ಕರ್ನಾಟಕ

karnataka

ಮಂಗಳೂರಿನ ಹಲವು ಬಡಾವಣೆಗಳಿಗೆ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ - Mangaluru Water Supply

By ETV Bharat Karnataka Team

Published : Aug 1, 2024, 11:09 AM IST

Updated : Aug 1, 2024, 11:18 AM IST

ನೀರು ಸರಬರಾಜು ಪೈಪ್​ಲೈನ್​ಗೆ ಹಾನಿಯಾದ ಪರಿಣಾಮ ಮಂಗಳೂರು ನಗರದ ಹಲವು ಬಡಾವಣೆಗಳಿಗೆ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಿದೆ.

ಮಂಗಳೂರಿನ ಹಲವು ಬಡವಾಣೆಗಳಿಗೆ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ
ಮಂಗಳೂರಿನ ಹಲವು ಬಡವಾಣೆಗಳಿಗೆ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ (ETV Bharat)

ಮಂಗಳೂರು: ಭಾರಿ ಮಳೆ ಸುರಿಯುತ್ತಿದ್ದರೂ ಮಂಗಳೂರು ನಗರದಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಬಂಟ್ವಾಳದ ತುಂಬೆಯಿಂದ ಬೆಂದೂರ್‌ವೆಲ್‌ಗೆ ಬರುವ ಕುಡಿಯುವ ನೀರಿನ ಕೊಳವೆಗೆ ಪಡೀಲ್ ಬಳಿ ಹಾನಿಯಾಗಿದ್ದು, ಇದರಿಂದ ಮಂಗಳೂರು ನಗರದ ಶೇಕಡಾ 60 ಭಾಗಗಳಿಗೆ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ.

ಮಂಗಳವಾರ ರಾತ್ರಿ ಗೇಲ್ ಕಂಪನಿಯು ಕಾಮಗಾರಿ ನಡೆಸುತ್ತಿದ್ದ ಸಂದರ್ಭದಲ್ಲಿ ಕೊಳವೆಗೆ ಹಾನಿಯುಂಟಾಗಿತ್ತು. ಇದರಿಂದಾಗಿ ರಾತ್ರಿಯಿಂದಲೇ ನೀರಿನ ಸರಬರಾಜುಗೆ ಸಮಸ್ಯೆ ಎದುರಾಗಿದೆ. ಪರಿಣಾಮವಾಗಿ ನಗರದಾದ್ಯಂತ ಜನರು ನೀರಿಲ್ಲದೇ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಬಗ್ಗೆ ಈಟಿವಿ ಭಾರತ ಜೊತೆ ಮಾತನಾಡಿದ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, "ಮಂಗಳವಾರ ರಾತ್ರಿ ಕೊಳವೆಗೆ ಹಾನಿಯಾಗಿದ್ದು, ಇದನ್ನು ಸರಿಪಡಿಸಲು ನಿರಂತರ ಶ್ರಮ ವಹಿಸಲಾಗಿದೆ. ಇಂದು ರಾತ್ರಿಯೊಳಗೆ ಕೆಲಸ ಪೂರ್ಣಗೊಳಿಸಲು ಸೂಚಿಸಲಾಗಿದೆ. ನಾಳೆಯಿಂದ ನೀರು ಸರಬರಾಜು ಮಾಡಲು ಪ್ರಯತ್ನಿಸಲಾಗುವುದು" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ವ್ಯಾಪಕ ಮಳೆ: ಕರಾವಳಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ - Holiday for schools and colleges

ಸ್ಥಳಕ್ಕೆ ಮಂಗಳೂರು ಮಹಾನಗರ ಪಾಲಿಕೆ ವಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವಾ ಹಾಗೂ ಕಾಂಗ್ರೆಸ್ ನಿಯೋಗ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವಾ, ಮಂಗಳವಾರ ರಾತ್ರಿ ಗೇಲ್ ಕಂಪನಿಯ ಅವಾಂತರದಿಂದಾಗಿ ಪೈಪ್ ಲೈನ್ ಒಡೆದು ಹೋಗಿದೆ. ಈ ಬಗ್ಗೆ ಪಾಲಿಕೆ ಅಧಿಕಾರಿಗಳಿಗೆ ಮಾಹಿತಿ ನೀಡದೇ ಕಾಮಗಾರಿ ಆರಂಭಿಸಿದ್ದಾರೆ. ಇದರಿಂದಾಗಿ ಮಂಗಳೂರು ನಗರಕ್ಕೆ ಮೂರು ದಿನ ಕುಡಿಯುವ ನೀರು ಇಲ್ಲದಂತಾಗಿದೆ ಎಂದು ಅಸಮಾಧಾನ ಹೊರಹಾಕಿದರು.

ಮಾಜಿ ಮೇಯರ್ ಶಶಿಧರ್ ಹೆಗ್ಡೆ ಮಾತನಾಡಿ, ನೀರು ಸರಬರಾಜು ಪೈಪ್​ಗೆ ಹಾನಿಯಾಗಿದೆ. ಇದನ್ನು ಸರಿಪಡಿಸಲು 3 ರಿಂದ 4 ದಿನಗಳ ಆಗುವ ಸಾಧ್ಯತೆ ಇದೆ. ಈ ಬಗ್ಗೆ ಪಾಲಿಕೆ ಆಯುಕ್ತರ ಹತ್ತಿರ ಚರ್ಚೆ ಮಾಡಿದ್ದೇನೆ. ಹಾಗಾಗಿ ಮುಂದಿನ ದಿನಗಳಲ್ಲಿ ಇಂತಹ ಘಟನೆ ಆಗದ ರೀತಿಯಲ್ಲಿ ನೋಡಿಕೊಳ್ಳಬೇಕು ಎಂದರು.

ಪಾಲಿಕೆ ಸದಸ್ಯ ನವೀನ್ ಡಿಸೋಜಾ ಮಾತನಾಡಿ, ಗೇಲ್ ಗ್ಯಾಸ್ ಕಂಪೆನಿಯು ರಸ್ತೆಯನ್ನು ಅಗೆದ ಪರಿಣಾಮ ಕುಡಿಯುವ ನೀರಿನ ಪೈಪ್ ಲೈನ್ ಒಡೆದು ಹೋಗಿದ್ದು, ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಹಲವು ವಾರ್ಡ್‌ಗಳಿಗೆ ನೀರು ಸರಬರಾಜು ಸ್ಥಗಿತವಾಗಿದೆ. ಪಾಲಿಕೆ ಆಯುಕ್ತರು ಹಾಗೂ ಅಧಿಕಾರಿಗಳ ಮುತುವರ್ಜಿಯಿಂದ ತ್ವರಿತ ರೀತಿಯಲ್ಲಿ ಕಾಮಗಾರಿ ಆಗ್ತಾ ಇದೆ. ಗೇಲ್ ಕಂಪನಿಯು ಮಂಗಳೂರು ಮಹಾನಗರ ಪಾಲಿಕೆಗೆ ಸಾಕಷ್ಟು ತೊಂದರೆ ಕೊಡುತ್ತಿದ್ದಾರೆ. ಹೀಗಾಗಿ ಇವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.

ಇದನ್ನೂ ಓದಿ: ರಸ್ತೆ, ರೈಲು ಸಂಚಾರಕ್ಕೆ ವಿಘ್ನ, ವಿಮಾನಯಾನ ದುಬಾರಿ: ಮಳೆಗಾಲದಲ್ಲಿ ಮಂಗಳೂರು ಬೆಂಗಳೂರು ಪ್ರಯಾಣ ಕಷ್ಟ ಕಷ್ಟ! - Mangaluru Bengaluru Travelling

Last Updated : Aug 1, 2024, 11:18 AM IST

ABOUT THE AUTHOR

...view details