ಕರ್ನಾಟಕ

karnataka

ETV Bharat / state

ಬಜೆಟ್‌ ಅನುದಾನದ ನಿರೀಕ್ಷೆಯಲ್ಲಿ ಮೈಸೂರಿನ ಪಾರಂಪರಿಕ ಕಟ್ಟಡಗಳು: ಪ್ರತ್ಯಕ್ಷ ವರದಿ

2024-25ರ ಸಾಲಿಗೆ ಫೆಬ್ರುವರಿ 16ರಂದು ಸಿಎಂ ಸಿದ್ದರಾಮಯ್ಯ ಮಂಡಿಸಲಿರುವ ಬಜೆಟ್​ನಲ್ಲಿ ಮೈಸೂರು ಜಿಲ್ಲೆಯ ಪಾರಂಪರಿಕ ಕಟ್ಟಡಗಳ ದುರಸ್ತಿಗೆ ಅನುದಾನ ಸಿಗಬಹುದು ಎಂಬ ನಿರೀಕ್ಷೆ ಇದೆ.

mysuru-heritage-buildings
ಪಾರಂಪರಿಕ ಕಟ್ಟಡ

By ETV Bharat Karnataka Team

Published : Feb 13, 2024, 6:05 PM IST

Updated : Feb 13, 2024, 6:37 PM IST

ಅನುದಾನದ ನಿರೀಕ್ಷೆಯಲ್ಲಿ ಮೈಸೂರಿನ ಪಾರಂಪರಿಕ ಕಟ್ಟಡಗಳು

ಮೈಸೂರು: ಜಿಲ್ಲೆಯಲ್ಲಿ ನೂರಾರು ಪಾರಂಪರಿಕ ಕಟ್ಟಡಗಳಿವೆ. ಅವುಗಳಲ್ಲಿ ಈಗಾಗಲೇ ಹಲವು ಕಟ್ಟಡಗಳು ಸರಿಯಾದ ನಿರ್ವಹಣೆ ಇಲ್ಲದೆ ಶಿಥಿಲಾವಸ್ಥೆ ತಲುಪಿವೆ. ಲೋಕಸಭಾ ಚುನಾವಣೆಯನ್ನು ಗುರಿಯಾಗಿಟ್ಟುಕೊಂಡು ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸುತ್ತಿರುವ ಬಜೆಟ್​ನಲ್ಲಿ ತಮ್ಮ ತವರು ಜಿಲ್ಲೆಯಾದ ಮೈಸೂರಿನಲ್ಲಿರುವ ಪಾರಂಪರಿಕ ಕಟ್ಟಡಗಳ ಸಂರಕ್ಷಣೆ, ನಿರ್ವಹಣೆ ಮತ್ತು ದುರಸ್ತಿಗೆ ಅನುದಾನ ನೀಡಬಹುದು ಎಂಬ ನಿರೀಕ್ಷೆಗಳಿವೆ.

ಲ್ಯಾನ್ಸ್ ಡೌನ್ ಬಿಲ್ಡಿಂಗ್:ಮೈಸೂರು ಜಿಲ್ಲೆಯಲ್ಲಿ ಒಟ್ಟು 224 ಪಾರಂಪರಿಕ ಕಟ್ಟಡಗಳಿವೆ. ಇವುಗಳಲ್ಲಿ ಸರ್ಕಾರ 121 ಕಟ್ಟಡಗಳನ್ನು ಅಧಿಕೃತವಾಗಿ ಪಾರಂಪರಿಕ ಕಟ್ಟಡಗಳೆಂದು ಘೋಷಿಸಿದೆ. ಅದರಲ್ಲಿ ನಗರದ ಹೃದಯ ಭಾಗದಲ್ಲಿರುವ ಲ್ಯಾನ್ಸ್ ಡೌನ್ ಬಿಲ್ಡಿಂಗ್ ಸಹ ಒಂದು. ಇದೂ ಸಹ ಶಿಥಿಲಾವಸ್ಥೆ ತಲುಪಿದೆ. 2012ರಲ್ಲಿ ಈ ಕಟ್ಟಡ ಕುಸಿದು ನಾಲ್ವರು ಸಾವನ್ನಪ್ಪಿದ್ದರು. ಇದಾದ ಬಳಿಕ 12 ವರ್ಷಗಳಾದರೂ ಕಟ್ಟಡ ನವೀಕರಣಗೊಂಡಿಲ್ಲ. ಪಾರಂಪರಿಕ ತಜ್ಞರ ಸಮಿತಿ ಪಾರಂಪರಿಕ ಶೈಲಿಯಲ್ಲೇ ಕಟ್ಟಡವನ್ನು ಪುನರ್‌ನಿರ್ಮಾಣ ಮಾಡಲು ಗ್ರೀನ್ ಸಿಗ್ನಲ್ ನೀಡಿದ್ದರು.

ದೇವರಾಜ ಮಾರುಕಟ್ಟೆ:ನಗರದ ಕೇಂದ್ರ ಭಾಗದಲ್ಲಿರುವ ದೇವರಾಜ ಮಾರುಕಟ್ಟೆ ಸುಮಾರು 3.67 ಎಕರೆ ವ್ಯಾಪ್ತಿಯಲ್ಲಿದೆ. ಒಟ್ಟು 728 ಮಳಿಗೆಗಳನ್ನು ಹೊಂದಿದೆ. 2016ರಲ್ಲಿ ಮಾರುಕಟ್ಟೆಯ ಉತ್ತರ ಭಾಗ ಕುಸಿದು ಬಿದ್ದಿತ್ತು. ನಿತ್ಯ ಈ ಮಾರುಕಟ್ಟೆಗೆ ಸಾವಿರಾರು ಮಂದಿ ಬರುತ್ತಾರೆ. ಈ ಕಟ್ಟಡವೂ ಸಹ ನಿರ್ವಹಣೆ ಕೊರತೆಯಿಂದ ಶಿಥಿಲಾವಸ್ಥೆ ತಲುಪಿದೆ. ಪಾರಂಪರಿಕ ತಜ್ಞರು ನೀಡಿರುವ ವರದಿಯ ಪ್ರಕಾರ, ಸಂರಕ್ಷಣೆ ಮಾಡಬೇಕಾದ ಅವಶ್ಯಕತೆ ಇದೆ. ಕಾಮಗಾರಿಗೆ ಸುಮಾರು 90 ಕೋಟಿ ರೂಪಾಯಿ ಹಣದ ಅವಶ್ಯಕತೆ ಇದೆ ಎಂದು ಅಂದಾಜಿಸಲಾಗಿದೆ.

ಮಹಾರಾಣಿ ಕಾಲೇಜು ಉನ್ನತೀಕರಣ: ಮೈಸೂರಿನ ಹೆಸರಾಂತ ಕಾಲೇಜುಗಳಲ್ಲಿ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ಸಹ ಒಂದು. ಇದನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ತಾಯಿ ಕೆಂಪ ನಂಜಮ್ಮಣ್ಣಿಯವರು 1917ರಲ್ಲಿ ಸ್ಥಾಪಿಸಿದ್ದರು. ಈ ಕಟ್ಟಡದಲ್ಲಿ ಸುಮಾರು 3,500ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. ಶತಮಾನೋತ್ಸವ ಆಚರಿಸಿಕೊಂಡ ಕಾಲೇಜು ಕಟ್ಟಡವು 2022ರಲ್ಲಿ ಭಾಗಶಃ ಕುಸಿದು ಬಿದ್ದಿತ್ತು. ಆ ಬಳಿಕ ಇಲ್ಲಿ ನಡೆಯುತ್ತಿದ್ದ ಎಲ್ಲಾ ತರಗತಿಗಳನ್ನು ಹೊಸ ಕಟ್ಟಡಕ್ಕೆ ವರ್ಗಾಯಿಸಲಾಗಿದೆ. ಡಿಸಿ ಅಧ್ಯಕ್ಷತೆಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಕಟ್ಟಡ ನವೀಕರಣಕ್ಕೆ ಅನುಮತಿ ದೊರೆತಿದೆ. ನವೀಕರಣಕ್ಕೆ ಸುಮಾರು 65 ಕೋಟಿ ರೂಪಾಯಿ ಅನುದಾನ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

ಈ ಕಟ್ಟಡಗಳನ್ನು ಹೊರತುಪಡಿಸಿ ಲಲಿತ್ ಮಹಲ್ ಪ್ಯಾಲೆಸ್, ಕ್ಲಾಕ್ ಟವರ್, ಜಗನ್ಮೋಹನ ಅರಮನೆ ಸೇರಿದಂತೆ ಇನ್ನಿತರ ಹಲವು ಪಾರಂಪರಿಕ ಕಟ್ಟಡಗಳು ನಿರ್ವಹಣೆ ಕೊರತೆಯಿಂದ ಶಿಥಿಲಾವಸ್ಥೆ ತಲುಪುತ್ತಿವೆ. ಅವುಗಳ ನಿರ್ವಹಣೆ ಮತ್ತು ನವೀಕರಣಕ್ಕೆ ಬಜೆಟ್‌ನಲ್ಲಿ ಅನುದಾನ ಸಿಗಬಹುದು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:ಮೈಸೂರಿನ ಸಣ್ಣ ಕೈಗಾರಿಕೆಗಳಿಗೆ ಬಜೆಟ್‌ನಲ್ಲಿ ಉತ್ತೇಜನ ನೀಡಬೇಕು: ಸುರೇಶ್ ಕುಮಾರ್ ಜೈನ್

Last Updated : Feb 13, 2024, 6:37 PM IST

ABOUT THE AUTHOR

...view details