ಕಾರವಾರ (ಉತ್ತರ ಕನ್ನಡ): ಅಂಕೋಲಾ ತಾಲೂಕಿನ ಶಿರೂರಿನಲ್ಲಿ ನಡೆದಿದ್ದ ಗುಡ್ಡ ಕುಸಿತ ಸಂಭವಿಸಿ, ಮೂರು ತಿಂಗಳು ಕಳೆದರೂ ಇನ್ನೂ ನಾಪತ್ತೆಯಾದ ಸ್ಥಳೀಯ ಇಬ್ಬರ ಮೃತದೇಹ ಪತ್ತೆಯಾಗಿಲ್ಲ. ಗುಡ್ಡ ಕುಸಿತದ ಬಳಿಕ ಹಾಗೂ ಮೂರನೇ ಹಂತದ ಕಾರ್ಯಾಚರಣೆ ವೇಳೆ ಕೇರಳದ ಲಾರಿ ಹಾಗೂ ಚಾಲಕ ಅರ್ಜುನ್ ಪತ್ತೆಗೆ ತೋರಿದ ಉತ್ಸಾಹ ಸ್ಥಳೀಯರ ಪತ್ತೆ ಕಾರ್ಯದಲ್ಲಿ ಇಲ್ಲದಿರುವುದು ಇದೀಗ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲಾಡಳಿತದ ವಿರುದ್ಧ ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ.
ಹೌದು, ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರಿನಲ್ಲಿ ನಡೆದಿದ್ದ ಗುಡ್ಡ ಕುಸಿತ ಪ್ರಕರಣ ಸಾಕಷ್ಟು ಸದ್ದು ಮಾಡಿತ್ತು. ರಾಷ್ಟ್ರೀಯ ಹೆದ್ದಾರಿ 66ರ ಅವೈಜ್ಞಾನಿಕ ಅಗಲೀಕರಣದಿಂದ ಗುಡ್ಡ ಕುಸಿತವಾಗಿ ಸುಮಾರು 11 ಜನ ನಾಪತ್ತೆಯಾಗಿದ್ದರು. ಗುಡ್ಡದ ಮಣ್ಣು ರಸ್ತೆ ಪಕ್ಕದಲ್ಲಿ ಇದ್ದ ಹೋಟೆಲ್ ಮೇಲೆ ಬಿದ್ದ ಪರಿಣಾಮ ಎಲ್ಲರೂ ಮಣ್ಣಿನ ಅಡಿ ಪಕ್ಕದಲ್ಲೇ ಇದ್ದ ಗಂಗಾವಳಿ ನದಿಗೆ ಬಿದ್ದು ನಾಪತ್ತೆಯಾಗಿದ್ದರು.
ಘಟನೆಯಲ್ಲಿ ನಾಪತ್ತೆಯಾದವರ ಹುಡುಕಾಟ ಪ್ರಾರಂಭಿಸಿದ ಜಿಲ್ಲಾಡಳಿತಕ್ಕೆ ಮೊದಲು 8 ಜನರ ಶವ ಹುಡುಕುವಲ್ಲಿ ಯಶಸ್ವಿಯಾಗಿದ್ದರು. ಕೇರಳ ಮೂಲದ ಅರ್ಜುನ್ ಎಂಬಾತನ ದೇಹ ಲಾರಿ ಸಮೇತ ನಾಪತ್ತೆಯಾಗಿತ್ತು. ಕಳೆದ 15 ದಿನಗಳ ಹಿಂದೆ ಸಾಕಷ್ಟು ಪ್ರಯತ್ನ ನಡೆಸಿ ಲಾರಿ ಸಮೇತ ನದಿಯ ಮಧ್ಯದಲ್ಲಿ ಇದ್ದ ಅರ್ಜುನನ ಶವ ಹುಡುಕುವಲ್ಲಿ ಯಶಸ್ವಿಯಾಗಿದ್ದರು. ಸದ್ಯ ಸ್ಥಳೀಯ ಜಗನ್ನಾಥ್ ಹಾಗೂ ಲೋಕೇಶ್ ಎನ್ನುವವರ ಶವ ಇನ್ನೂ ಸಿಕ್ಕಿಲ್ಲ. ಆದರೆ ಮಳೆ ಕಾರಣವೊಡ್ಡಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.