ಹುಬ್ಬಳ್ಳಿ: ಕುಶಾಲ್ ಚೌಕ್ಸಿ ಅವರನ್ನು ಹುಬ್ಬಳ್ಳಿ - ಧಾರವಾಡ ಪೊಲೀಸ್ ಆಯುಕ್ತಾಲಯಕ್ಕೆ ನೂತನ ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಯನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ತೆರವಾದ ಎಂ.ರಾಜೀವ ಜಾಗಕ್ಕೆ ಇವರನ್ನು ನೇಮಕ ಮಾಡಲಾಗಿದೆ. ಕುಶಾಲ್ ಚೌಕ್ಸಿ ಅವರು ವಿಧಿ ವಿಜ್ಞಾನ ಪ್ರಯೋಗಾಲಯದ ಜಂಟಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಅಂಜಲಿ ಅಂಬಿಗೇರ ಹತ್ಯೆಗೆ ಸಂಬಂಧಿಸಿದಂತೆ ಹುಬ್ಬಳ್ಳಿ ಧಾರವಾಡ ಕಮೀಷನರೇಟ್‌ನ ಡಿಸಿಪಿ ರಾಜೀವ ಅವರನ್ನ ಅಮಾನತು ಮಾಡಿದ ಕೆಲವೇ ಗಂಟೆಗಳಲ್ಲಿ ರಾಜ್ಯ ಸರ್ಕಾರ ಹೊಸ ಡಿಸಿಪಿಯನ್ನ ನೇಮಿಸಿ ಆದೇಶ ಹೊರಡಿಸಿದೆ. ಮೂಲತಃ ಭೋಪಾಲ್‌ನ ಕುಶಾಲ್ ಚೌಕ್ಸೆ ಅವರದ್ದು 2018ನೇ ಬ್ಯಾಚ್. ಅವರು ಕರ್ನಾಟಕಕ್ಕೆ ಬಂದಿದ್ದು, 2020ನೇ ಇಸ್ವಿಯಲ್ಲಿ.
ಮಧ್ಯಪ್ರದೇಶ ಭೋಪಾಲ್ ಜಿಲ್ಲೆಯ ಜಬಲಪುರದವರಾದ ಇವರು 557ನೇ ರ‍್ಯಾಂಕ್ ಪಡೆದು ಐಪಿಎಸ್ ಅಧಿಕಾರಿಯಾಗಿದ್ದಾರೆ. ಭೋಪಾಲ್‌ನ ಮೌಲಾನಾ ಆಜಾದ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಅಭ್ಯಾಸ ಮಾಡಿದ್ದಾರೆ.
ಇದನ್ನೂ ಓದಿ:ಅಂಜಲಿ ಕೊಲೆ ಪ್ರಕರಣ: ಹುಬ್ಬಳ್ಳಿ-ಧಾರವಾಡ ಕಾನೂನು ಸುವ್ಯವಸ್ಥೆ ಡಿಸಿಪಿ ಅಮಾನತು - DCP SUSPENDS
ಇಂದು ಹುಬ್ಬಳ್ಳಿಗೆ ಗೃಹ ಸಚಿವರ ಡಾ.ಜಿ.ಪರಮೇಶ್ವರ ಭೇಟಿ:ಯುವತಿ ನೇಹಾ ಹಿರೇಮಠ, ಅಂಜಿ ಅಂಬಿಗೇರ ಕೊಲೆ ಪ್ರಕರಣಗಳ ಹಿನ್ನೆಲೆಯಲ್ಲಿ ಇಂದು ಗೃಹ ಸಚಿವ ಪರಮೇಶ್ವರ ಅವರು ನಗರಕ್ಕೆ ಭೇಟಿ ನೀಡಿದರು. ಈ ವೇಳೆ ಹತ್ಯೆಯಾದ ನೇಹಾ ಮತ್ತು ಅಂಜಲಿ ಅವರ ಮನೆಗೆ ತೆರಳಿ, ಕುಟುಂಬಸ್ಥರಿಗೆ ಸಾಂತ್ವನ ನೀಡಿದರು. ಇದೇ ವೇಳೆ ಎರಡೂ ಕುಟುಂಬಗಳಿಗೆ ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದರು. ಬಳಿಕ ಈಗಾಗಲೇ ನೇಹಾ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ. ಜೊತೆಗೆ ಅಂಜಲಿ ಪ್ರಕರಣವನ್ನು ಕೂಡ ಸಿಐಗೆ ವಹಿಸುತ್ತೇವೆ ಎಂದು ತಿಳಿಸಿದರು.
ಯುವತಿ ಕೊಲೆಯಿಂದಾಗಿ ಡಿಸಿಪಿ ಅಮಾನತು: ಇಲ್ಲಿನ ವೀರಾಪುರ ಓಣಿಯ ಯುವತಿ ಅಂಜಲಿ ಅಂಬಿಗೇರ ಕೊಲೆ ಪ್ರಕರಣದಲ್ಲಿ ನಿರ್ಲಕ್ಷ್ಯ ವಹಿಸಿದ್ದ ಆರೋಪದ ಮೇಲೆ ಹುಬ್ಬಳ್ಳಿ-ಧಾರವಾಡ ಕಾನೂನು ಸುವ್ಯವಸ್ಥೆ ಡಿಸಿಪಿ ಪಿ.ರಾಜೀವ್, ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಮಹಿಳಾ ಹೆಡ್ಕಾನ್ಸ್ಟೆಬಲ್ ಅವರನ್ನು ಅಮಾನತು ಮಾಡಿ ಸರ್ಕಾರ ಆದೇಶಿಸಿದೆ.
ಅಂಜಲಿ ಕೊಲೆ ಪ್ರಕರಣ:ಪ್ರೀತಿ ನಿರಾಕರಿಸಿದಳೆಂದು ಮೇ 15 ಎಂದು ಬೆಳಗ್ಗೆ ವೀರಾಪುರ ಓಣಿಯ ನಿವಾಸಿ ಅಂಜಲಿ (20) ಮನೆಗೆ ನುಗ್ಗಿ ಯುವಕ ಚಾಕುವಿನಿಂದ ಇರಿದು ಕೊಲೆಗೈದಿದ್ದ. ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ವಿಶ್ವ ಅಲಿಯಾಸ್ ಗಿರೀಶ್ (21) ಎಂಬಾತನನ್ನು ದಾವಣಗೆರೆಯಲ್ಲಿ ರೈಲ್ವೆ ಪೊಲೀಸರ ನೆರವಿನೊಂದಿಗೆ ಬಂಧಿಸಿ ಹುಬ್ಬಳ್ಳಿಗೆ ಕರೆತರಲಾಗಿತ್ತು.