ಮಂಡ್ಯ: ಸಕ್ಕರೆನಾಡು ಮಂಡ್ಯಕ್ಕೆ ರೆಬಲ್ ಲೇಡಿ ಸುಮಲತಾ ಅಂಬರೀಶ್ ಮತ್ತೆ ಎಂಟ್ರಿ ಕೊಟ್ಟಿದ್ದಾರೆ. ಲೋಕಸಭಾ ಚುನಾವಣೆ ಬಳಿಕ ರಾಜಕೀಯವಾಗಿ ಅಂತರ ಕಾಯ್ದುಕೊಂಡಿದ್ದ ಮಾಜಿ ಸಂಸದೆ ಸುಮಲತಾ ಅಂಬರೀಶ್ ಇಂದು ಮತ್ತೆ ಮಂಡ್ಯದ ಚಾಮುಂಡೇಶ್ವರಿ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಸಂಸದರ ಅನುದಾನದಡಿ 7 ಜನ ವಿಕಲಚೇತನರಿಗೆ ತಮ್ಮ ನಿವಾಸದ ಬಳಿ ತ್ರಿಚಕ್ರ ವಾಹನಗಳನ್ನು ವಿತರಣೆ ಮಾಡಿದ್ದಾರೆ. ಈ ಮೂಲಕ ಮುಂದೆ ಮಂಡ್ಯದಿಂದಲೇ ರಾಜಕಾರಣ ಪುನಾರಂಭದ ಸೂಚನೆ ಕೊಟ್ಟಿದ್ದಾರೆ.
ಇದೇ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಅವರು, "ಸ್ವಲ್ಪ ವಿಶ್ರಾಂತಿ ಬೇಕಿತ್ತು. ಹಾಗಾಗಿ ಪಾಸ್ ತೆಗೆದುಕೊಂಡಿದ್ದೆ. ಆದಷ್ಟು ಹಳ್ಳಿ ಹಳ್ಳಿಗಳಿಗೆ ಭೇಟಿ ಕೊಟ್ಟಿದ್ದೇನೆ. ಚುನಾವಣೆಯಲ್ಲಿ ಪ್ರಧಾನಿ ಮೋದಿ ಮಾತಿಗೆ ಬೆಲೆ ಕೊಟ್ಟು ಕ್ಷೇತ್ರ ಬಿಟ್ಟುಕೊಟ್ಟೆ. 5 ವರ್ಷ ನನಗಾಗಿ ಟೈಮ್ ಇರಲಿಲ್ಲ. ಕಾಲಿನ ಸಮಸ್ಯೆಗೆ ಚಿಕಿತ್ಸೆ ಪಡೆದು ರೆಸ್ಟ್ ಮಾಡಿದ್ದೇನೆ. ಜನವರಿ ಬಳಿಕ ಮಂಡ್ಯದಲ್ಲಿ ಪಕ್ಷ ಕಟ್ಟುವ ಕೆಲಸ ಮಾಡಲಿದ್ದೇನೆ. ನನ್ನ ಅವಧಿಯಲ್ಲಿ ಆಗಿರುವ ಕೆಲಸದ ಬಗ್ಗೆ ಪರಿಶೀಲನೆ ಮಾಡುತ್ತೇನೆ. ಬಿಜೆಪಿ ನನ್ನನ್ನು ಕಡೆಗಣಿಸಿಲ್ಲ. ಅವಶ್ಯಕತೆ ಬಿದ್ದಾಗ ಪಕ್ಷದ ಕೆಲಸಕ್ಕೆ ಬಳಸಿಕೊಂಡಿದ್ದಾರೆ." ಎಂದು ಹೇಳಿದರು.
"ಮಂಡ್ಯದಲ್ಲಿ ಬಿಜೆಪಿ ಬಲಪಡಿಸಬೇಕು ಎಂದು ಹೈಕಮಾಂಡ್ಗೆ ತಿಳಿಸಿದ್ದೇನೆ. ಚನ್ನಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಇದ್ದಿದ್ರೆ ಖಂಡಿತ ಕರೆಯುತ್ತಿದ್ದರು. ಮೈತ್ರಿ ಅಭ್ಯರ್ಥಿ ಇರುವುದರಿಂದ ಕರೆದಿಲ್ಲ. ಸದ್ಯಕ್ಕೆ ನಾನು ರೆಸ್ಟ್ನಲ್ಲಿ ಇದ್ದೇನೆ. ಮಂಡ್ಯದಲ್ಲಿ ಮುಂದೆ ಕಾರ್ಯಕ್ರಮಕ್ಕೆ ಓಡಾಡುವ ಕೆಲಸ ಮಾಡುತ್ತೇನೆ. ಬಿಜೆಪಿ ಶಕ್ತಿ ಹೆಚ್ಚು ಮಾಡಬೇಕು ಎನ್ನುವ ಆಸೆ ಇದೆ ಎಂದು ತಿಳಿಸಿದ್ದೇನೆ.
ನಾನು ಯಾವ ನಿರೀಕ್ಷೆಯನ್ನೂ ಇಟ್ಟುಕೊಂಡು ಬಿಜೆಪಿಗೆ ಬಂದಿಲ್ಲ: ಬಿಜೆಪಿ ಪಕ್ಷದಲ್ಲಿ ಸ್ಥಾನಮಾನ ನೀಡುವ ವಿಚಾರದ ಕುರಿತು ಪ್ರತಿಕ್ರಿಯಿಸಿ, "ನಾನು ಯಾವ ನಿರೀಕ್ಷೆಯನ್ನೂ ಇಟ್ಟುಕೊಂಡು ಬಿಜೆಪಿಗೆ ಬಂದಿಲ್ಲ. ಬೆಂಬಲಿಗರು ಆಸೆ ಪಡುವುದರಲ್ಲಿ ತಪ್ಪೇನಿಲ್ಲ. ಮೂರು ನಾಲ್ಕು ತಿಂಗಳಲ್ಲೇ ಎಲ್ಲ ಆಗಿಬಿಡಬೇಕು ಅಂತ ಏನಿಲ್ಲ. ನಮಗೂ ಟೈಮ್ ಬೇಕು, ಅವರಿಗೂ ಟೈಮ್ ಬೇಕು. ಹೀಗಾಗಿ ನಾನು ಯಾವುದನ್ನೂ ನೆಗೆಟಿವ್ ಆಗಿ ನೋಡುತ್ತಿಲ್ಲ. ಮತ್ತೆ ಮಂಡ್ಯದಲ್ಲೇ ನನ್ನ ರಾಜಕಾರಣ ಆರಂಭವಾಗುತ್ತೆ. ನನ್ನ ಮನೆ ಇಲ್ಲೇ ಇದೆ. ಮಂಡ್ಯದಲ್ಲೇ ಇದ್ದೇನೆ. ಜನವರಿ ನಂತರ ಸಕ್ರಿಯವಾಗಿ ರಾಜಕೀಯದಲ್ಲಿ ತೊಡಗಿಸಿಕೊಳ್ಳುತ್ತೇನೆ. ಬೇರೆಯವರು ಮಾತನಾಡುವುದನ್ನು ನಾವು ತಡೆಯಲು ಆಗಲ್ಲ. ಟೀಕೆಗಳಿಗೆ ತಲೆ ಕೆಡಿಸಿಕೊಳ್ಳಲ್ಲ. ಮಂಡ್ಯದಲ್ಲಿ ಬಿಜೆಪಿ ಪಕ್ಷ ಬಲ ಪಡಿಸಬೇಕು. ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆ ಮಾಡುತ್ತೇವೆ. ಜೆಡಿಎಸ್ ಮೊದಲೇ ಇರುವಂತ ಪಕ್ಷ. ಬಿಜೆಪಿ ಪಕ್ಷವನ್ನು ಗಟ್ಟಿಗೊಳಿಸಬೇಕು" ಎಂದು ತಿಳಿಸಿದರು.