ಕರ್ನಾಟಕ

karnataka

ETV Bharat / state

ರಾಜ್ಯಪಾಲರ ನಿರ್ಧಾರದಲ್ಲಿ ಯಾವುದೇ ದೋಷ ಕಂಡು ಬಂದಿಲ್ಲ: ಹೈಕೋರ್ಟ್ - High Court - HIGH COURT

ಮಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು, ಪ್ರಕರಣದ ತನಿಖೆಗೆ ಅನುಮತಿ ನೀಡಿರುವ ನಿರ್ಧಾರದಲ್ಲಿ ಯಾವುದೇ ದೋಷ ಕಂಡು ಬಂದಿಲ್ಲ ಎಂದು ಹೈಕೋರ್ಟ್​ ತಿಳಿಸಿದೆ.

high-court
ಹೈಕೋರ್ಟ್ (ETV Bharat)

By ETV Bharat Karnataka Team

Published : Sep 24, 2024, 10:52 PM IST

ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ತಮ್ಮ ಪತ್ನಿ ಹೆಸರಿಗೆ ಬದಲಿ ನಿವೇಶನ ಹಂಚಿಕೆ ಸಂಬಂಧಿಸಿದಂತೆ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದ ಕ್ರಮವನ್ನು ಎತ್ತಿ ಹಿಡಿದಿರುವ ಹೈಕೋರ್ಟ್, ರಾಜ್ಯಪಾಲರು ವಿವೇಚನೆ ಬಳಸಿಯೇ ಅನುಮತಿ ನೀಡಿದ್ದ ನಿರ್ಧಾರದಲ್ಲಿ ದೋಷ ಕಂಡು ಬಂದಿಲ್ಲ ಎಂದು ತಿಳಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೆ, ರಾಜ್ಯಪಾಲರು ಕೈಗೊಂಡಿರುವ ಸ್ವತಂತ್ರ ನಿರ್ಧಾರದಲ್ಲಿ ಯಾವುದೇ ಲೋಪ ಕಂಡು ಬರುತ್ತಿಲ್ಲ. ನಿರ್ಧಾರ ತೆಗೆದುಕೊಳ್ಳುವ ಪ್ರಾಧಿಕಾರ (ಸಕ್ಷಮ ಪ್ರಾಧಿಕಾರ) ಅದರಲ್ಲೂ ರಾಜ್ಯಪಾಲರಂತಹ ಉನ್ನತ ಕಚೇರಿಯು ಕಡತದಲ್ಲಿರುವ ಕಾರಣಗಳನ್ನು ದಾಖಲಿಸಿದರೆ ಸಾಕಾಗುತ್ತದೆ. ಆ ಕಾರಣಗಳು ರಾಜ್ಯಪಾಲರ ಆದೇಶದ ಭಾಗದಲ್ಲಿ ಸಂಕ್ಷಿಪ್ತವಾಗಿದೆ. ಕಾರಣಗಳು ಕಡತದಲ್ಲಿರಬೇಕು. ಮೊದಲ ಬಾರಿಗೆ ಕಾರಣಗಳನ್ನು ಆಕ್ಷೇಪಣೆಗಳ ಮೂಲಕ ಸಾಂವಿಧಾನಿಕ ನ್ಯಾಯಾಲಯದ ಮುಂದೆ ತರಲಾಗುವುದಿಲ್ಲ ಎಂದು ಪೀಠ ತಿಳಿಸಿದೆ.

ಆದೇಶದಲ್ಲಿನ ಪ್ರಮುಖ ಅಂಶಗಳು :ದೂರುದಾರರು ದೂರು ದಾಖಲಿಸಿರುವ ಅಥವಾ ರಾಜ್ಯಪಾಲರ ಕೈಗಳಿಂದ ಪೂರ್ವಾನುಮತಿ ಕೋರಿದ ಕ್ರಮ ಸಮರ್ಥನೀಯವಾಗಿದೆ. ವಾಸ್ತವ ಪರಿಸ್ಥಿತಿಯಲ್ಲಿ ಪ್ರಕರಣದ ತನಿಖೆಗೆ ಪಿಸಿ ಕಾಯ್ದೆ ಸೆಕ್ಷನ್ 17ಎ ಅಡಿ ಪೂರ್ವಾನುಮತಿ ಕಡ್ಡಾಯ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿಯ ಅಪರಾಧಗಳ ಸಂಬಂಧ ಸಾರ್ವಜನಿಕ ಸೇವಕರ ವಿರುದ್ಧದ ಆರೋಪಗಳ ಕುರಿತು ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಮತ್ತು ಬಿಎನ್‌ಎನ್‌ಎಸ್ ಸೆಕ್ಷನ್ 223ರ ಅಡಿ ಖಾಸಗಿ ದೂರು ದಾಖಲಿಸಿದ ಸಂದರ್ಭದಲ್ಲಿ ಸೆಕ್ಷನ್ 17ಎ ಅಡಿ ತನಿಖೆಗೆ ಪೂರ್ವಾನುಮತಿ ಕೋರುವುದು ದೂರುದಾರನ ಜವಾಬ್ದಾರಿಯಾಗಿರುತ್ತದೆ.

ಅಸಾಧಾರಣ ಸಂದರ್ಭದಲ್ಲಿ ರಾಜ್ಯಪಾಲರು ವಿವೇಚನೆ ಬಳಸಬಹುದು:ಸಂವಿಧಾನದ ಪರಿಚ್ಛೇದ 163ರ ಪ್ರಕಾರ ರಾಜ್ಯಪಾಲರು ಸಾಮಾನ್ಯ ಸಂದರ್ಭದಲ್ಲಿ ಸಚಿವ ಸಂಪುಟದ ಸಲಹೆ ಹಾಗೂ ಸಲಹೆ ಆಧಾರದಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಆದರೆ, ಅಸಾಧಾರಣ ಸಂದರ್ಭದಲ್ಲಿ ರಾಜ್ಯಪಾಲರು ಸ್ವತಂತ್ರ ನಿರ್ಧಾರಗಳನ್ನೂ ತೆಗೆದುಕೊಳ್ಳಬಹುದು. ಹಾಲಿ ಪ್ರಕರಣವು ಅಂತಹ ಅಸಾಧಾರಣ ಸಂದರ್ಭದ್ದಾಗಿದೆ. ರಾಜ್ಯಪಾಲರ ಆದೇಶವು ಎಲ್ಲಿಯೂ ಸಹ ವಿವೇಚನ ರಹಿತವಾಗಿಲ್ಲ. ರಾಜ್ಯಪಾಲರು ವಿವೇಚನೆ ರಹಿತ ಬಳಸಿಲ್ಲ ಎಂಬ ಪ್ರಕರಣ ಇದಾಗಿಲ್ಲ. ರಾಜ್ಯಪಾಲರು ಸಂಪೂರ್ಣ ವಿವೇಚನೆಯುತವಾಗಿ ಆದೇಶ ಹೊರಡಿಸಿದ್ದಾರೆ.

ಈ ಆದೇಶ ಸೆಕ್ಷನ್​ 17 ಎಗೆ ಸಿಮೀತವಾಗಿದೆ:ಪೂರ್ವಾನುಮತಿ ನೀಡುವ ಮುನ್ನ ವಿಚಾರಣೆಯ ಅವಕಾಶವನ್ನು ನೀಡುವುದು ಪಿಸಿ ಕಾಯ್ದೆ ಸೆಕ್ಷನ್ 170 ಅಡಿಯಲ್ಲಿ ಕಡ್ಡಾಯವಲ್ಲ. ಸಕ್ಷಮ ಪ್ರಾಧಿಕಾರವು ಅವಕಾಶ ನೀಡಲು ಬಯಸಿದರೆ, ಆ ಆಯ್ಕೆ ಸದಾ ಮುಕ್ತವಾಗಿರುತ್ತದೆ. ರಾಜ್ಯಪಾಲರು ಆತುರ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾದ ಆರೋಪ ಇಡೀ ಆದೇಶವನ್ನು ಕಲುಷಿತಗೊಳಿಸುವುದಿಲ್ಲ. ರಾಜ್ಯಪಾಲರು ಆದೇಶವನ್ನು ಸೆಕ್ಷನ್ 17ಎ ಅಡಿ ಪೂರ್ವಾನುಮತಿ ನೀಡಿರುವುದಕ್ಕೆ ಮಾತ್ರ ಸೀಮಿತವಾಗಿ ಓದಲಾಗಿದೆ. ಬಿಎನ್‌ಎನ್‌ಎಸ್ ಸೆಕ್ಷನ್ 218 ಅಡಿ ನೀಡುವ ಆದೇಶವಲ್ಲ. ಅರ್ಜಿಯಲ್ಲಿ ವಿವರಿಸಲಾಗಿರುವ ವಾಸ್ತವಾಂಶಗಳನ್ನು ಪರಿಶೀಲಿಸಿದರೆ ಪ್ರಕರಣದಲ್ಲಿ ಫಲಾನುಭವಿ ಹೊರಗಿನವರಲ್ಲ. ಮುಖ್ಯಮಂತ್ರಿಗಳ ಪತ್ನಿಯಾಗಿದ್ದಾರೆ. ಆದ್ದರಿಂದ ನಿಸ್ಸಂದೇಹವಾಗಿ ಪ್ರಕರಣದ ತನಿಖೆ ನಡೆಸುವ ಅಗತ್ಯವಿದೆ ಎಂದು ಪೀಠ ತಿಳಿಸಿದೆ.

ಪ್ರಕರಣದ ಹಿನ್ನೆಲೆ :ಮುಖ್ಯಮಂತ್ರಿಗಳ ಪತ್ನಿ ಅವರಿಗೆ ಮೈಸೂರಿನ ದೇವನೂರು ಬಡಾವಣೆಯಲ್ಲಿ ದೇವನೂರು 3ನೇ ಹಂತದ ಬಡಾವಣೆ ಅಭಿವೃದ್ಧಿಗೆ ವಶಪಡಿಸಿಕೊಂಡಿದೆ ಎನ್ನಲಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ ಸೇರಿದ ಮೈಸೂರಿನ ಕೆಸರೆ ಗ್ರಾಮದ ಸರ್ವೇ ನಂಬರ್ 464 ರ 3 ಎಕರೆ 16 ಗುಂಟೆ ಜಮೀನಿನ ಬದಲಿಗೆ ಸುಮಾರು 56 ಕೋಟಿ ಮೌಲ್ಯದ 14 ನಿವೇಶನಗಳನ್ನು ಅಕ್ರಮವಾಗಿ ನೀಡಲಾಗಿದೆ. ಇದರಲ್ಲಿ ಸಿಎಂ ಸಿದ್ದರಾಮಯ್ಯ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದು, ಅಧಿಕಾರಿಗಳ ಮೇಲೆ ಪ್ರಭಾವ ಬೀರಿದ್ದಾರೆ. ಈ ಸಂಬಂಧ ತನಿಖೆ/ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ಕೋರಿ ಸಾಮಾಜಿಕ ಕಾರ್ಯಕರ್ತ ಟಿ. ಜೆ ಅಬ್ರಹಾಂ, ಸ್ನೇಹಮಯಿ ಕೃಷ್ಣ ಮತ್ತು ಜೆಡಿಎಸ್ ಕಾನೂನು ಘಟಕದ ಅಧ್ಯಕ್ಷ ಎಸ್. ಪಿ ಪ್ರದೀಪ್ ಕುಮಾರ್ ಕಳೆದ ಜೂನ್-ಜುಲೈನಲ್ಲಿ ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಿದ್ದರು.

ಆರೋಪ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯಪಾಲರು ಶೋಕಾಸ್ ನೋಟಿಸ್ ಜಾರಿ ಮಾಡಿ ವಿವರಣೆ ಕೇಳಿದ್ದರು. ಈ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯ ಸಚಿವ ಸಂಪುಟ ವಿವರಣೆಯನ್ನೂ ನೀಡಿತ್ತು. ಬಳಿಕ ಮುಖ್ಯಮಂತ್ರಿಗಳ ವಿರುದ್ಧ ತನಿಖೆ/ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿ ರಾಜ್ಯಪಾಲರು ಆ. 17ರಂದು ಆದೇಶಿಸಿದ್ದರು. ಅದನ್ನು ಪ್ರಶ್ನಿಸಿ ಮುಖ್ಯಮಂತ್ರಿಗಳು ಆ.19 ರಂದು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.

ಅಂದೇ ಅರ್ಜಿ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ವಕೀಲ ರಾಜ್ಯಪಾಲರ ಆದೇಶಕ್ಕೆ ತಡೆಯಾಜ್ಞೆ ನೀಡುವಂತೆ ಕೋರಿದ್ದರು. ತಡೆಯಾಜ್ಞೆ ನೀಡಲು ಪ್ರತಿವಾದ ಪರ ವಕೀಲರು ಆಕ್ಷೇಪಿಸಿದ್ದರು. ಕೊನೆಗೆ ಹೈಕೋರ್ಟ್, ಪ್ರಾಸಿಕ್ಯೂಷನ್ ಆಧರಿಸಿ ಮುಖ್ಯಮಂತ್ರಿಗಳ ವಿರುದ್ಧ ಆತುರದ ಕ್ರಮ ಜರುಗಿಸದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮತ್ತು ಲೋಕಾಯುಕ್ತ ಪೊಲೀಸರಿಗೆ ನಿರ್ದೇಶಿಸಿ, ಮಧ್ಯಂತರ ಆದೇಶ ಮಾಡಿತ್ತು. ನಂತರ ಸುದೀರ್ಘವಾಗಿ ವಾದ-ಪ್ರತಿವಾದ ಆಲಿಸಿ ಸೆ. 12 ರಂದು ವಿಚಾರಣೆ ಪೂರ್ಣಗೊಳಿಸಿದ್ದ ಹೈಕೋರ್ಟ್ ತೀರ್ಪು ಕಾಯ್ದಿರಿಸಿತ್ತು. ಮಂಗಳವಾರ ಆದೇಶ ಪ್ರಕಟಿಸಿತ್ತು.

ಇದನ್ನೂ ಓದಿ :ಸಿಎಂ, ತಮ್ಮ ಪತ್ನಿ ಜೀವನದಲ್ಲಿ ಏನು ನಡೆಯುತ್ತಿದೆ ಎಂಬುದರ ಕುರಿತು ಅರಿವಿಲ್ಲದಿರಲು ಸಾಧ್ಯವಿಲ್ಲ; ಹೈಕೋರ್ಟ್ - High Court

ABOUT THE AUTHOR

...view details