ಕರ್ನಾಟಕ

karnataka

ETV Bharat / state

ಕರಾವಳಿಗೆ ಹೊಸ ಪ್ರವಾಸೋದ್ಯಮ ನೀತಿ ರೂಪಿಸಿ ಉದ್ಯೋಗ ಸೃಷ್ಟಿಗೆ ಕ್ರಮ: ಡಿಸಿಎಂ ಡಿ.ಕೆ.ಶಿವಕುಮಾರ್‌ - DCM DK SHIVAKUMAR

ಕರಾವಳಿಗೆ ಹೊಸ ಪ್ರವಾಸೋದ್ಯಮ ನೀತಿ ರೂಪಿಸಿ ಉದ್ಯೋಗ ಸೃಷ್ಟಿಸಲಾಗುವುದು ಡಿಸಿಎಂ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.

ವಿಶ್ವ ಮೀನುಗಾರಿಕಾ ದಿನಾಚರಣೆ WORLD FISHERIES DAY
ವಿಶ್ವ ಮೀನುಗಾರಿಕಾ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ (ETV Bharat)

By ETV Bharat Karnataka Team

Published : Nov 22, 2024, 9:46 AM IST

ಕಾರವಾರ:ಕರಾವಳಿಗೆ ಹೊಸ ಪ್ರವಾಸೋದ್ಯಮ ನೀತಿ ರೂಪಿಸಿ ಆ ಮೂಲಕ ದೊಡ್ಡ ಮಟ್ಟದಲ್ಲಿ ಉದ್ಯೋಗ ಸೃಷ್ಟಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಗುರುವಾರ ಭಟ್ಕಳ ತಾಲೂಕಿನ ಮುರುಡೇಶ್ವರದ ಆರ್.ಎನ್.ಎಸ್ ಗಾಲ್ಫ್ ಕ್ಲಬ್ ರೆಸಾರ್ಟ್​ನಲ್ಲಿ ಆಯೋಜಿಸಿದ್ದ ವಿಶ್ವ ಮೀನುಗಾರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿಶ್ವ ಮೀನುಗಾರಿಕಾ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ (ETV Bharat)

ಜಿಲ್ಲೆಯಲ್ಲಿ ಬದುಕಿಗಾಗಿ ಹಲವರು ಹೊರಗಡೆ ಹೋಗುತ್ತಿದ್ದಾರೆ. ಕರಾವಳಿಯಲ್ಲಿ ಒಂದು ಪೈವ್ ಸ್ಟಾರ್ ಹೊಟೇಲ್​​ಗಳಿಲ್ಲ. ಆದರೆ ಇದೀಗ ನಮಗೆ ಅವಕಾಶ ಸಿಕ್ಕಿದ್ದು, ನಾವು ಕರಾವಳಿಯನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಕರಾವಳಿಯಲ್ಲಿ ಪ್ರವಾಸೋದ್ಯಮ ಚಟುವಟಿಕೆ ಉತ್ತೇಜಿಸಲು ಮೂರು ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಪಡೆದಿದ್ದು, ಸದ್ಯದಲ್ಲಿಯೇ ಹೊಸ ನೀತಿ ಬರಲಿದೆ ಎಂದರು.

ಮೀನುಗಾರರ ಬದುಕನ್ನು ಹಸನಾಗಿಸಲು ಸರ್ಕಾರ ಬದ್ಧವಾಗಿದೆ. ಮೀನುಗಾರರು ಮೃತಪಟ್ಟರೆ ಇದೀಗ 8 ಲಕ್ಷ ನೀಡಲಾಗುತಿತ್ತು. ಆದರೆ ಇನ್ನು ಮುಂದೆ 10 ಲಕ್ಷ ನೀಡುವುದಾಗಿ ಘೋಷಿಸಿದರು. ಮೀನುಗಾರರು ಶೇ.99 ಆರ್ಥಿಕವಾಗಿ ಹಿಂದುಳಿದಿದ್ದಾರೆ. ಉದ್ಯೋಗ ಸೃಷ್ಟಿಗೆ ಬಂದರುಗಳ ಅಭಿವೃದ್ಧಿ ಮಾಡುತ್ತೇವೆ. ಈಗಾಗಲೇ 49 ಕೋಟಿ ವೆಚ್ಚದಲ್ಲಿ ಮಂಗಳೂರಲ್ಲಿ ಬಂದರು ನಿರ್ಮಿಸಲಾಗಿದೆ ಎಂದು ತಿಳಿಸಿದರು.

ಬೆಲೆ ಏರಿಕೆಯಿಂದ ತತ್ತರಿಸಿದ ಕಾರಣ ಗ್ಯಾರಂಟಿ ನೀಡಿದ್ದೆವು. ಆದರೆ ಬಿಜೆಪಿಯವರಿಗೂ ಕೂಡ ಬೆಲೆ ಏರಿಕೆ ಅರ್ಥ ಆಗಿ ಇದೀಗ ಮಹಾರಾಷ್ಟ್ರ ಸೇರಿದಂತೆ ಹಲವೆಡೆ ಗ್ಯಾರಂಟಿ ಹಣ ಘೋಷಣೆ ಮಾಡಿದೆ ಎಂದರು.

ಮೀನುಗಾರಿಕೆ ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ ಮಾತನಾಡಿ, ಗ್ಯಾರಂಟಿಯಿಂದಾಗಿ ಅಭಿವೃದ್ಧಿ ಇಲ್ಲ ಎನ್ನುತ್ತಾರೆ. ಆದರೆ ಗ್ಯಾರಂಟಿ ಕೊಟ್ಟು ನಮ್ಮ ಸರ್ಕಾರ ಎಲ್ಲ ರೀತಿಯ ಅಭಿವೃದ್ಧಿ ಮಾಡುತ್ತಿದೆ. ಅದರಲ್ಲಿಯೂ ಮೀನುಗಾರಿಕಾ ಇಲಾಖೆಗೆ ಯಾವುದೇ ಹಣದ ಕೊರತೆ ಇಲ್ಲ. ಮುರುಡೇಶ್ವರದಲ್ಲಿ 400 ಕೋಟಿ ವೆಚ್ಚದ ಬಂದರು ನಿರ್ಮಾಣ ಮಾಡಲಾಗುತ್ತಿದೆ. 200 ಕೋಟಿ ವೆಚ್ಚದಲ್ಲಿ ರಾಜ್ಯದ ವಿವಿಧೆಡೆ ಬಂದರು ಡೆಕ್ ಅಭಿವೃದ್ಧಿಪಡಿಸಲಾಗುತ್ತಿದೆ. ಪರಿಹಾರವನ್ನು 8 ಲಕ್ಷಕ್ಕೆ ಹೆಚ್ಚಿಸಿ 24 ಗಂಟೆಯಲ್ಲಿ ನೀಡುವಂತೆ ಮಾಡಿದ್ದೇವೆ. ಮಹಿಳೆಯರು ಶೂನ್ಯ ಬಡ್ಡಿದರದಲ್ಲಿ ಅರ್ಬನ್ ಬ್ಯಾಂಕ್ ಸೇರಿದಂತೆ ಇತರೆ ಬ್ಯಾಂಕ್​​ಗಳಲ್ಲಿ ಸಾಲ ಪಡೆಯಬಹುದಾಗಿದೆ. ಮೀನುಗಾರರು ಕೈಚಾಚುವಂತಾಗಬಾರದು ಎಂಬುದೇ ನಮ್ಮ ಉದ್ದೇಶ ಎಂದರು.

ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಮಾತನಾಡಿ, ಕರಾವಳಿಯ ಮೀನುಗಾರರು ಆರ್ಥಿಕ ವ್ಯವಸ್ಥೆಯ ಶಕ್ತಿ ಆಗಿದ್ದಾರೆ. ಆದರೆ ಗೋವಾ, ಮಹಾರಾಷ್ಟ್ರಕ್ಕೆ ತೆರಳಿದರೆ ತೊಂದರೆ ನೀಡುವ ಬಗ್ಗೆ ಮೀನುಗಾರರು ತಿಳಿಸಿದ್ದು, ಈ ಬಗ್ಗೆ ಅವರಿಗೆ ನ್ಯಾಯ ಕೊಡಿಸುವ ಕೆಲಸ ಆಗಬೇಕಾಗಿದೆ. ಭಾರತದಲ್ಲಿ ಶೇ.72ರಷ್ಟು ಜನರ ಆಹಾರ ಮೀನಾಗಿದೆ. ಆದ್ದರಿಂದ ಈ ವ್ಯವಸಾಯಕ್ಕೆ ಉತ್ತೇಜನ ನೀಡಬೇಕಾಗಿದೆ. ಅಲ್ಲದೆ ಜೋಯಿಡಾ ತಾಲೂಕಿನ ಕುಣಬಿ ಜನ ಅತ್ಯಂತ ಹಿಂದುಳಿದವರು. ಅವರನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳ ಮೂಲಕ ಪ್ರಯತ್ನ ಮುಂದುವರಿಸುವುದಾಗಿ ತಿಳಿಸಿದರು.

ಮೀನುಗಾರಿಕಾ ಇಲಾಖೆ ಅಂಕಿ ಅಂಶಗಳನ್ನೊಳಗೊಂಡ ಪುಸ್ತಕವನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಿದರು. ಮೀನುಗಾರಿಕೆ ವೇಳೆ ಮೃತಪಟ್ಟ ಕುಟುಂಬದವರಿಗೆ ಪರಿಹಾರದ ಚೆಕ್, ಜೀವರಕ್ಷಕ ಸಾಧನ ವಿತರಿಸಲಾಯಿತು.

ಶಾಸಕರಾದ ಭೀಮಣ್ಣ ನಾಯ್ಕ, ಶಿವರಾಮ್ ಹೆಬ್ಬಾರ್, ಸತೀಶ್ ಸೈಲ್, ಗಣಪತಿ ಉಳ್ವೇಕರ್, ಯಶಪಾಲ್ ಸುವರ್ಣ, ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಸಿಇಒ ಈಶ್ವರಕುಮಾರ್ ಕಾಂದೂ ಕಾರ್ಯಕ್ರಮದಲ್ಲಿ ಇದ್ದರು.

ಇದನ್ನೂ ಓದಿ: ಬೆಂಗಳೂರು ಟೆಕ್ ಸಮ್ಮಿಟ್​ನಲ್ಲಿ ಸ್ವದೇಶಿ ನಿರ್ಮಿತ ಜಲ್ ದೋಸ್ತ್ ಪರಿಚಯ: ಏನಿದು ಜಲ್​ ದೋಸ್ತ್​​?

ABOUT THE AUTHOR

...view details