ಮಂಡ್ಯ:ಮೈತ್ರಿ ಅಭ್ಯರ್ಥಿಯಾಗಿ ಕುಮಾರಸ್ವಾಮಿ ಸಂಸತ್ ಪ್ರವೇಶಿಸುತ್ತಿದ್ದಾರೆ. ಅವರಿಂದ ತೆರವಾದ ಸ್ಥಾನಕ್ಕೆ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನೇ ನಿಲ್ಲಿಸುತ್ತಾರಾ ಅಥವಾ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಸ್ಪರ್ಧಿಸುತ್ತಾರಾ ಅನ್ನೋ ಪ್ರಶ್ನೆಗಳೆದ್ದಿರುವ ಈ ಸಂದರ್ಭದಲ್ಲಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, "ನಾನು 24/7 ರಾಜಕಾರಣಿ. ಇನ್ನು ಸಿನಿಮಾ ಸಂಪೂರ್ಣ ಬಂದ್" ಎಂದಿದ್ದಾರೆ.
ಇಂದು ಮಂಡ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹಲವು ವಿಷಯಗಳ ಬಗ್ಗೆ ಅವರು ಮಾತನಾಡಿದರು.
"ಕುಮಾರಸ್ವಾಮಿಯವರ ಮೇಲೆ ವಿಶ್ವಾಸವಿಟ್ಟು ಜನ ಕಾಂಗ್ರೆಸ್ ಪಕ್ಷವನ್ನು ಸೋಲಿಸಿದ್ದಾರೆ. ಕುಮಾರಸ್ವಾಮಿಯವರು ಐದು ವರ್ಷ ಉತ್ತಮವಾಗಿ ಕೆಲಸ ಮಾಡುತ್ತಾರೆ. ಕೇಂದ್ರದಲ್ಲಿ ಸಚಿವ ಸ್ಥಾನಕ್ಕೆ ಡಿಮ್ಯಾಂಡ್ ಮಾಡಲ್ಲ. ಅವರ ಹಿರಿತನದ ಆಧಾರದ ಮೇಲೆ ಉತ್ತಮ ಸ್ಥಾನ ಸಿಗಲಿದೆ" ಎಂದರು. ಇದೇ ವೇಳೆ, "ಮಾಜಿ ಸಂಸದೆ ಸುಮಲತಾ ಅವರು ಕುಮಾರಸ್ವಾಮಿ ಗೆಲುವು ಬಯಸಿದ್ದರು. ಪ್ರಚಾರ ವೇದಿಕೆ ಹಂಚಿಕೊಳ್ಳದೇ ಇದ್ರೂ ಅವರ ಬೆಂಬಲಿಗರಿಗೆ ಹೇಳಿದ್ದರು" ಎಂದು ತಿಳಿಸಿದರು.