ಬೆಂಗಳೂರು: ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ ಸರ್ಕಾರದ ಅನುಮತಿ ಇಲ್ಲದೆ 362.53 ಕೋಟಿ ಮೊತ್ತದ ಕಾಮಗಾರಿಗಳಿಗೆ ಮಂಡಳಿ ಹಂತದಲ್ಲಿ ಅನುಮೋದನೆ ನೀಡಿ ಕಾಮಗಾರಿಗಳ ಆರಂಭಕ್ಕೆ ಅನುಮತಿ ನೀಡಿದ್ದ ಅಧಿಕಾರಿಗಳ ಅಮಾನತು ಮಾಡಿ ಮಾತೃ ಇಲಾಖೆಗೆ ಕಳಿಸಿರುವುದಕ್ಕೆ ಸದಸ್ಯರು ತೃಪ್ತರಾಗಿಲ್ಲ. ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಸಚಿವರ ಸಮ್ಮುಖದಲ್ಲಿ ಅರ್ಧ ಗಂಟೆ ಚರ್ಚೆಗೆ ಅವಕಾಶ ನೀಡುವುದಾಗಿ ಉಪ ಸಭಾಪತಿ ಪ್ರಾಣೇಶ್ ರೂಲಿಂಗ್ ನೀಡಿದರು.
ವಿಧಾನ ಪರಿಷತ್ ಕಲಾಪದಲ್ಲಿ ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ವ್ಯಾಪ್ತಿಗೆ ಒಳಪಡುವ ವಿಧಾನಸಭಾ ಸದಸ್ಯರು ಮತ್ತು ಪರಿಷತ್ ಸದಸ್ಯರಿಗೆ ಸರ್ಕಾರ ಪ್ರತಿ ವರ್ಷ ತಲಾ ಒಂದು ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡುತ್ತಿದೆ. ಆದರೆ, ಕಳೆದ ಸಾಲಿನಲ್ಲಿ ಅನುದಾನ ಬಿಡುಗಡೆ ಮಾಡಿಲ್ಲ, ಕೆಲ ಕ್ಷೇತ್ರಕ್ಕೆ ಅಲ್ಪ ಪ್ರಮಾಣದ ಅನುದಾನ ಬಿಡುಗಡೆ ಮಾಡಿದ್ದಾರೆ. ಮತ್ತೆ ಕೆಲವರಿಗೆ 35 ಲಕ್ಷಕ್ಕೆ ಕ್ರಿಯಾ ಯೋಜನೆ ಸಲ್ಲಿಸಿ ಎಂದಿದ್ದಾರೆ. ಆದರೆ, ನಿಗದಿತ ಕಾಮಗಾರಿಗಳಿಗಿಂತ ಹೆಚ್ಚಿನ ಅನುದಾನ ಮಂಜೂರು ಮಾಡಿ ಅವ್ಯವಹಾರ ನಡೆಸಲಾಗಿದೆ. ಇದರ ಬಗ್ಗೆ ಸರ್ಕಾರ ತನಿಖೆ ನಡೆಸಬೇಕು ಎಂದು ನಿಯಮ 72ರ ಅಡಿ ಗಮನ ಸೆಳೆಯುವ ಸೂಚನೆಯಡಿ ಎಂ.ಎಲ್ ಅನಿಲ್ ಕುಮಾರ್ ಸರ್ಕಾರದ ಗಮನ ಸೆಳೆದರು. ಇದಕ್ಕೆ ಸಹಮತ ವ್ಯಕ್ತಪಡಿಸಿ ಸದಸ್ಯರಾದ ತಿಪ್ಪೇಸ್ವಾಮಿ, ನವೀನ್, ಅರುಣ್ ಸೇರಿದಂತೆ ಹಲವು ಸದಸ್ಯರು ದನಿಗೂಡಿಸಿದರು.
ಇದಕ್ಕೆ ಸಚಿವ ಡಿ ಸುಧಾಕರ್ ಪರ ಉತ್ತರಿಸಿದ ಸಭಾ ನಾಯಕ ಬೋಸರಾಜ್, ಮಂಡಳಿ ಕಾರ್ಯದರ್ಶಿಗಳು ಮಂಡಳಿ ಹಂತದಲ್ಲಿ ನಿರ್ಣಯ ಕೈಗೊಂಡು 362.53 ಕೋಟಿ ರೂಪಾಯಿ ಅನುಮೋದನೆಗೆ ಸರ್ಕಾರಕ್ಕೆ ಕಳಿಸಲಾಗಿತ್ತು. ಆದರೆ, ಸರ್ಕಾರ ಇದನ್ನು ಒಪ್ಪಿಲ್ಲ. ಆದರೂ ಸರ್ಕಾರದ ಅನುಮತಿ ಇಲ್ಲದೇ ಕಾಮಗಾರಿ ಆರಂಭಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿದ್ದಾರೆ. ಕಾರ್ಯದರ್ಶಿ, ಉಪಕಾರ್ಯದರ್ಶಿ ಮತ್ತು ನಿರ್ವಾಹಕರನ್ನು ಅಮಾನತು ಮಾಡಿ ಇಲಾಖಾ ವಿಚಾರಣೆಗೆ ಆದೇಶಿಸಲಾಗಿದೆ. ಆರೋಪಿತ ಅಧಿಕಾರಿಗಳ ಅಮಾನತು ಮಾಡಿ, ಮಂಡಳಿ ಸೇವೆಯಿಂದ ಬಿಡುಗಡೆ ಮಾಡಿ ಮಾತೃ ಇಲಾಖೆಗೆ ಕಳಿಸಿ, ಇನ್ನೂ ಕಟ್ಟುನಿಟ್ಟಿನ ಕ್ರಮ ಅಗತ್ಯ ಎನಿಸಿದಲ್ಲಿ ಅದನ್ನೂ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.