ಬೆಂಗಳೂರು: ರಾಜ್ಯ ಸರ್ಕಾರ ಇದೀಗ ರಾಜ್ಯದಲ್ಲಿ ಹೊಸ ಬಿಯರ್ ನೀತಿ ಜಾರಿಗೆ ತಂದಿದೆ. ಈ ಬಿಯರ್ ನೀತಿ ಮೂಲಕ ರಾಜ್ಯ ಸರ್ಕಾರ ಒಂದು ಕಲ್ಲಿನಲ್ಲಿ ಎರಡು ಹಕ್ಕಿ ಬೀಳಿಸುವ ಕೆಲಸ ಮಾಡಿದೆ. ಒಂದೆಡೆ ಆದಾಯ ಹೆಚ್ಚಳ, ಇನ್ನೊಂದೆಡೆ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಬಿಯರ್ಗಳಿಗೆ ಕಡಿವಾಣ.
ಜ.20ರಿಂದ ರಾಜ್ಯದಲ್ಲಿ ಹೊಸ ಬಿಯರ್ ನಿಯಮ ಜಾರಿಗೆ ಬರಲಿದೆ. ಕರ್ನಾಟಕ ಅಬಕಾರಿ (ಬ್ರೀವರಿ) ತಿದ್ದುಪಡಿ ನಿಯಮವನ್ನು ಜಾರಿಗೆ ತರುವ ಮೂಲಕ ಹೊಸ ನೀತಿಯನ್ನು ರೂಪಿಸಿದೆ. ಕಳೆದ ವರ್ಷ ಆಗಸ್ಟ್ನಲ್ಲಿ ಈ ಬಗ್ಗೆ ಕರಡು ಅಧಿಸೂಚನೆ ಹೊರಡಿಸಲಾಗಿತ್ತು. ಸಾರ್ವಜನಿಕರಿಂದ ಸಲಹೆ, ಆಕ್ಷೇಪಣೆಗಳನ್ನು ಪಡೆದ ಬಳಿಕ ಇದೀಗ ರಾಜ್ಯ ಸರ್ಕಾರ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಈ ತಿದ್ದುಪಡಿ ನಿಯಮದ ಮೂಲಕ ಹೊಸ ಬಿಯರ್ ನೀತಿ ರಾಜ್ಯದಲ್ಲಿ ಜಾರಿಗೆ ಬರಲಿದೆ.
ಏನಿದು ಹೊಸ ಬಿಯರ್ ನೀತಿ?:ಕರ್ನಾಟಕ ಅಬಕಾರಿ (ಬ್ರೀವರಿ) ನಿಯಮಗಳಿಗೆ ತಿದ್ದುಪಡಿ ತರುವ ಮೂಲಕ ಹೊಸ ಬಿಯರ್ ನೀತಿ ಜಾರಿಗೆ ತರಲಾಗಿದೆ. ಹೊಸ ನಿಯಮದಂತೆ "ಬಿಯರ್" ಎಂದರೆ ಏನು ಎಂಬುದನ್ನು ವ್ಯಾಖ್ಯಾನ ಮಾಡಲಾಗಿದೆ. ಬಿಯರ್ ಎಂದರೆ ಮಾಲ್ಟ್ ಅಥವಾ ಧಾನ್ಯದಿಂದ ತಯಾರಿಸಿದ ಯಾವುದೇ ಫರ್ಮೆಂಟೆಡ್ ಮದ್ಯವನ್ನು ಸಕ್ಕರೆ ಮತ್ತು ಹಾಪ್‌ಗಳ ಜೊತೆಗೆ ಅಥವಾ ಇಲ್ಲದೆಯೇ ಉತ್ಪಾದಿಸಲಾಗುತ್ತದೆ ಮತ್ತು ಏಲ್, ಕಪ್ಪು ಬಿಯರ್, ಪೋರ್ಟರ್, ಸ್ಪೆಟ್ ಮತ್ತು ಸ್ಪೂಸ್ ಬಿಯರ್ ಅನ್ನು ಒಳಗೊಂಡಿರುತ್ತದೆ.
ಈ ಹಿಂದಿನ ನಿಯಮದಂತೆ ಬಿಯರ್ ಅಂದರೆ ಮಾಲ್ಟ್ ಅಥವಾ ಧಾನ್ಯದಿಂದ ತಯಾರಿಸಿದ ಯಾವುದೇ ಮದ್ಯವನ್ನು ಸಕ್ಕರೆ ಮತ್ತು ಹಾಪ್ಸ್ ಜೊತೆಗೆ ಅಥವಾ ಇಲ್ಲದೇ ಉತ್ಪಾದಿಸುವುದು ಎಂದು ವ್ಯಾಖ್ಯಾನಿಸಲಾಗಿತ್ತು. ಹೊಸ ನಿಯಮದಲ್ಲಿ ಯಾವುದೇ ಮದ್ಯ ಎಂಬುದರ ಬದಲಾಗಿ ಫರ್ಮೆಂಟೆಡ್ ಮದ್ಯವನ್ನು ಸಕ್ಕರೆ ಪ್ರಮಾಣ ಮಿತಗೊಳಿಸಿ ಸಕ್ಕರೆ ಅಥವಾ ಇಲ್ಲದೇ ತಯಾರಿಸುವುದು ಎಂದು ತಿದ್ದುಪಡಿ ಮಾಡಲಾಗಿದೆ.
ಬಿಯರ್ ನಲ್ಲಿ ಸಕ್ಕರೆ ಪ್ರಮಾಣ ಶೇ.25ರಷ್ಟು ಮಿತಿ:ಹೊಸ ನೀತಿಯಂತೆ ಬಿಯರ್ನಲ್ಲಿ ಬಳಸುವ ಸಕ್ಕರೆ ಪ್ರಮಾಣಕ್ಕೆ ಮಿತಿ ಹಾಕಲಾಗಿದೆ. ಆ ಮೂಲಕ ಮಿತಿ ಮೀರಿ ಬಿಯರ್ನಲ್ಲಿ ಹೆಚ್ಚು ಸಕ್ಕರೆ ಅಂಶವನ್ನು ಬಳಕೆ ಮಾಡುವುದಕ್ಕೆ ನಿಯಂತ್ರಣ ಹೇರಲಾಗಿದೆ. ಸಕ್ಕರೆಯ ಸೇರ್ಪಡೆಯು ತೂಕದ ಶೇ.25ಕ್ಕಿಂತ ಹೆಚ್ಚಿರಬಾರದು ಎಂದು ನಿಯಮಕ್ಕೆ ತಿದ್ದುಪಡಿ ಮಾಡಲಾಗಿದೆ. ಈ ಮುಂಚೆ ಬಿಯರ್ನಲ್ಲಿ ಮಿತಿ ಮೀರಿ ಸಕ್ಕರೆ ಅಂಶವನ್ನು ಬಳಸಲಾಗುತ್ತಿತ್ತು. ಅದಕ್ಕೆ ತಿದ್ದುಪಡಿ ನಿಯಮದಲ್ಲಿ ನಿಯಂತ್ರಣ ಹಾಕಲಾಗಿದೆ.
ತಾಂತ್ರಿಕ ಸಮಿತಿ ಶಿಫಾರಸಿನ ಮೇರೆಗೆ ಈ ಮಿತಿಯನ್ನು ಹಾಕಲಾಗಿದೆ. ತಾಂತ್ರಿಕ ಸಮಿತಿ ಸುಮಾರು ನಾಲ್ಕೈದು ತಿಂಗಳು ಅಧ್ಯಯನ ನಡೆಸಿದ್ದರು. ಮಾರುಕಟ್ಟೆಗಳಿಂದ ಬಿಯರುಗಳನ್ನು ಸಂಗ್ರಹಿಸಿದ್ದರು. ಈ ಸ್ಯಾಂಪಲ್ ಬಿಯರುಗಳ ಮೇಲೆ ಪರೀಕ್ಷಾರ್ಥ ಪ್ರಯೋಗ ಮಾಡಲಾಗಿತ್ತು. ಪರೀಕ್ಷೆಯಲ್ಲಿ ಬಿಯರುಗಳಲ್ಲಿ ಗರಿಷ್ಠ ಸಕ್ಕರೆ ಅಂಶ ಇರುವುದು ಪತ್ತೆಯಾಗಿತ್ತು. ಇದು ಮದ್ಯಪಾನಿಗಳ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತೆ. ಈ ನಿಟ್ಟಿನಲ್ಲಿ ಸರ್ಕಾರ ಸಕ್ಕರೆ ಅಂಶಕ್ಕೆ ಶೇ.25ರಷ್ಟು ಮಿತಿ ಹಾಕಿದೆ.
ಬಾಟಲ್ನಲ್ಲಿ ಸಕ್ಕರೆ ಪ್ರಮಾಣ ನಮೂದು ಕಡ್ಡಾಯ: ಹೊಸ ಬಿಯರ್ ನೀತಿ ಪ್ರಕಾರ ಇನ್ಮುಂದೆ ಬಿಯರ್ ಬಾಟಲ್ ಮೇಲೆ ಬಳಸಿದ ಸಕ್ಕರೆ ಅಂಶ ಹಾಗೂ ಮಾಲ್ಟ್ ಶೇಕಡವಾರು ತೂಕವನ್ನು ಪ್ರದರ್ಶಿಸುವುದು ಕಡ್ಡಾಯವಾಗಿದೆ. ಈ ಸಂಬಂಧ ಕರ್ನಾಟಕ ಅಬಕಾರಿ (ಬಾಟ್ಲಿಂಗ್ ಆಫ್ ಲಿಕ್ಕರ್) ನಿಯಮಗಳಿಗೆ ತಿದ್ದುಪಡಿ ತರಲಾಗಿದೆ. ಅದರಂತೆ ಮಾಲ್ಟ್ ಮತ್ತು ಸಕ್ಕರೆಯ ಕನಿಷ್ಠ ಶೇಕಡಾವಾರು ತೂಕವನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು.