ ಮೂಲದ ಕೆಂಪಮ್ಮ ಅವರ ಪತಿ 25 ವರ್ಷಗಳ ಹಿಂದೆ ಮರಣ ಹೊಂದಿದ್ದಾರೆ. ಅವರು ಪಿಡಬ್ಲ್ಯುಡಿ ಕಚೇರಿಯ ಕ್ಯಾಂಟೀನ್‌ನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಆಗ ಕ್ಯಾಂಟೀನ್ ಬಂದ್ ಆಗಿದ್ದರಿಂದ ಅವರನ್ನು ವಜಾಗೊಳಿಸಲಾಗಿತ್ತು. ಆಗ ತಳ್ಳುವ ಗಾಡಿಯಲ್ಲಿ ಚಹಾ ಮತ್ತು ಕಾಫಿ ಮಾರಲು ಪ್ರಾರಂಭಿಸಿದರು. ಅವರಿಂದಲೇ ಸ್ಫೂರ್ತಿ ಪಡೆದು ಕ್ಯಾಂಟೀನ್ ನಿರ್ವಹಿಸುತ್ತಿದ್ದಾರೆ.
ತನ್ನ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಮನೆಯ ಆಹಾರವನ್ನು ಒದಗಿಸುವ ಮೂಲಕ ತನ್ನ ವ್ಯವಹಾರವನ್ನು ವ್ಯವಸ್ಥಿತವಾಗಿ ನಡೆಸುತ್ತಿದ್ದಾರೆ. ಇಲ್ಲಿ ಸೊಪ್ಪು ಸಾರು, ಬಜ್ಜಿಯೊಂದಿಗೆ ಒಂದು ಪ್ಲೇಟ್ ರಾಗಿ ಮುದ್ದೆಗೆ 45 ರೂ. ದರ ನಿಗದಿಪಡಿಸಲಾಗಿದ್ದು, ಎಲ್ಲರ ಅಚ್ಚುಮೆಚ್ಚಿನ ತಿನಿಸಾಗಿದೆ. ಕೋವಿಡ್ ಸಮಯದಲ್ಲಿ ಸುಮಾರು ಮಂದಿ ಸರ್ಕಾರಿ ಗುತ್ತಿಗೆ ನೌಕರರು ನಗರದಲ್ಲಿ ಸಿಲುಕಿಕೊಂಡಾಗ ಪ್ರತಿದಿನ ಅವರಿಗೆ ಆಹಾರವನ್ನು ತಲುಪಿಸುವ ಕಾರ್ಯ ಕೂಡ ಕೆಂಪಮ್ಮ ಮಾಡಿದ್ದಾರೆ.
ಬೆಳಗಿನ ಉಪಹಾರ ಮತ್ತು ಮಧ್ಯಾಹ್ನದ ಊಟವನ್ನು ಒದಗಿಸುವ ಹೋಟೆಲ್ ಭಾನುವಾರ ಮತ್ತು ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ, ಎಲ್ಲಾ ದಿನಗಳಲ್ಲಿ ಬೆಳಗ್ಗೆ 8 ರಿಂದ ಮಧ್ಯಾಹ್ನ 3 ರವರೆಗೆ ತೆರೆದಿರುತ್ತದೆ. ಸರಾಸರಿ, ಇದು ದಿನಕ್ಕೆ 100 - 150 ಗ್ರಾಹಕರಿಗೆ ಸೇವೆ ಸಲ್ಲಿಸುತ್ತದೆ. ಪಬ್ಲಿಕ್ ವರ್ಕ್ಸ್ ಡಿಪಾರ್ಟ್ಮೆಂಟ್ ಅಲ್ಲಿ ಅರೆಕಾಲಿಕ ಡ್ರೈವರ್ ಗಳಾಗಿ ನಿವೃತ್ತಿ ಹೊಂದಿದವರು ಇಲ್ಲಿ ಅರೆಕಾಲಿಕ ಅಡುಗೆಯವರು ಮತ್ತು ಕ್ಲೀನರ್‌ಗಳಾಗಿ ಮಾರ್ಪಟ್ಟಿದ್ದಾರೆ.
ಲೋಕೋಪಯೋಗಿ ಇಲಾಖೆಯಲ್ಲಿ ಡ್ರೈವರ್ ಆಗಿ ಸದ್ಯ ಸಹಾಯಕರಾಗಿರುವ ಪ್ರಕಾಶ್ ಮಾತನಾಡಿ, ವಿಧಾನಸೌಧ ಮತ್ತು ವಿಕಾಸಸೌಧದಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಕೆಂಪಮ್ಮ ಹೋಟೆಲ್ ಅಚ್ಚುಮೆಚ್ಚಿನ ತಾಣವಾಗಿದೆ. ಅನ್ನ ಮತ್ತು ಸಾಂಬಾರ್, ಉಪ್ಪಿಟ್ಟು, ರಾಗಿ ಮುದ್ದೆ, ಬಿಸಿಬೇಳೆ ಬಾತ್, ಪೊಂಗಲ್ ಮತ್ತು ಹೋಳಿಗೆ ಮೆಚ್ಚಿನ ತಿಂಡಿ ತಿನಿಸಾಗಿದೆ. ಇಲ್ಲಿ ಪ್ರತಿದಿನ ಮೆನು ಬದಲಾಗುತ್ತದೆ. ಎಲ್ಲವೂ ಫ್ರೆಶ್ ಆಗಿ ಮಾಡಲಾಗುತ್ತದೆ ಎಂದಿದ್ದಾರೆ.
ಕೆಂಪಮ್ಮ ತನ್ನ ಪರೋಪಕಾರಕ್ಕೂ ಹೆಸರುವಾಸಿಯಾಗಿದ್ದಾಳೆ. ನಿರ್ಗತಿಕ ಗ್ರಾಹಕರಿಂದ ಹಣ ಪಡೆಯಲು ನಿರಾಕರಿಸುತ್ತಾರೆ. ನಿತ್ಯ ಕನಿಷ್ಠ 25 ಗ್ರಾಹಕರಿಗೆ ಉಚಿತವಾಗಿ ಸೇವೆ ನೀಡುತ್ತಾರೆ. ಹೆಚ್ಚಾಗಿ ಭಿಕ್ಷುಕರು ಮತ್ತು ಚಿಂದಿ ಆಯುವವರು ಈ ತರಹದ ಗ್ರಾಹಕರಾಗಿದ್ದಾರೆ. ಕೆಂಪಮ್ಮ ವಿಕಲಚೇತನರಿಂದ ಕೂಡ ಹಣ ಪಡೆಯಲು ನಿರಾಕರಿಸುತ್ತಾರೆ ಎಂದು ಹೇಳಿದ್ದಾರೆ.
''ಬೆಳಗಿನ ಉಪಾಹಾರ ಮತ್ತು ಮಧ್ಯಾಹ್ನದ ಊಟವನ್ನು ಒದಗಿಸುವ ನಮ್ಮ ಹೋಟೆಲ್ ಭಾನುವಾರ ಮತ್ತು ಸರ್ಕಾರಿ ರಜಾದಿನಗಳನ್ನು ಹೊರತುಪಡಿಸಿ, ಎಲ್ಲ ದಿನಗಳಲ್ಲಿ ಬೆಳಿಗ್ಗೆ 8 ರಿಂದ ಮಧ್ಯಾಹ್ನ 3 ರವರೆಗೆ ತೆರೆದಿರುತ್ತದೆ. ಸರಾಸರಿ ದಿನಕ್ಕೆ 100 - 150 ಗ್ರಾಹಕರಿಗೆ ಸೇವೆ ನೀಡುತ್ತದೆ. ಈ ವರ್ಷ ಹೋಟೆಲ್ ಲೈಸನ್ಸ್ ನವೀಕರಣವಿದ್ದು, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಅನುಮತಿ ನೀಡಿದರೆ ಇಲ್ಲೇ ಶುಚಿ ರುಚಿಯಾದ ಆಹಾರ ನೀಡುವುದನ್ನು ಮುಂದುವರೆಸುವುದಾಗಿ'' ಕೆಂಪಮ್ಮ ಹೇಳಿದ್ದಾರೆ.
ಇದನ್ನೂ ಓದಿ :'ಬ್ರಾಹ್ಮಿನ್ ಕಾಫಿ ಬಾರ್' ಉಪಹಾರ ಗೃಹ ಹೆಸರಿನಲ್ಲಿ ಅಂಚೆ ಚೀಟಿ: ದೇಶದ ಇತಿಹಾಸದಲ್ಲಿ ಇದೇ ಮೊದಲು