ಮೈಸೂರು : ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದಿರುವ 300 ಕೋಟಿ ಮೌಲ್ಯದ 142 ಸೈಟ್ಗಳಿಗೂ ನಮ್ಮ 14 ಸೈಟ್ ಗಳಿಗೂ ಯಾವುದೇ ಸಂಬಂಧವಿಲ್ಲ. ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ತಪ್ಪು ಸಂದೇಶ ಹೋಗಲಿ ಎಂದು ಈ ರೀತಿ ಮಾಡಲಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಕ್ರಮದ ಬಗ್ಗೆ ತನಿಖೆ ನಡೆಸುತ್ತಿರುವ ಇಡಿ, 300 ಕೋಟಿ ಮೌಲ್ಯದ 142 ಸೈಟ್ಗಳನ್ನ ವಶಕ್ಕೆ ಪಡೆದಿದೆ. ಈ ವಿಚಾರವನ್ನು ಇಡಿ ತನ್ನ ಅಧಿಕೃತ ಖಾತೆಯಲ್ಲಿ ಟ್ವೀಟ್ ಮಾಡಿತ್ತು. ಆ ಟ್ವೀಟ್ ಅನ್ನು ಸಿಎಂ ಸಿದ್ದರಾಮಯ್ಯ ಅವರಿಗೂ ಟ್ಯಾಗ್ ಮಾಡಲಾಗಿದೆ. ಈ ಕುರಿತು ಜಲದರ್ಶಿನಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಎಂಎಲ್ಸಿ ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಇಡಿ ಅವರು ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ದೇಶಪೂರ್ವಕವಾಗಿ ಟ್ಯಾಗ್ ಮಾಡಿ ಟ್ವೀಟ್ ಮಾಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ತಪ್ಪು ಸಂದೇಶ ಹೋಗಲಿ ಎಂದು ಈ ರೀತಿ ಮಾಡಲಾಗಿದೆ. ಇದನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡುವ ಅಗತ್ಯ ಇರಲಿಲ್ಲ ಎಂದರು.
ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸುವ ಸಲುವಾಗಿ ಇದೇ 27ರಂದು ನ್ಯಾಯಾಲಯದಲ್ಲಿ ವಿಚಾರಣೆ ಇದೆ. ಹೀಗಾಗಿ ನ್ಯಾಯಾಲಯದ ದಿಕ್ಕು ತಪ್ಪಿಸುವ ಸಲುವಾಗಿ ಈ ರೀತಿಯಾಗಿ ಮಾಡಿರಬಹುದು ಎಂದು ಸಿಎಂ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಅನುಮಾನ ವ್ಯಕ್ತಪಡಿಸಿದರು.
ಇಡಿ ಅವರು ಮುಡಾದಲ್ಲಿ ಬೇರೆಯವರು ಮಾಡಿರುವ ಹಗರಣಗಳ ಕುರಿತು ತನಿಖೆ ಮಾಡಿದ್ದಾರೆ. ಅದನ್ನು ಟ್ವೀಟ್ ಮಾಡಿದ್ದಾರೆ. ಮುಡಾದಲ್ಲಿ ಬೇನಾಮಿ ಸೈಟ್ಗಳು ಹಂಚಿಕೆ ಆಗಿರುವುದೇ ಬಿಜೆಪಿ ಆಡಳಿತದ ಅವಧಿಯಲ್ಲಿ. ಮುಡಾ ಹಗರಣದ ಹೊಣೆಯನ್ನು ಬಿಜೆಪಿಯೇ ಹೊರಬೇಕು ಎಂದು ಅವರು ಹೇಳಿದರು.
ಇದನ್ನೂ ಓದಿ : ಮುಡಾ ಕೇಸ್ ಬಗ್ಗೆ ಇ.ಡಿ ಪತ್ರಿಕಾ ಪ್ರಕಟಣೆ ರಾಜಕೀಯ ಪ್ರೇರಿತ : ಸಿಎಂ ಸಿದ್ದರಾಮಯ್ಯ - CHIEF MINISTER SIDDARAMAIAH