ಮೈಸೂರು : ಈ ವರ್ಷ ನಡೆದ ನೀಟ್ ಪರೀಕ್ಷೆಯಲ್ಲಿ ಪಠ್ಯಕ್ರಮದಲ್ಲಿ ಇಲ್ಲದ ಪ್ರಶ್ನೆಗಳು ಬಂದಿರುವುದಕ್ಕೆ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರದ ಯಡವಟ್ಟೇ ಕಾರಣ ಹೊರತು, ಎನ್‌ಸಿಆರ್‌ಟಿಯಿಂದ ಯಾವುದೇ ಪ್ರಮಾದವಾಗಿಲ್ಲ ಎಂದು ಎನ್‌ಸಿಇಆರ್‌ಟಿ ನಿರ್ದೇಶಕ ಪ್ರೊ. ದಿನೇಶ್ ಪ್ರಸಾದ್ ಸಕ್ಲಾನಿ ಸ್ಪಷ್ಟಪಡಿಸಿದ್ದಾರೆ.
ನಗರದ ಪ್ರಾದೇಶಿಕ ಶಿಕ್ಷಣ ಸಂಸ್ಥೆ (ಆರ್‌ಐಇ)ಯಲ್ಲಿ ಸೋಮವಾರ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಎನ್‌ಸಿಇಆರ್‌ಟಿಯ 2019ರ ವರ್ಷದ ಪಠ್ಯಕ್ರಮದಲ್ಲಿ ಇರುವ ವಿಷಯಗಳನ್ನು ಆಧರಿಸಿ ಅವರು ಪ್ರಶ್ನೆ ಪತ್ರಿಕೆ ಸಿದ್ಧಗೊಳಿಸಿದ್ದಾರೆ. ಆದರೆ 2020ರಲ್ಲಿ ಪ್ರಕಟಗೊಂಡ ಹೊಸ ಪಠ್ಯಕ್ರಮದ ಪ್ರಕಾರ ಅವರು ಪ್ರಶ್ನೆ ಪತ್ರಿಕೆ ಸಿದ್ಧಗೊಳಿಸಬೇಕಾಗಿತ್ತು. ಈ ವಿಚಾರದಲ್ಲಿ ನಮ್ಮನ್ನು ದೂರುವುದು ಸರಿಯಲ್ಲ. ಏಕೆಂದರೆ ಹೊಸ ಪಠ್ಯಕ್ರಮದ ಪೂರ್ತಿ ಪಾಠ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಇದನ್ನು ಅವರು ಗಮನಿಸಬೇಕಾಗಿತ್ತು ಎಂದರು.
ಕರ್ನಾಟಕದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸುವ ವಿಚಾರವು ರಾಜ್ಯ ಸರ್ಕಾರಕ್ಕೆ ಬಿಟ್ಟ ವಿಚಾರ. ಆದರೆ, ರಾಜ್ಯದಲ್ಲಿ ಈಗಾಗಲೇ ಕೇಂದ್ರಿಯ ಪಠ್ಯಕ್ರಮವನ್ನು ಹೊಂದಿರುವ ಶಿಕ್ಷಣ ಸಂಸ್ಥೆಗಳು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಳವಡಿಸಿಕೊಂಡಿವೆ. ಈ ನೀತಿಯನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ಸ್ವಾಯತ್ತ ಸಂಸ್ಥೆಯಾಗಿದೆ. ಅಲ್ಲದೇ ಶಿಕ್ಷಣವು ಸಮವರ್ತಿ ಪಟ್ಟಿಯಲ್ಲಿದೆ. ಆದ್ದರಿಂದ, ನಮ್ಮ ಸಂಸ್ಥೆಯ ಕಾರ್ಯವೇನಿದ್ದರೂ ಪಠ್ಯಕ್ರಮಗಳನ್ನು ಸಿದ್ಧಪಡಿಸುವುದು ಹಾಗೂ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡುವುದು ಮಾತ್ರ. ಅನುಷ್ಠಾನದ ವಿಚಾರ ಅವರಿಗೆ ಬಿಟ್ಟದ್ದು. ಎನ್‌ಇಪಿ ಕುರಿತು ಸಲಹಾ ಸಮಿತಿಯಲ್ಲಿ ಇರುವ ಕೆಲವು ಸದಸ್ಯರು ಈ ಕುರಿತು ಮಾತನಾಡಿದ್ದರೆ, ಅದು ಅವರ ವೈಯಕ್ತಿಕ ಅಭಿಪ್ರಾಯಗಳೇ ಹೊರತು, ನಮ್ಮದಲ್ಲ ಎಂದು ಸಕ್ಲಾನಿ ತಿಳಿಸಿದರು.