ಬೆಂಗಳೂರು:ನಗರದಲ್ಲಿ ಗಣೇಶ ಹಬ್ಬದ ಆಚರಣೆಯ ಸಲುವಾಗಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಹತ್ವದ ಸಭೆ ನಡೆಸಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶುಕ್ರವಾರ ಗಣೇಶ ಹಬ್ಬದ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು, ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡುವವರಿಗೆ ಯಾವುದೇ ನಿರ್ಬಂಧವಿರುವುದಿಲ್ಲ. 24 ಗಂಟೆಯೊಳಗಾಗಿ ಅನುಮತಿ ನೀಡಲು ಆಯಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಗಣೇಶ ಚತುರ್ಥಿಯ ವೇಳೆ ಎಲ್ಲಾ ರೀತಿಯ ಸಿದ್ಧತೆಗಳ ಜೊತೆಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಗಣೇಶ ಪ್ರತಿಷ್ಠಾಪನೆಗಾಗಿ ಅನುಮತಿ ನೀಡುವ ಸಲುವಾಗಿ 63 ಉಪ ವಿಭಾಗ ಕಚೇರಿಗಳಲ್ಲಿ ಏಕಗವಾಕ್ಷಿ ಕೇಂದ್ರಗಳನ್ನು ಕೂಡಲೇ ತೆರೆದು, ಪಾಲಿಕೆ, ಪೊಲೀಸ್, ಬೆಸ್ಕಾಂ ಹಾಗೂ ಅಗ್ನಿಶಾಮಕ ಅಧಿಕಾರಿಗಳನ್ನು ತ್ವರಿತವಾಗಿ ನಿಯೋಜಿಸಬೇಕು. ನಿಯೋಜಿಸಿದ ಬಳಿಕ ಅಧಿಕಾರಿಗಳ ಮಾಹಿತಿಯುಳ್ಳ ಪಟ್ಟಿಯನ್ನು ಪಾಲಿಕೆ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕು. ಅನುಮತಿ ಕೋರಿ ಬರುವವರಿಗೆ ಕಾಲಮಿತಿಯೊಳಗಾಗಿ ಅನುಮತಿ ಸಿಗುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.
ಬಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ರಿಂದ ಮಹತ್ವದ ಸಭೆ (ETV Bharat) ಈಗಾಗಲೇ ಪಿಒಪಿ ಗಣೇಶಗಳನ್ನು ವಶಕ್ಕೆ ಪಡೆಯಲಾಗಿದೆ. ಕಳೆದ ಬಾರಿ 5 ಅಡಿ ಗಣೇಶ ಮೂರ್ತಿಗಷ್ಟೇ ಅನುಮತಿ ಕೊಡಲಾಗಿತ್ತು. ಈ ಬಾರಿ ಬೆಂಗಳೂರಲ್ಲಿ ಗಣೇಶ ಹಬ್ಬಕ್ಕೆ ಯಾವುದೇ ನಿರ್ಬಂಧ ಹೇರಿಲ್ಲ. ಗಣೇಶನ ವಿಸರ್ಜನೆ ವೇಳೆ ಅಹಿತಕರ ಘಟನೆ ನಡೆಯದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಗಣೇಶ ವಿಸರ್ಜನೆ ಮಾಡುವ 42 ಕೆರೆ, ಕಲ್ಯಾಣಿಗಳಲ್ಲಿ ಹೆಚ್ಚಿನ ಭದ್ರತೆ ವಹಿಸಲಾಗುವುದು ಎಂದರು.
ಕಲ್ಯಾಣಿ ಬಳಿ ಆಂಬ್ಯುಲೆನ್ಸ್, ಅಗ್ನಿಶಾಮಕ ವಾಹನ ನಿಲುಗಡೆಗೆ ಸೂಚಿಸಿದ್ದು, ಬೆಂಗಳೂರು ನಗರದ ಮನೆ ಮನೆ ಗಣಪನ ವಿಸರ್ಜನೆಗೆ ಟ್ಯಾಂಕರ್ ವ್ಯವಸ್ಥೆ ಮಾಡಲಾಗಿದೆ. ಕೆರೆಗಳ ಬಳಿಯಿರುವ ಕಲ್ಯಾಣಿಗಳನ್ನು ಸಂಪೂರ್ಣ ಸ್ವಚ್ಛತೆ ಮಾಡಬೇಕು. ಗಣೇಶ ವಿಸರ್ಜನೆಗಾಗಿ ಅಗತ್ಯ ಸಿಬ್ಬಂದಿಯನ್ನು ನಿಯೋಜನೆ ಮಾಡುವುದರ ಜೊತೆಗೆ ಬ್ಯಾರಿಕೇಡಿಂಗ್, ಸಿಸಿಟಿವಿ, ವಿದ್ಯುತ್ ದ್ವೀಪ, ನುರಿತ ಈಜುಗಾರರ ವ್ಯವಸ್ಥೆ, ಕ್ರೇನ್ಗಳ ಸೌಲಭ್ಯವನ್ನು ಕಲ್ಪಿಸಬೇಕು ಎಂದು ಹೇಳಿದರು.
ಗಣೇಶ ವಿಸರ್ಜನೆ ಮೆರವಣಿಗೆಯ ವೇಳೆ ಬೆಸ್ಕಾಂ ಅಧಿಕಾರಿ, ಸಿಬ್ಬಂದಿ ಮೆರವಣಿಗೆ ಸಾಗುವ ಮಾರ್ಗದಲ್ಲಿ ವಿದ್ಯುತ್ ತಂತಿಗಳನ್ನು ಪರಿಶೀಲಿಸಿ. ಎಲ್ಲಿಯೂ ಯಾವುದೇ ರೀತಿಯ ಅನಾಹುತಗಳಾಗಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ರಸ್ತೆ ಬದಿಯ ವಿದ್ಯುತ್ ಕಂಬಗಳಲ್ಲಿ ವಿದ್ಯುತ್ ದೀಪಗಳನ್ನು ಸರಿಯಾಗಿರುವಂತೆ ಪಾಲಿಕೆ ವಿದ್ಯುತ್ ವಿಭಾಗದ ಅಧಿಕಾರಿಗಳು ನೋಡಿಕೊಳ್ಳಬೇಕು. ಮೆರವಣಿಗೆ ಸಾಗುವ ರಸ್ತೆಗಳಲ್ಲಿ ರಸ್ತೆ ಹಾಳಾಗಿದ್ದಲ್ಲಿ ಅಥವಾ ರಸ್ತೆ ಗುಂಡಿಗಳು ಬಿದ್ದಿದ್ದಲ್ಲಿ ಸ್ಥಳ ಪರಿಶೀಲಿಸಿ ಕೂಡಲೇ ಸರಿಪಡಿಸುವ ಕೆಲಸ ಮಾಡಬೇಕು ಎಂದು ಸೂಚಿಸಿದರು.
ಕೆರೆಗಳ ಬಳಿಯಿರುವ ಕಲ್ಯಾಣಿಗಳ ಬಳಿ ಗಣೇಶ ವಿಸರ್ಜನೆ ಮಾಡುವ ವೇಳೆ ಇಲಾಖಾ ವಾರು ನಿಯೋಜನೆ ಮಾಡಿರುವ ಸಿಬ್ಬಂದಿಗೆ ಡ್ರೆಸ್ ಕೋಡ್ ನೀಡಬೇಕು. ಜತೆಗೆ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳುವ ಸಲುವಾಗಿ ಪೊಲೀಸ್ ಇಲಾಖೆಯಿಂದ ಹೋಮ್ ಗಾರ್ಡ್‌ಗಳನ್ನು ನಿಯೋಜನೆ ಮಾಡುವಂತೆ ಸೂಚನೆ ನೀಡಿದರು. ಪಾಲಿಕೆ ವ್ಯಾಪ್ತಿಯಲ್ಲಿ ಮನೆಗಳಲ್ಲಿ ಪ್ರತಿಷ್ಠಾಪನೆ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡುವ ಸಲುವಾಗಿ ಆಯಾ ವಲಯಗಳ ವಾರ್ಡ್ ವ್ಯಾಪ್ತಿಯಲ್ಲಿ ಬರುವ ಪ್ರಮುಖ ಸ್ಥಳ, ಜಂಕ್ಷನ್ ಮತ್ತು ಅವಶ್ಯಕತೆ ಇರುವ ಸ್ಥಳಗಳಲ್ಲಿ ತಾತ್ಕಾಲಿಕವಾಗಿ ಸಂಚಾರಿ ವಿಸರ್ಜನಾ ಘಟಕಗಳನ್ನು ಪ್ರತಿ ವರ್ಷದಂತೆ ವ್ಯವಸ್ಥೆ ಮಾಡಬೇಕು ಎಂದರು.
ಪಿಓಪಿ ತಯಾರಿಕಾ ಘಟಕಗಳ ಪರಿಶೀಲನೆ ನಡೆಸಿ ನಗರದಲ್ಲಿ ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಲು ಅನುವು ಮಾಡಿಕೊಡಬೇಕು. ಪಿಓಪಿ ಗಣೇಶ ಮೂರ್ತಿಗಳ ತಯಾರಿಕೆಯನ್ನು ನಿಷೇಧಿಸಲಾಗಿದ್ದು, ಗಣೇಶ ಮೂರ್ತಿ ತಯಾರಿಕಾ ಘಟಕಗಳಿಗೆ ಪಾಲಿಕೆ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಪೊಲೀಸ್ ಅಧಿಕಾರಿಗಳ ತಂಡಗಳು ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಪಿಓಪಿ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿದ್ದಲ್ಲಿ ಅವುಗಳನ್ನು ಸೀಜ್ ಮಾಡಿ, ಅಂತಹವರ ಮೇಲೆ ದಂಡ ವಿಧಿಸುವುದರ ಜೊತೆಗೆ ಕಾನೂನ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ದಯಾನಂದ್, ವಿಶೇಷ ಆಯುಕ್ತರಾದ ಸುರಳ್ಕರ್ ವಿಕಾಸ್ ಕಿಶೋರ್, ಡಾ. ಅವಿನಾಶ್ ಮೆನನ್ ರಾಜೇಂದ್ರನ್, ಎಲ್ಲಾ ವಲಯ ಆಯುಕ್ತರು, ಉಪ ಆಯುಕ್ತ ಮಂಜುನಾಥ ಸ್ವಾಮಿ, ಪಾಲಿಕೆ, ಬೆಸ್ಕಾಾಂ, ಮಾಲಿನ್ಯ ನಿಯಂತ್ರಣ ಮಂಡಳಿ, ಪೊಲೀಸ್ ಇಲಾಖೆ, ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ಇದ್ದರು.
ಓದಿ:ನಿಮ್ಮ ಜೊತೆ ನಾವಿದ್ದೇವೆ ಹೋರಾಟ ಮಾಡಿ: ಸಿದ್ದರಾಮಯ್ಯ ಬೆಂಬಲಕ್ಕೆ ನಿಂತ ಕಾಂಗ್ರೆಸ್ ಹೈಕಮಾಂಡ್ - Congress High Command