ಬೆಂಗಳೂರು:ಇತಿಹಾಸ ಪ್ರಸಿದ್ಧ ಮೈಸೂರಿನ ಶ್ರೀ ಚಾಮುಂಡೇಶ್ವರಿ ದೇವಿಯ ಮೇಲೆ ಹಾಕಿದ್ದ ಸೀರೆಗಳನ್ನು ಚಾಮುಂಡೇಶ್ವರಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ.ರೂಪಾ ಮಾರಾಟ ಮಾಡಿದ್ದರೆ ಅದು "ಕ್ಷಮಿಸಲಾರದ ಕೃತ್ಯ" ಎಂದಿರುವ ಹೈಕೋರ್ಟ್, ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧದ ತನಿಖೆಗೆ ತಡೆಯಾಜ್ಞೆ ವಿಧಿಸಿ ಆದೇಶಿಸಿತು.
ಮೈಸೂರಿನ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಸ್ನೇಹಮಯಿ ಕೃಷ್ಣ ಅವರು ಏರು ಧ್ವನಿಯಲ್ಲಿ ಮಾತನಾಡಿದ್ದು, ಪೊಲೀಸರ ಸಮ್ಮುಖದಲ್ಲಿ ರೂಪಾ ಅವರಿಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿತ್ತು. ಇದು ಸಂಪೂರ್ಣ ಅಸಂಭವನೀಯ. ಈ ಪ್ರಕರಣದ ವಿಚಾರಣೆ ಆಗದಿದ್ದರೂ ರೂಪಾ ವಿರುದ್ಧ ದಾಖಲಿಸಿರುವ ಪ್ರಕರಣ ಸರಿಯಾಗಿದ್ದರೆ ತನಿಖೆ ಅಗತ್ಯ. ರೂಪಾ ಅವರು ದೇವರ ಮೇಲೆ ಹಾಕಿರುವ ಸೀರೆಗಳನ್ನು ಮಾರಾಟ ಮಾಡಿದ್ದರೆ ಅದು ಕ್ಷಮಿಸಲಾರದ ಅಪರಾಧ. ಹೀಗಾಗಿ, ಸ್ನೇಹಮಯಿ ಕೃಷ್ಣ ವಿರುದ್ಧದ ತನಿಖೆಗೆ ತಡೆ ವಿಧಿಸಲಾಗಿದೆ ಎಂದು ಪೀಠ ತಿಳಿಸಿತು.
ವಿಚಾರಣೆ ವೇಳೆ ಅರ್ಜಿದಾರ ಪರ ವಕೀಲರು, ಡಿಸೆಂಬರ್ 12ರಂದು ರೂಪಾ ಅವರನ್ನು ಸ್ನೇಹಮಯಿ ಕೃಷ್ಣ ಏರುಧ್ವನಿಯಲ್ಲಿ ಬೆದರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಎರಡು ದಿನಗಳ ಬಳಿಕ ಪ್ರಕರಣ ದಾಖಲಾಗಿದೆ. ಚಾಮುಂಡೇಶ್ವರಿಗೆ ನೀಡಲಾದ ಸೀರೆಗಳನ್ನು ಮಾರಾಟ ಮಾಡಲಾಗಿದೆ ಎಂದು ಕೃಷ್ಣ ಆರೋಪಿಸಿದ್ದರು. ಜೊತೆಗೆ, ಸ್ನೇಹಮಯಿ ಕೃಷ್ಣ ಅವರು ಏರು ಧ್ವನಿಯಲ್ಲಿ ಮಾತನಾಡಿದ್ದು, ಪೊಲೀಸರ ಸಮ್ಮುಖದಲ್ಲಿ ಬೆದರಿಕೆ ಹಾಕಿದ್ದಾರೆ ಎಂದು ರೂಪಾ ದೂರು ನೀಡಿದ್ದಾರೆ ಎಂದರು.