ಮೈಸೂರು: ಜಂಬೂ ಸವಾರಿ ಮೆರವಣಿಗೆಗೆ ಅಕ್ಟೋಬರ್ 12ರ ಸಂಜೆ 4ರಿಂದ 4.30ರ ಶುಭ ಕುಂಭ ಲಗ್ನದಲ್ಲಿ ಗಣ್ಯರಿಂದ ಪುಷ್ಪಾರ್ಚನೆ ನಡೆಯಲಿದೆ. ಇದರ ನಿಮಿತ್ತ ಇಂದು ಬೆಳಗ್ಗೆ ಅರಮನೆಯ ಮುಂಭಾಗದಲ್ಲಿ ದಸರಾ ಜಂಬೂ ಸವಾರಿಯು ಪುಷ್ಪಾರ್ಚನೆಯ ತಾಲೀಮನ್ನು ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ನಡೆಸಿತು.
ತಾಲೀಮಿನಲ್ಲಿ 750 ಕೆ.ಜಿ ತೂಕದ ಚಿನ್ನದ ಅಂಬಾರಿ ಹೊರುವ ಅಭಿಮನ್ಯು, ಹಾಗೂ ಕುಮ್ಕಿ ಆನೆಗಳಾದ ಹಿರಣ್ಯ ಮತ್ತು ಲಕ್ಷ್ಮೀ, ಅಶ್ವಾರೋಹಿ ದಳ, ಪೊಲೀಸ್ ಬ್ಯಾಂಡ್, ಪೊಲೀಸ್ ತುಕಡಿಗಳು ಭಾಗವಹಿಸಿದ್ದವು. ಪುಷ್ಪಾರ್ಚನೆ ಮಾಡುವ ಸ್ಥಳದಿಂದ ಗಜಪಡೆ ಹಾಗೂ ಅಶ್ವಾರೋಹಿ ದಳದ ಜತೆಗೆ ಪೊಲೀಸ್ ಬ್ಯಾಂಡ್ ಯಾವ ರೀತಿ ಸಾಗಬೇಕು ಎಂಬುದನ್ನು ತಾಲೀಮು ನಡೆಸಲಾಯಿತು.
ಅರಮನೆ ಮುಂಭಾಗ ಜಂಬೂ ಸವಾರಿ ಪುಷ್ಪಾರ್ಚನೆ ತಾಲೀಮು (ETV Bharat) ಡಿಸಿಎಫ್ ಡಾ.ಪ್ರಭುಗೌಡ ಮಾತನಾಡಿ, "ನಾಡಹಬ್ಬ ದಸರಾ ನಿಮಿತ್ತ ಗಜಪಡೆಗೆ ಎಲ್ಲ ತಾಲೀಮು ಮುಗಿಸಲಾಗಿದ್ದು, ಕೊನೆಯ ಹಂತದ ಪುಷ್ಪಾರ್ಚನೆ ತಾಲೀಮನ್ನು ನಡೆಸಲಾಯಿತು. ಪುಷ್ಪಾರ್ಚನೆ ದಿನ ಯಾವ ರೀತಿ ಕ್ರಮವಾಗಿ ಮೆರವಣಿಗೆ ಸಾಗಬೇಕು ಎಂಬುದನ್ನು ಇವತ್ತು ತಾಲೀಮು ನಡೆಸಲಾಗಿದ್ದು, ನಿಶಾನೆ ಆನೆ ಧನಂಜಯ, ನೌಪಥ್ ಆನೆಯಾಗಿ ಗೋಪಿ ಸ್ವಲ್ಪವೂ ವಿಚಲಿತರಾಗದೇ ಒಳ್ಳೆಯ ರೀತಿಯಲ್ಲಿ ಸ್ಪಂದಿಸಿದೆ. ಹಾಗೂ ಜಂಬೂ ಸವಾರಿಯ ದಿನ 9 ಆನೆಗಳು ಮಾತ್ರ ಮೆರವಣಿಗೆಯಲ್ಲಿ ಭಾಗವಹಿಸಲಿದ್ದು, ಈಗಾಗಲೇ ತಾಲೀಮಿನಲ್ಲಿ ಅಂಬಾರಿ ಆನೆ ಮತ್ತು ಕುಮ್ಕಿ ಆನೆಗಳ ಸ್ಪಂದನೆ ಚೆನ್ನಾಗಿದೆ. ನಾಳೆ ಕೂಡ ತಾಲೀಮು ಇರುತ್ತದೆ. ಈಗಾಗಲೇ ಸಿಡಿಮದ್ದು ತಾಲೀಮಿನಲ್ಲೂ ಗಜಪಡೆ ಭಾಗವಹಿಸಿದೆ" ಎಂದು ಮಾಹಿತಿ ನೀಡಿದರು.
ಅರಮನೆ ಮುಂಭಾಗ ಜಂಬೂ ಸವಾರಿ ಪುಷ್ಪಾರ್ಚನೆ ತಾಲೀಮು (ETV Bharat) ಇದನ್ನೂ ಓದಿ:ಅಂಬಾವಿಲಾಸ ಅರಮನೆಯ ದೀಪಾಲಂಕಾರದಲ್ಲಿ ಪೊಲೀಸ್ ಬ್ಯಾಂಡ್ ನಿನಾದ