ಮೈಸೂರು :ನಂಜನಗೂಡು ತಾಲೂಕಿನ ದೊಡ್ಡಕವಲಂದೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಶೌಚಾಲಯವಿಲ್ಲದೇ ಇಲ್ಲಿನ ಮಹಿಳಾ ಶಿಕ್ಷಕಿಯರು ಮತ್ತು ಬಾಲಕಿಯರು ಬಯಲು ಶೌಚಾಲಯಕ್ಕೆ ತೆರಳುವಂತಾಗಿದೆ. ಹೀಗಾಗಿ, ವಿದ್ಯಾರ್ಥಿಗಳು ಶಾಲೆ ತೊರೆಯಲು ಮುಂದಾಗಿದ್ದಾರೆ.
ಈ ಶಾಲೆಯಲ್ಲಿ ಒಟ್ಟು 111 ವಿದ್ಯಾರ್ಥಿಗಳು ಒಂದರಿಂದ ಏಳನೆಯ ತರಗತಿಯವರೆಗೂ ವಿದ್ಯಾಭ್ಯಾಸ ಮಾಡುತ್ತಾರೆ. ಇಲ್ಲಿ ಐವತ್ತಕ್ಕೂ ಹೆಚ್ಚು ಬಾಲಕಿಯರಿದ್ದಾರೆ. ಬಯಲು ಶೌಚಾಲಯಕ್ಕೆ ತೆರಳುವ ಬಾಲಕಿಯರು ಮತ್ತು ಶಿಕ್ಷಕಿಯರಿಗೆ ಇದೀಗ ಆತಂಕ ಮತ್ತು ಭಯದ ವಾತಾವರಣ ಸೃಷ್ಟಿಯಾಗಿದೆ.
ಈ ಬಗ್ಗೆ ಮುಖ್ಯ ಶಿಕ್ಷಕಿ ಶಿಸಿಲಿಯಾ ಮೇರಿ ಅವರು ಮಾತನಾಡಿ, ''ಶೌಚಾಲಯ ನಿರ್ಮಾಣ ಮಾಡಿಕೊಡುವಂತೆ ಪಂಚಾಯ್ತಿಗೆ 9 ಬಾರಿ ಅರ್ಜಿ ಸಲ್ಲಿಸಿದ್ದೇನೆ. ಕಟ್ಟಿಕೊಡುತ್ತೇವೆ ಎಂದು ಹೇಳುತ್ತಾರೆ. ಮುಂದಿನ ವರ್ಷ ಎಂದು ಹೇಳ್ತಾರೆ. ಫೌಂಡೇಷನ್ ಮಾತ್ರ ಮಾಡಿದ್ದಾರೆ. ಇಲ್ಲಿ 111 ಮಕ್ಕಳು ಇದ್ದಾರೆ. ಮಹಿಳಾ ಶಿಕ್ಷಕಿಯರು ಹಾಗೂ ಬಾಲಕಿಯರು ಇದ್ದಾರೆ. ನಮಗೆ ಶೌಚಾಲಯಕ್ಕೆ ತುಂಬಾ ಕಷ್ಟ ಆಗಿದೆ. ಮಕ್ಕಳು ಹೊರಗಡೆ ಹೋಗುತ್ತಿರುತ್ತಾರೆ, ವಾಹನಗಳು ಓಡಾಡುತ್ತಿರುತ್ತವೆ. ಆದಷ್ಟು ಬೇಗ ನಮಗೆ ಶೌಚಾಲಯ ಮಾಡಿಕೊಡಬೇಕು'' ಎಂದು ಒತ್ತಾಯಿಸಿದ್ದಾರೆ.