ಬೆಂಗಳೂರು:ನಮ್ಮ ಮೆಟ್ರೋ ಗ್ರೀನ್ ಲೈನ್ ವಿಸ್ತೃತ ನಾಗಸಂದ್ರ - ಮಾದವಾರ (3.7ಕಿಮೀ) ಮಾರ್ಗದಲ್ಲಿ ಗುರುವಾರ ಮೆಟ್ರೋ ರೈಲು ಸುರಕ್ಷತಾ ಆಯುಕ್ತರ ತಂಡ (ಸಿಎಂಆರ್‌ಎಸ್) ತಪಾಸಣೆ ಪೂರ್ಣಗೊಳಿಸಿದೆ. ಇನ್ನೆರಡು ವಾರದಲ್ಲಿ ವರದಿ ನೀಡುವ ನಿರೀಕ್ಷೆಯಿದೆ. ಶೀಘ್ರದಲ್ಲಿಯೇ ಪ್ರಯಾಣಿಕರ ಸಂಚಾರ ಪ್ರಾರಂಭವಾಗಲಿದೆ.
ಮೋಟಾರ್ ಟ್ರಾಲಿ ಮೂಲಕ ಮಾರ್ಗದಲ್ಲಿ ಸಂಚರಿಸಿದ ಸಿಎಂಆರ್‌ಎಸ್ ತಂಡದವರು ಪರಿಶೀಲನೆ ನಡೆಸಿದರು. ಮಾರ್ಗದ ತಿರುವು, ಪ್ರಾಯೋಗಿಕ ಸಂಚಾರದ ವೇಳೆಯಲ್ಲಿ ರೈಲಿನ ವೇಗ, ನಿಲ್ದಾಣಗಳಲ್ಲಿ ನಿಲ್ಲಬೇಕಾದಾಗ ನಿಧಾನಗತಿ, ಬ್ರೇಕ್ ಸಿಸ್ಟಂ ಹಾಗೂ ವಿದ್ಯುತ್ ಪೂರೈಕೆ ಸೇರಿ ಇತರ ಅಂಕಿ - ಅಂಶಗಳ ಬಗ್ಗೆ ಬೆಂಗಳೂರು ಮೆಟ್ರೋ ರೈಲು ನಿಗಮದ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಮಂಜುನಾಥ ನಗರ, ಚಿಕ್ಕಬಿದರಕಲ್ಲು ಹಾಗೂ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ ನಿಲ್ದಾಣಗಳನ್ನು ತಪಾಸಣೆ ಮಾಡಿದರು. ಸಿಎಂಆರ್‌ಎಸ್ ತಂಡ 15 ದಿನಗಳಲ್ಲಿ ವರದಿ ನೀಡುವ ಸಾಧ್ಯತೆಯಿದೆ. ಅವರು ಸೂಚಿಸುವ ಕೆಲ ಬದಲಾವಣೆಗಳ ಅನ್ವಯ ರೈಲು ಸಂಚಾರ ಆರಂಭಿಸಲಾಗುವುದು ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದರು.