ಬೆಂಗಳೂರು: ಲೋಕಸಭೆ ಚುನಾವಣೆಗೆ ಜೆಡಿಎಸ್ ಬಿರುಸಿನ ಸಿದ್ಧತೆಗಳನ್ನು ಆರಂಭಿದ್ದು, ಅದಕ್ಕಾಗಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು, ಸರಣಿ ಸಭೆಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಅದರ ಮುಂದುವರಿದ ಭಾಗವಾಗಿ ಅವರು ಇಂದು ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದ ಎಲ್ಲ ತಾಲೂಕುಗಳ ಮುಖಂಡರ ಜೊತೆ ಪ್ರತ್ಯೇಕ ಸಭೆಗಳನ್ನು ನಡೆಸಿ ಮಹತ್ವದ ಸಮಾಲೋಚನೆ ನಡೆಸಿದರು. ಪಕ್ಷದ ರಾಜ್ಯ ಕಚೇರಿ ಜೆ ಪಿ ಭವನದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ನಿಖಿಲ್, ಪಕ್ಷವನ್ನು ಜಿಲ್ಲಾ, ತಾಲೂಕು ಹಾಗೂ ಅದಕ್ಕಿಂತ ತಳಮಟ್ಟದಲ್ಲಿ ಸಂಘಟನೆ ಮಾಡುವ ನಿಟ್ಟಿನಲ್ಲಿ ಯುವ ಜನತಾದಳ ಮುಖಂಡರಿಗೆ ಸಲಹೆ - ಸೂಚನೆಗಳನ್ನು ಕೊಟ್ಟಿದ್ದಾರೆ.
ಚಿಕ್ಕಬಳ್ಳಾಪುರ ಕ್ಷೇತ್ರದ ಸಭೆ: ನಿಖಿಲ್ ಕುಮಾರಸ್ವಾಮಿ ಅವರು ಇಂದು ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದ ಗೌರಿಬಿದನೂರು, ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಯಲಹಂಕ, ದೊಡ್ಡಬಳ್ಳಾಪುರ, ನೆಲಮಂಗಲ, ದೇವನಹಳ್ಳಿ, ಹೊಸಕೋಟೆ ತಾಲೂಕುಗಳ ಮುಖಂಡರ ಜೊತೆ ಸಭೆ ನಡೆಸಿ, ಸ್ಥಳೀಯ ಪರಿಸ್ಥಿತಿಯ ಮಾಹಿತಿ ಪಡೆದರು. ಮುಂಬರುವ ಚುನಾವಣೆಯಲ್ಲಿ ಮೈತ್ರಿಕೂಟದ ಅಭ್ಯರ್ಥಿಯು ಶತಾಯಗಾಯ ಗೆಲುವು ಸಾಧಿಸಲೇಬೇಕು ಎಂಬ ನಿಟ್ಟಿನಲ್ಲಿ ನಿಖಿಲ್ ಅವರು ಮುಖಂಡರಿಗೆ ಕೆಲ ಮಹತ್ವದ ಸಲಹೆ ಸೂಚನೆಗಳನ್ನು ನೀಡಿದರು.
ಗೌಡರು, ಕುಮಾರಣ್ಣ ಗುರಿಗಾಗಿ ಕೆಲಸ ಮಾಡುತ್ತೇವೆ:ಸಭೆಯಲ್ಲಿ ಮತನಾಡಿದ ನಿಖಿಲ್ ಕುಮಾರಸ್ವಾಮಿ, "ರಾಜ್ಯದ ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಚಿಂತನ ಮಂಥನದ ಮೂಲಕ ರಾಜ್ಯದಲ್ಲಿನ ಪ್ರಮುಖ ವಿಷಯಗಳನ್ನು ಗುರುತಿಸಿ ಕೇಂದ್ರದ ನಾಯಕರುಗಳೊಡನೆ ಈ ಕುರಿತಾಗಿ ಚರ್ಚೆ ನಡೆಸಲಿದ್ದೇವೆ. ನಮ್ಮ ನಾಯಕರಾದ ಹೆಚ್ ಡಿ ದೇವೇಗೌಡ ಮತ್ತು ಹೆಚ್ ಡಿ ಕುಮಾರಸ್ವಾಮಿ ಅವರು ಕರ್ನಾಟಕದ ಜನರ ಹಿತಾಸಕ್ತಿ ಕಾಪಾಡಲು ಬಿಜೆಪಿಯೊಂದಿಗೆ ಕೈಜೋಡಿಸಿದ್ದಾರೆ. ರಾಜ್ಯದ ಜನರ ಹಿತ ಕಾಯಲು ಸಿಗುವ ಯಾವುದೇ ಚಿಕ್ಕ ಅವಕಾಶವನ್ನು ನಾವು ಬಿಡುವುದಿಲ್ಲ, ಇದು ನಮ್ಮ ಪಕ್ಷದ ಸಂಕಲ್ಪ. ಕರ್ನಾಟಕದ ಜನರ ಪರವಾಗಿ ದನಿ ಎತ್ತುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ. ರಾಜ್ಯದ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರವೇ ಅಡ್ಡಿಯಾಗಿದೆ. ಪ್ರಾದೇಶಿಕ ಪಕ್ಷವಾಗಿ ಕನ್ನಡಿಗರ ಹಿತಾಸಕ್ತಿಯನ್ನು ಕಾಪಾಡುವುದೂ ನಮ್ಮ ಕರ್ತವ್ಯ” ಎಂದರು.