ಮೈಸೂರು: ಮದ್ಯಪಾನ ಮಾಡಿ ಕಾರು ಚಲಾಯಿಸಿ ಇಬ್ಬರು ವಿದ್ಯಾರ್ಥಿಗಳ ಸಾವಿಗೆ ಕಾರಣರಾಗಿದ್ದ ಕಾರು ಚಾಲಕನ ವಿರುದ್ಧ ದಾಖಲಾಗಿದ್ದ ಅಪಘಾತ ಪ್ರಕರಣವನ್ನು ಎಡಿಜಿಪಿ ಅಲೋಕ್ ಕುಮಾರ್ ಸೂಚನೆ ಮೇರೆಗೆ ಉದ್ದೇಶಪೂರಕವಲ್ಲದ ಕೊಲೆ ಪ್ರಕರಣ ಎಂದು ಪೊಲೀಸರು ಚಾರ್ಜ್ಶೀಟ್ ಬದಲಿಸಿ ಕೋರ್ಟ್ಗೆ ಸಲ್ಲಿಸಿದ್ದಾರೆ. ಈ ಬಗ್ಗೆ ಸ್ವತಃ ಎಡಿಜಿಪಿ ಅಲೋಕ್ ಕುಮಾರ್ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಏನಿದು ಪ್ರಕರಣ?:ಏಪ್ರಿಲ್ 14 ರಂದು ಮೈಸೂರು ವಿಶ್ವವಿದ್ಯಾಲಯದ ಬಳಿಯ ಚದುರಂಗ ರಸ್ತೆಯ, ಆಯುಷು ಸಂಸ್ಥೆಯ ಬಳಿ ಕಾರು, ಸ್ಕೂಟರ್ ಹಾಗೂ ಬೈಕ್ ನಡುವೆ ಅಪಘಾತವಾಗಿತ್ತು. ಈ ಅಪಘಾತದಲ್ಲಿ ಸ್ಕೂಟರ್ನಲ್ಲಿದ್ದ ಮೈಸೂರು ನಗರದ ಉಲ್ಲಾಸ್, ಕೇರಳ ಮೂಲದ ಶಿವಾನಿ ಎಂಬ ವಿದ್ಯಾರ್ಥಿಗಳು ಮೃತಪಟ್ಟಿದ್ದು, ಇವರಿಬ್ಬರು ಒಂದೇ ಸ್ಕೂಟರ್ನಲ್ಲಿ ಇದ್ದರು. ಮತ್ತೊಬ್ಬ ಬೈಕ್ ಸವಾರ ಮಹಾದೇವ ಸ್ವಾಮಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಈಗಲೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಇಬ್ಬರು ಸ್ಕೂಟರ್ ಹಾಗೂ ಬೈಕ್ ಸವಾರರಿಗೆ ಪಾನಮತ್ತನಾಗಿದ್ದ ಕಾರು ಚಾಲಕ ಡಿಕ್ಕಿ ಹೊಡೆದಿದ್ದ.