ಕುರಿಗಾಹಿಯ ರಕ್ಷಣೆ ಮಾಡಿದ ಎನ್‌ಸಿಸಿ ತಂಡ (ETV Bharat) ತುಮಕೂರು : ಮೈತುಂಬ ಡಾಂಬರ್ ಮೆತ್ತಿಕೊಂಡು ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ ವ್ಯಕ್ತಿಯ ಜೀವವನ್ನು ಎನ್‌ಸಿಸಿ ತಂಡದವರು ಉಳಿಸಿರುವ ಘಟನೆ ತುಮಕೂರು ತಾಲೂಕಿನ ಹಿರೇಹಳ್ಳಿ ಬಳಿಯ ಮಂದಾರಗಿರಿ ಬೆಟ್ಟದ ಪಕ್ಕದಲ್ಲಿ ನಡೆದಿದೆ.
ರಸ್ತೆಗೆ ಹಾಕುವ ಡಾಂಬರ್ ಸುರಿದಿದ್ದ ಗುಂಡಿಗೆ ಬಿದ್ದಿದ್ದ ಕುರಿಗಳನ್ನು ರಕ್ಷಿಸಲು ಹೋಗಿ, ಅದರೊಳಗೆ ಬಿದ್ದಿದ್ದ ವ್ಯಕ್ತಿಯನ್ನು ಎನ್‌ಸಿಸಿ ಬೆಟಾಲಿಯನ್ ಕ್ಯಾಂಪ್ ಟೀಂನ ಸದಸ್ಯರು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಂದಾರಗಿರಿ ಬೆಟ್ಟದ ಬಳಿ ರಸ್ತೆಗೆ ಹಾಕುವ ಡಾಂಬರ್ ಸುರಿದಿದ್ದ ಗುಂಡಿಗೆ ಸುಮಾರು ಏಳೆಂಟು ಕುರಿಗಳು ಬಿದ್ದಿದ್ದವು. ಈ ಕುರಿಗಳನ್ನ ರಕ್ಷಿಸುವ ಭರದಲ್ಲಿ ಕುರಿಗಾಯಿ ಆಯತಪ್ಪಿ ಡಾಂಬರ್ ಗುಂಡಿಗೆ ಬಿದ್ದಿದ್ದಾನೆ.
ಸುಮಾರು ಎರಡು ಗಂಟೆಗಳ ಕಾಲ ಡಾಂಬರ್ ಗುಂಡಿಯಲ್ಲೇ ಕುರಿಗಾಯಿ ಬಿದ್ದಿದ್ದಾನೆ. ಅದೇ ಸಮಯಕ್ಕೆ ಎನ್‌ಸಿಸಿ ಕ್ಯಾಂಪ್ ಗೆ ತೆರಳಿದ್ದ ಟೀಂ, ಫೈರಿಂಗ್ ತರಬೇತಿ ಪಡೆಯುವ ವೇಳೆ ಆತನನ್ನ ಗಮನಿಸಿದೆ. ಕೂಡಲೇ ಆತನನ್ನ ಗುಂಡಿಯಿಂದ ಮೇಲಕ್ಕೆ ಎತ್ತಿ ರಕ್ಷಣೆ ಮಾಡಿದೆ.
ತುಮಕೂರಿನ ನಾಲ್ಕನೇ ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ ಟೀಂನಿಂದ ರಕ್ಷಣೆ ಮಾಡಲಾಗಿದ್ದು, ಎನ್‌ಸಿಸಿ ಕ್ಯಾಂಪ್ ತರಬೇತಿಯಲ್ಲಿದ್ದ ಬಿ. ಹೆಚ್ ಎಂ ತಿಲಕ್ ರಾಜ್, ಕೆಡೆಟ್ ಮಹೇಶ್, ಜುಬೇದ್, ಮನೋಜ್, ದರ್ಶನ್ರಿಂದ ರಕ್ಷಣೆ ಮಾಡಲಾಗಿದೆ. ಅಲ್ಲದೆ ಐದು ಕುರಿಗಳನ್ನು ಸಹ ರಕ್ಷಿಸಲಾಗಿದೆ.
ಇದನ್ನೂ ಓದಿ :Watch...ಭದ್ರಾ ನದಿ ಮಧ್ಯದಲ್ಲಿ ಸಿಲುಕಿದ್ದ 30ಕ್ಕೂ ಹೆಚ್ಚು ಜಾನುವಾರುಗಳ ರಕ್ಷಣೆ - Cattle Rescue