ಮಂಗಳೂರು:"ತೆರಿಗೆ ವಿಚಾರದಲ್ಲಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಬರುತ್ತಿರುವ ಸರಿಯಾದ ಪಾಲು ನೀಡುತ್ತಿಲ್ಲ ಎನ್ನುವ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಸಚಿವರು ನೀಡುವ ಹೇಳಿಕೆ ಸರಿಯಲ್ಲ. ಕರ್ನಾಟಕ ಸೇರಿದಂತೆ ಯಾವುದೇ ರಾಜ್ಯದ ವಿಚಾರದಲ್ಲೂ ಮಲತಾಯಿ ಧೋರಣೆ ಮಾಡಿಲ್ಲ" ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ನಗರದ ಟಿ.ವಿ.ರಮಣ್ ಪೈ ಕನ್ವೆನ್ಶನ್ ಸೆಂಟರ್ನಲ್ಲಿ ಬುಧವಾರ ಸಿಟಿಜನ್ಸ್ ಕೌನ್ಸಿಲ್ ಮಂಗಳೂರು ಚಾಪ್ಟರ್ ವತಿಯಿಂದ ನಡೆದ ಸಂವಾದ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಕೇಳಿದ ಪ್ರಶ್ನೆಗಳಿಗೆ ಸಚಿವೆ ಉತ್ತರಿಸಿದರು.
"ಕರ್ನಾಟಕ ಸರ್ಕಾರ ಬುದ್ಧಿವಂತ ಮತದಾರರ ಜೊತೆಗೆ ಗೊಂದಲ ಸೃಷ್ಟಿಸಲು ತೆರಿಗೆ ಪಾಲು ನೀಡುತ್ತಿಲ್ಲ ಎಂದು ಹೇಳಿಕೊಂಡು ಬರುತ್ತಿದೆ. ನಾವು ಕರ್ನಾಟಕ ಬಿಡಿ, ಯಾವುದೇ ರಾಜ್ಯದ ವಿಚಾರದಲ್ಲೂ ತಾರತಮ್ಯ ಧೋರಣೆ ಮಾಡಿಲ್ಲ. ಈ ಹಿಂದೆ ಯುಪಿಎ ಸರ್ಕಾರ ನೀಡುತ್ತಿದ್ದ ಪಾಲು ಈಗ ಬಿಜೆಪಿ ಸರ್ಕಾರ ನೀಡುತ್ತಿರುವ ಪಾಲನ್ನು ತುಲನೆ ಮಾಡಿ ಹೇಳಲಿ. 2014ರಿಂದ 2024ರವರೆಗೆ ಕೇಂದ್ರ, ರಾಜ್ಯ ಸರ್ಕಾರಕ್ಕೆ ನೀಡಿದ ಪಾಲು ಮೊದಲಿಗಿಂತ ಹೆಚ್ಚಿದೆ. ಎಲ್ಲ ರಾಜ್ಯಗಳಿಗೆ ಹೆಚ್ಚಾಗಿ ನೀಡಲಾಗಿದೆ. ಮುಖ್ಯಮಂತ್ರಿ ಅವರು ಈ ವಿಚಾರದಲ್ಲಿ ಜವಾಬ್ದಾರಿಯುತವಾಗಿ ಮಾತನಾಡಬೇಕು. ಹಣಕಾಸು ಸಮಿತಿ ಎಲ್ಲವನ್ನು ನಿರ್ಧಾರ ಮಾಡುತ್ತದೆ. ಈ ವಿಚಾರದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ'' ಎಂದರು.
"ಬಿಹಾರ ಹಾಗೂ ಆಂಧ್ರ ಪ್ರದೇಶ ರಾಜ್ಯಗಳಿಗೆ ಹೆಚ್ಚಿನ ಅನುದಾನ ನೀಡಲು ಅಲ್ಲಿನ ನೆರೆ ಸಮಸ್ಯೆಯೇ ಕಾರಣ ಹೊರತು ಬೇರೆ ಯಾವುದೇ ಉದ್ದೇಶವಿಲ್ಲ. ನೇಪಾಳದ ಕೋಸಿ ನದಿಯಿಂದ ಬಿಹಾರ ರಾಜ್ಯ ಪ್ರತೀ ವರ್ಷವೂ ನೆರೆ ಸಂಕಷ್ಟಕ್ಕೆ ಗುರಿಯಾಗುತ್ತಿದೆ. ನೆರೆಯಿಂದಾಗಿ ಅಲ್ಲಿ ಸಾಕಷ್ಟು ಆಸ್ತಿ, ಪ್ರಾಣ ಹಾನಿಗಳು ಉಂಟಾಗುತ್ತಿರುತ್ತದೆ. ಇದಕ್ಕೆ ಪೂರ್ಣ ಪ್ರಮಾಣದ ಪರಿಹಾರ ನೀಡುವ ನಿಟ್ಟಿನಲ್ಲಿ ಭಾರತ ಹಾಗೂ ನೇಪಾಳದ ಜೊತೆಗೆ ಮಾತುಕತೆ ನಡೆಯುತ್ತಿದೆ. ಆದಷ್ಟು ಬೇಗ ಈ ಸಮಸ್ಯೆ ಬಗೆಹರಿಸುವ ಪ್ರಯತ್ನಗಳು ನಡೆಯುತ್ತಿದೆ. ಇದೇ ರೀತಿ, ಆಂಧ್ರದಲ್ಲಿ ಪೊಲಾವರಂ ಡ್ಯಾಂನಿಂದಾಗಿ ಸಾಕಷ್ಟು ಹಾನಿ ಸಂಭವಿಸುವ ಕಾರಣಕ್ಕೆ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಈ ರಾಜ್ಯಗಳಿಗೆ ನೀಡಲಾಗಿದೆಯೇ ಹೊರತು ಕೇರಳ ಮತ್ತು ಮಣಿಪುರ ರಾಜ್ಯಗಳ ಮೇಲೆ ತಾರತಮ್ಯ ಧೋರಣೆ ತಾಳಿಲ್ಲ" ಎಂದು ಉತ್ತರಿಸಿದರು.
ಜಿಎಸ್‌ಟಿ ಕೌನ್ಸಿಲ್ ನಿರ್ಧಾರ:ದೇಶದ ತೆರಿಗೆ ವ್ಯವಸ್ಥೆಯಲ್ಲಿ ಒಂದು ವಸ್ತುವಿಗೆ ಒಂದು ತೆರಿಗೆ, ಅಗತ್ಯ ವಸ್ತುಗಳಿಗೆ ಮತ್ತೊಂದು ತೆರಿಗೆ ವಿಧಿಸಲಾಗುತ್ತದೆ ಎಂಬ ಪ್ರಶ್ನೆಗೆ ಹಣಕಾಸು ಸಚಿವರು, "ವಸ್ತುಗಳ ವಿಚಾರದಲ್ಲಿ ಜಿಎಸ್‌ಟಿ ವಿಧಿಸಲು ಜಿಎಸ್‌ಟಿ ಕೌನ್ಸಿಲ್ ಇರುತ್ತದೆ. ಇಲ್ಲಿ ದೇಶದ ಎಲ್ಲ ರಾಜ್ಯಗಳ ಹಣಕಾಸು ಸಚಿವರ ಜೊತೆಯಲ್ಲಿ ನಾನೂ ಕೂಡ ಇರುತ್ತೇನೆ. ಎಲ್ಲ ಸಚಿವರಿಂದ ಮಾಹಿತಿ ಪಡೆದುಕೊಂಡು ಸಮಿತಿಯಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಈ ಬಾರಿ ಜಿಎಸ್‌ಟಿ ಕೌನ್ಸಿಲ್ ಸಭೆ ಡಿಸೆಂಬರ್‌ನಲ್ಲಿ ನಡೆಯಲಿದ್ದು, ಇದರಲ್ಲಿ ಕೆಲವೊಂದು ವಸ್ತುವಿನ ಜಿಎಸ್‌ಟಿ ವಿಚಾರದಲ್ಲಿ ಬದಲಾವಣೆಗಳಾಗುವ ಸಾಧ್ಯತೆ ಇದೆ" ಎಂದರು.
ಮಕ್ಕಳು ಕಲಿಯಬೇಕಾದ ಹಣಕಾಸು ಪಾಠವೇನು?:ಮಂಗಳೂರಿನ ಸಂತ ಅಲೋಶಿಯಸ್ ಗೊನ್ವಾಗ ಶಾಲೆಯ ಐದನೇ ತರಗತಿ ವಿದ್ಯಾರ್ಥಿ ರಿಷ್ಯಂತ್, ಹಣಕಾಸು ಸಚಿವರಿಗೆ ಹಣಕಾಸಿನ ವಿಚಾರದಲ್ಲಿ ಮಕ್ಕಳು ಕಲಿಯಬೇಕಾದ ಪಾಠ ಯಾವುದು ಎಂದು ಪ್ರಶ್ನಿಸಿದರು. ಸಚಿವರು, ಬಾಲಕನ್ನು ವೇದಿಕೆಗೆ ಕರೆಸಿಕೊಂಡು, "ಹೆತ್ತವರು ಬ್ಯಾಂಕ್‌ನಲ್ಲಿ ಇದ್ದಾರಾ?, ತಾಯಿ ಖಜಾನೆ ಇಲಾಖೆಯಲ್ಲಿ ದುಡಿಯುತ್ತಿದ್ದಾರಾ" ಎಂದು ಪ್ರಶ್ನಿಸಿದರು. ರಿಷ್ಯಂತ್‌ನ ಪ್ರಶ್ನೆಗೆ ಶಹಬ್ಬಾಸ್ ಎನ್ನುತ್ತಾ, ಮಕ್ಕಳಲ್ಲಿ ಹಣಕಾಸಿನ ಅರಿವು ಇರಲೇಬೇಕು. ಎಳೆ ವಯಸ್ಸಿನಲ್ಲಿ ಇಂತಹ ಹಣಕಾಸಿನ ಶಿಕ್ಷಣ ಬಂದ್ರೆ ಅವರಿಗೆ ಉಳಿತಾಯ ವಿಚಾರ ತಿಳಿದುಬಿಡುತ್ತದೆ ಎಂಬ ಮಂಗಳೂರಿನ ಸಿಂಡಿಕೇಟ್ ಬ್ಯಾಂಕ್ನ ಧ್ಯೇಯವಾಕ್ಯವನ್ನು ನೆನಪಿಸಿದರು. ಮಕ್ಕಳಲ್ಲಿ ಉಳಿತಾಯ ಮಾಡುವ ಶಕ್ತಿ ಬೆಳೆಯುವ ಜೊತೆಯಲ್ಲಿ ಅದನ್ನು ಬಳಸುವ ಜವಾಬ್ದಾರಿ ಕೂಡ ಬೆಳೆಯಬೇಕಿದೆ ಎಂದು ತಿಳಿಸಿದರು.
ಇದನ್ನೂ ಓದಿ:'ಚಿಲ್ಲರೆ' ಜಗಳವಿಲ್ಲ, ಸ್ಕ್ಯಾನ್ ಮಾಡಿ ಟಿಕೆಟ್ ಪಡೆಯಿರಿ: ಡಿಜಿಟಲೀಕರಣದಲ್ಲಿ NWKRTC ಯಶಸ್ಸು, ಸಂಸ್ಥೆಗೂ ಪ್ರಯಾಣಿಕರಿಗೂ ಅನುಕೂಲ