ಹುಬ್ಬಳ್ಳಿ:ನೇಹಾ ಹಿರೇಮಠ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖಾಧಿಕಾರಿಗಳಿಗೆ ಡಿಎನ್‌ಎ ಹಾಗೂ ಎಫ್‌ಎಸ್‌ಎಲ್‌ನ ವರದಿ ದೊರೆತಿದೆ. ಇನ್ನೊಂದು ವರದಿ ಬರುವುದು ಬಾಕಿಯಿದೆ ಎಂದು ತಿಳಿದು ಬಂದಿದೆ.
ಸಿಐಡಿ ಅಧಿಕಾರಿಗಳು ಕೊಲೆ ನಡೆದ ಸ್ಥಳದಲ್ಲಿ ಬಿದ್ದಿದ್ದ ಆರೋಪಿ ಫಯಾಜ್ನ ರಕ್ತದ ಮಾದರಿ ಹಾಗೂ ಕೊಲೆಯಾದ ನೇಹಾಳ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್)ಕ್ಕೆ ಸಲ್ಲಿಸಿದ್ದರು. ಅದರ ವರದಿ ಹಾಗೂ ಡಿಎನ್ಎ ವರದಿಯು ತನಿಖಾಧಿಕಾರಿಗಳ ಕೈ ಸೇರಿದೆ. ಆದರೆ, ಫಯಾಜ್ ಕೊಲೆಗೆ ಬಳಸಿದ್ದ ಚಾಕುವಿನ ವರದಿ ಎಫ್‌ಎಸ್‌ಎಲ್‌ನಿಂದ ಬರುವುದು ಬಾಕಿಯಿದೆ ಎಂದು ಹೇಳಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಆಯಾಮಗಳಲ್ಲಿ ಬಹುತೇಕ ತನಿಖೆ ಪೂರ್ಣಗೊಳಿಸಿದ್ದು, ಕೆಲವೇ ದಿನಗಳಲ್ಲಿ ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಲು ಸಿಐಡಿ ಸಿದ್ದತೆ ಮಾಡಿಕೊಂಡಿದೆ.
ಅಂಜಲಿ ಕೊಲೆ ಪ್ರಕರಣ ಆರೋಪಿ ದಾವಣಗೆರೆಗೆ:ಮತ್ತೊಂದೆಡೆ, ಅಂಜಲಿ ಕೊಲೆ ಆರೋಪಿ ಗಿರೀಶ್ ಅಲಿಯಾಸ ವಿಶ್ವ ಸಾಂವತನನ್ನು ಸಿಐಡಿ ತನಿಖಾಧಿಕಾರಿಗಳು ದಾವಣಗೆರೆಗೆ ಕರೆದೊಯ್ದಿದ್ದಾರೆ. ಗಿರೀಶನು ಅಂಜಲಿ ಹತ್ಯೆ ಬಳಿಕ ಚಾಕುವನ್ನು ಘಟನಾ ಸ್ಥಳದ ಬಳಿಯೇ ಬಿಸಾಕಿದ್ದಾಗಿ ವಿಚಾರಣೆ ವೇಳೆ ಬಾಯಿಬಿಟ್ಟಿದ್ದ ಎನ್ನಲಾಗಿದೆ. ಆದರೆ ಎಲ್ಲೆಡೆ ಹುಡುಕಾಟ ನಡೆಸಿದ್ದರೂ ಸಿಕ್ಕಿರಲಿಲ್ಲ. ಜೊತೆಗೆ ಕೊಲೆಗಾರ ಗಿರೀಶನು ಮೈಸೂರಿನಿಂದ ಬೆಳಗಾವಿಗೆ ರೈಲಿನಲ್ಲಿ ಹೊರಟಿದ್ದಾಗ ಮಹಿಳೆಯೊಂದಿಗೆ ಕಿರಿಕ್ ಮಾಡಿಕೊಂಡು ಚಾಕುವಿನಿಂದ ಕೈಗೆ ಇರಿದಿದ್ದ. ಈ ವೇಳೆ ಸಹ ಪ್ರಯಾಣಿಕರಿಂದ ತಪ್ಪಿಸಿಕೊಳ್ಳುವಾಗ ರೈಲಿನಿಂದ ಬಿದ್ದು ಗಾಯಗೊಂಡಿದ್ದ, ಆ ಸಂದರ್ಭದಲ್ಲಿ ಆತನ ಬಳಿಯಿದ್ದ ಚಾಕು ಅಲ್ಲಿಯೇ ಬಿದ್ದಿದೆಯೋ ಎಂಬುದನ್ನು ಪರಿಶೀಲಿಸಲು ತನಿಖಾಧಿಕಾರಿಗಳು ತೆರಳಿದ್ದಾರೆ.
ಇದನ್ನೂ ಓದಿ:ವಿದ್ಯಾರ್ಥಿನಿ ನೇಹಾ ಕೊಲೆ ಪ್ರಕರಣ: ದೋಷಾರೋಪ ಪಟ್ಟಿ ಸಲ್ಲಿಸಲು ಸಿಐಡಿ ಸಿದ್ಧತೆ - Neha murder case