ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಸಂಜೆಯಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಜಿಲ್ಲೆಯ ಹಲವೆಡೆ ತಗ್ಗು ಪ್ರದೇಶಗಳು ಜಲಾವೃತವಾಗಿದೆ. ನದಿ ತೀರದ ಪ್ರದೇಶಗಳಲ್ಲಿ ನೆರೆ ಕಾಣಿಸಿಕೊಂಡಿದ್ದು, ಹಲವೆಡೆ ಮನೆಗಳು, ಕೃಷಿ ತೋಟಗಳಿಗೆ ನೆರೆ ನೀರು ನುಗ್ಗಿದೆ.
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನೇತ್ರಾವತಿ: ತಗ್ಗು ಪ್ರದೇಶಗಳು ಜಲಾವೃತ, ಹಲವೆಡೆ ಗುಡ್ಡ ಕುಸಿತ, ಮನೆಗಳಿಗೆ ಹಾನಿ (ETV Bharat) ಜಿಲ್ಲೆಯಲ್ಲಿ ಮಾತ್ರವಲ್ಲದೇ, ಪಶ್ಚಿಮ ಘಟ್ಟದ ಮೇಲ್ಭಾಗದಲ್ಲೂ ಭಾರೀ ಮಳೆಯಾಗುತ್ತಿರುವ ಕಾರಣದಿಂದ ಜಿಲ್ಲೆಯ ಪ್ರಮುಖ ನದಿ ನೇತ್ರಾವತಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದರಿಂದಾಗಿ ಬಂಟ್ವಾಳ ಪೇಟೆ, ಪಾಣೆ ಮಂಗಳೂರು, ಆಲಡ್ಕ ಸೇರಿದಂತೆ ಹಲವೆಡೆ ನೆರೆ ಕಾಣಿಸಿಕೊಂಡಿದೆ. ಇನ್ನು ಹಲವೆಡೆ ಗುಡ್ಡ ಕುಸಿತದ ಭೀತಿ ಎದುರಾಗಿದೆ.
ನದಿಯಂತಾದ ರಸ್ತೆ- ನೀರು ನುಗ್ಗಿ ತಾಂತ್ರಿಕ ದೋಷಕ್ಕೊಳಗಾದ ಕೆಎಸ್ಆರ್‌ಟಿಸಿ ಬಸ್:ಎಡೆಬಿಡದೇ ಸುರಿಯುತ್ತಿರುವ ಮಹಾಮಳೆಗೆ ಮಂಗಳೂರು ನಗರ ತತ್ತರಿಸಿದೆ. ಮಳೆ ನೀರು ರಸ್ತೆಗೆ ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಮಂಗಳೂರಿನ ಪಡೀಲ್ ರೈಲ್ವೇ ಅಂಡರ್‌ಪಾಸ್ ರಸ್ತೆಯಲ್ಲಿ ನೀರು ತುಂಬಿ ನದಿಯಂತಾಗಿದೆ. ಈ ಮಳೆ ನೀರಿನಲ್ಲೇ ಬಸ್ ಚಲಾಯಿಸಲು ಚಾಲಕ ಯತ್ನಿಸಿದ್ದಾರೆ. ಆದರೆ, ಬಸ್ ಕೊಂಚ ದೂರ ಸಾಗಿದಾಗ ಬಸ್ನೊಳಗೆ ನೀರು ನುಗ್ಗಿದೆ. ಪರಿಣಾಮ ತಾಂತ್ರಿಕ ದೋಷದಿಂದ ನೀರಿನ ನಡುವೆಯೇ ಬಸ್ ಬಾಕಿಯಾಗಿದೆ. ಇತ್ತ ಬಸ್‌ನೊಳಗಿದ್ದ ಪ್ರಯಾಣಿಕರಿಗೆ ಬಸ್‌ನಿಂದ ಇಳಿಯಲೂ ಆಗದೆ ಬಸ್‌ನಲ್ಲಿ ಕೂರಲೂ ಆಗದೇ ಪರದಾಡುವಂತಾಯಿತು.
ಮಂಗಳೂರಿನ ಪಡೀಲ್ ರೈಲ್ವೇ ಅಂಡರ್‌ಪಾಸ್ ರಸ್ತೆಯಲ್ಲಿ ನೀರು ತುಂಬಿ, ಬಸ್ ಕೆಟ್ಟು ನಿಂತಿರುವುದು (ETV Bharat) ಉಪ್ಪಿನಂಗಡಿಯಲ್ಲಿ ಹೆದ್ದಾರಿಗೆ ನುಗ್ಗಿದ ನೇತ್ರಾವತಿ:ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿಯಲ್ಲಿ ನೀರು 29.6 ಮೀಟರ್‌ನಲ್ಲಿದ್ದು, ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ. ಪರಿಣಾಮ ನದಿನೀರು ಹಲವಾರು ಮನೆಗಳು ಸೇರಿದಂತೆ ಕೃಷಿ ತೋಟಗಳಿಗೆ ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಅಲ್ಲದೆ ಪಂಜಳದಲ್ಲಿ ನದಿ ನೀರು ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿದ ಪರಿಣಾಮ ರಸ್ತೆ ಸಂಚಾರ ವ್ಯವಸ್ಥೆಗೂ ಸಂಕಷ್ಟ ತಂದೊಡ್ಡಿದೆ. ಸದ್ಯ ಸ್ಥಳದಲ್ಲಿ ಪೊಲೀಸರು, ಅಧಿಕಾರಿಗಳು, ಸ್ಥಳೀಯರ ನೆರವಿನಿಂದ ಸುರಕ್ಷಿತವಾಗಿ ವಾಹನಗಳನ್ನು ಕಳುಹಿಸುತ್ತಿದ್ದಾರೆ. ಅಲ್ಲದೇ ರಸ್ತೆ ಉದ್ದಕ್ಕೂ ವಾಹನಗಳು ನಿಂತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ಗುಡ್ಡ ಕುಸಿತ - ಸಂಚಾರ ಅಸ್ತವ್ಯಸ್ತ:ಬಂಟ್ವಾಳದಲ್ಲಿ ನೇತ್ರಾವತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, 9.3 ಮೀಟರ್ (ಅಪಾಯದ ಮಟ್ಟ 8.5 ಮೀಟರ್) ಎತ್ತರದಲ್ಲಿ ಹರಿಯುತ್ತಿದೆ.ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ ಪಾತ್ರತೋಟ ಎಂಬಲ್ಲಿ, ವಿಟ್ಲ- ಕಲ್ಲಡ್ಕ ರಸ್ತೆಗೆ ಗುಡ್ಡ ಕುಸಿದು ಬಿದ್ದಿದ್ದು, ವಿದ್ಯುತ್ ಕಂಬಗಳೂ ಧರೆಗುರುಳಿವೆ. ಪರಿಣಾಮ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಮಳೆಹಾನಿ ಪ್ರದೇಶಗಳಿಗೆ ಶಾಸಕ ರಾಜೇಶ್ ನಾಯ್ಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನೇತ್ರಾವತಿ ನದಿ (ETV Bharat) ಸೋಮವಾರ ರಾತ್ರಿ ಸುರಿದ ಗಾಳಿ ಮಳೆಯಿಂದ, ಬಂಟ್ವಾಳ ಕಸಬಾ ಗ್ರಾಮದ ಗೀತಾ ಅವರ ಮನೆಯ ಹೆಂಚು ಮೇಲ್ಛಾವಣಿಗೆ ಭಾಗಶಃ ಹಾನಿ ಆಗಿದೆ. ಶಂಭೂರು ಗ್ರಾಮದ ಕೊಪ್ಪಳ ಎಂಬಲ್ಲಿ ಸುಜಾತ ಆಚಾರ್ಯ, ಮಾಣಿ ಗ್ರಾಮದ ನೆಲ್ಲಿ ಎಂಬಲ್ಲಿ ಶೇಖರ ಶೆಟ್ಟಿ ಎಂಬವರ ಮನೆಗೆ ತೀವ್ರ ಹಾನಿ ಆಗಿದೆ. ವೀರಕಂಭ ಗ್ರಾಮದ ಮಂಗಲಪದವು ಪಾದೆ ಎಂಬಲ್ಲಿ ಗೀತಾ ಎಂಬವರ ಮನೆ ಬದಿ ಗುಡ್ಡ ಜರಿದು ಭಾಗಶಃ ಹಾನಿಯಾಗಿದೆ. ಮಾಣಿ - ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕೊಡಾಜೆ (ಪೆರಾಜೆ ಮಠ ತಿರುವಿನಲ್ಲಿ) ಕಿರಿದಾದ ಮೋರಿಯಿಂದಾಗಿ ಚರಂಡಿಯಲ್ಲಿ ಮಳೆ ನೀರು ಸರಾಗವಾಗಿ ಹರಿಯಲು ತೊಡಕಾಗಿ ನೀರು ರಸ್ತೆಗೆ ಬಂದಿದೆ. ಇದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.
ಮನೆ, ಕೃಷಿ ತೋಟಗಳಿಗೆ ನುಗ್ಗಿದ ನೀರು (ETV Bharat) ಬಂಟ್ವಾಳ ಕಸಬಾ ಗ್ರಾಮದ ನಾರಾಯಣ ಪೂಜಾರಿ ಅವರ ಮನೆ ಬಳಿ ಸಣ್ಣ ಗುಡ್ಡ ಜರಿದಿದೆ. ಬಂಟ್ವಾಳ ಕಸಬಾ ಅಗ್ರಾರದಿಂದ ಜಕ್ರಿಬೆಟ್ಟುವರೆಗಿನ ರಸ್ತೆಯಲ್ಲಿ ಗುಡ್ಡ ಕುಸಿತ ಆಗಿದೆ. ಅಮ್ಟಾಡಿ ಗ್ರಾಮದ ದೇವಿನಗರ ರುದ್ರಭೂಮಿ ಹತ್ತಿರ ಗುಡ್ಡ ಕುಸಿದಿದ್ದು ಮಾತ್ರವಲ್ಲದೆ ಮರವೂ ಬಿದ್ದ ಪರಿಣಾಮ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೊಂದರೆ ಆಗಿದೆ. ಮಣಿನಾಲ್ಕೂರು ಗ್ರಾಮದ ಡೆಚ್ಚಾರು ಎಂಬಲ್ಲಿಯೂ ಗುಡ್ಡ ಕುಸಿತ ಉಂಟಾಗಿದೆ.
ಇದನ್ನೂ ಓದಿ:ಚಿಕ್ಕಮಗಳೂರು, ಉತ್ತರಕನ್ನಡ, ದಕ್ಷಿಣ ಕನ್ನಡ ಸೇರಿ ಏಳು ಜಿಲ್ಲೆಯಲ್ಲಿ ಮತ್ತೆ ಹೆಚ್ಚು ಮಳೆ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ - More rain again in seven districts