ಕರ್ನಾಟಕ

karnataka

ETV Bharat / state

ನೇಹಾ, ಅಂಜಲಿ ಹತ್ಯೆ ಮಾದರಿಯಲ್ಲಿ ಯುವತಿಗೆ ಕೊಲೆ ಬೆದರಿಕೆ: ಬೆಳಗಾವಿಯಲ್ಲಿ ಪಾಗಲ್ ಪ್ರೇಮಿ ಅರೆಸ್ಟ್​ - MURDER THREAT TO YOUNG GIRL - MURDER THREAT TO YOUNG GIRL

ನೇಹಾ, ಅಂಜಲಿ ಹತ್ಯೆಯ ಮಾದರಿಯಲ್ಲಿ ಯುವತಿಗೆ ಕೊಲೆ ಬೆದರಿಕೆ ಹಾಕಿರುವ ಪಾಗಲ್ ಪ್ರೇಮಿಯನ್ನು ಬೆಳಗಾವಿ ಗ್ರಾಮೀಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

BELAGAVI  DEATH THREAT TO YOUNG WOMAN  ACCUSED ARRESTED
ಪ್ರೀತಿ ನಿರಾಕರಿಸಿದ್ದಕ್ಕೆ ಆರೋಪಿಯು, ಯುವತಿಯ ಮನೆ ಮೇಲೆ ಕಲ್ಲು ತೂರಿ, ಕಿಟಕಿ ಗ್ಲಾಸ್ ಪುಡಿ ಪುಡಿ ಮಾಡಿರುವುದು (ETV Bharat)

By ETV Bharat Karnataka Team

Published : May 25, 2024, 1:28 PM IST

Updated : May 25, 2024, 3:03 PM IST

ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ (ETV Bharat)

ಬೆಳಗಾವಿ:ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ, ಅಂಜಲಿ ಅಂಬಿಗೇರ ಕೊಲೆ ಪ್ರಕರಣದ ಬಳಿಕ ಬೆಳಗಾವಿಯಲ್ಲೂ ಕೂಡ ಪಾಗಲ್ ಪ್ರೇಮಿಯೊಬ್ಬ ಯುವತಿಗೆ ತೊಂದರೆ ಕೊಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಯುವಕನ ಕಿರುಕುಳಕ್ಕೆ ಯುವತಿಯ ಕುಟುಂಬವೊಂದು ಹೈರಾಣಾಗಿದೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.

ಬೆಳಗಾವಿ ತಾಲೂಕಿನ ಕಿಣೆಯ ಗ್ರಾಮದಲ್ಲಿ ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯ ಮನೆ ಮೇಲೆ ಕಲ್ಲು ತೂರಿ, ಕಿಟಕಿ ಗ್ಲಾಸ್ ಪುಡಿ ಪುಡಿ ಮಾಡಿರುವ ಘಟನೆ ನಡೆದಿದೆ. ಹುಬ್ಬಳ್ಳಿಯ ನೇಹಾಳಂತೆ ಕೊಲೆ ಮಾಡುವ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ಪೊಲೀಸರು ಆರೋಪಿ ಯುವಕ ತಿಪ್ಪಣ್ಣ ಡೋಕರೆ (27) ಎಂಬಾತನನ್ನು ಬಂಧಿಸಿ, ಕ್ರಿಮಿನಲ್​ ಪ್ರಕರಣ ದಾಖಲಿಸಿದ್ದಾರೆ.

ತನ್ನನ್ನು ಪ್ರೀತಿಸು ಹಾಗೂ ಮದುವೆ ಆಗು ಎಂದು ಕಳೆದ ಮೂರು ವರ್ಷಗಳಿಂದ ಯುವಕ ತಿಪ್ಪಣ್ಣ ಡೋಕರೆ ಪೀಡಿಸುತ್ತಿದ್ದಾನೆ. ನಿತ್ಯ ಕಾಲೇಜಿಗೆ ಹೋಗುವಾಗಲೂ ಹಿಂಬಾಲಿಸಿ ಬಂದು ಕಿರುಕುಳ ನೀಡುತ್ತಿದ್ದ. ಈ ಹಿನ್ನೆಲೆಯಲ್ಲಿ ಅವನ ಹುಚ್ಚಾಟಕ್ಕೆ ಬೇಸತ್ತು ಬಿಕಾಂ ಓದುತ್ತಿರುವ ತಮ್ಮ ಮಗಳು ಕಾಲೇಜಿಗೆ ಹೋಗುವುದನ್ನೇ ನಿಲ್ಲಿಸಿದ್ದಾಳೆ ಎಂದು ಯುವತಿ ಕುಟುಂಬಸ್ಥರು ಆರೋಪ ಮಾಡಿದ್ದಾರೆ.

ತಾಯಿ ಜೊತೆಗೆ 21 ವರ್ಷದ ಯುವತಿ ವಾಸವಿದ್ದಾಳೆ. ಯುವತಿ ಜೊತೆಗೆ ಮದುವೆ ಮಾಡಿಕೊಡುವಂತೆ ಆಕೆಯ ತಾಯಿಗೂ ತಿಪ್ಪಣ್ಣ ಧಮ್ಕಿ ಹಾಕಿದ್ದಾನೆ. ಮದುವೆ ಮಾಡದಿದ್ದರೆ ಹತ್ಯೆ ಮಾಡುವುದಾಗಿ ಯುವತಿ ಹಾಗೂ ಆಕೆಯ ತಾಯಿಗೂ ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿದ್ದಾರೆ.

ಕೆಲ ತಿಂಗಳ ಹಿಂದೆಯೇ ಯುವತಿಯ ಮನೆಯ ಹಿಂಬಾಗಿಲಿಗೆ ಬೆಂಕಿ ಹಚ್ಚಿ ಹುಚ್ಚಾಟ ಮೆರೆದಿದ್ದ. ಇದಾದ ಬಳಿಕ ಕಳೆದ ಮೂರು ದಿನಗಳ ಹಿಂದಷ್ಟೇ ಮತ್ತೆ ಮನೆಗೆ ಬಂದು ಗಲಾಟೆ ಮಾಡಿದ್ದಾನೆ. ಮನೆಯಲ್ಲಿ ಯಾರು ಇಲ್ಲದಿರುವಾಗ ಕಿಟಕಿ ಗ್ಲಾಸ್ ಒಡೆದು ಪುಂಡಾಟ ಮೆರೆದಿದ್ದಾನೆ ಎಂದು ಯುವತಿ ಆತಂಕ ವ್ಯಕ್ತಪಡಿಸಿದ್ದಾರೆ.

ಮನೆಯ ಪಕ್ಕದಲ್ಲಿಯೇ ಜಮೀನಿಗೆ ಬರುವ ನೆಪವೊಡ್ಡಿ ಕಿರುಕುಳ ನೀಡುತ್ತಿದ್ದಾನೆ. ಯಾವುದೇ ಕೆಲಸ ಮಾಡದೇ ಊರಲ್ಲಿ ತಿಪ್ಪಣ್ಣ ಡೋಕರೆ ಸುತ್ತಾಡುತ್ತಾನಂತೆ. ಈ ಕಾರಣಕ್ಕೆ ಒಂದೇ ಸಮುದಾಯದವರಾದರೂ ಪುತ್ರಿಯನ್ನು ಕೊಡಲು ನಿರಾಕರಿಸಿದ್ದರು ಎನ್ನಲಾಗಿದೆ.

ಪೊಲೀಸರ ನಿರ್ಲಕ್ಷ್ಯ ಆರೋಪ:''ಮದುವೆ ಆಗದಿದ್ದರೆ ಕೊಲೆ ಬೆದರಿಕೆ ಹಾಕಿದ್ದರಿಂದ ಜೀವ ಭಯದಲ್ಲಿರುವ ಯುವತಿಯ ಕುಟುಂಬ ಪೊಲೀಸರ ಮೊರೆ ಹೋಗಿದೆ. ಕಳೆದ ಮೂರು ವರ್ಷಗಳ ಹಿಂದೆಯೇ ತಿಪ್ಪಣ್ಣನ ವಿರುದ್ಧ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಆಗ ಪೊಲೀಸರು ಎಚ್ಚರಿಕೆ ಕೊಟ್ಟಿದ್ದರಿಂದ ಕೆಲ ದಿನಗಳ ಕಾಲ ಯುವತಿ ತಂಟೆಗೆ ಬಾರದೆ ಸುಮ್ಮನಾಗಿದ್ದ. ಈಗ ಮತ್ತೆ ಹಳೇ ಚಾಳಿ ಮುಂದುವರೆಸಿರುವ ತಿಪ್ಪಣ್ಣ, ಕೊಲೆ ಬೆದರಿಕೆಯನ್ನು ಹಾಕಿದ್ದರಿಂದ ಯುವತಿ ಕಡೆಯವರು ಪೊಲೀಸರ ಮೊರೆ ಹೋಗಿದ್ದರು. ಆದರೆ, ಪೊಲೀಸರು ಎರಡು ಬಾರಿಯೂ ನಾಳೆ ಬನ್ನಿ ಎಂದು ಹೇಳಿ ಕಳಿಸಿದ್ದರು'' ಎಂದು ಯುವತಿ ಕುಟುಂಬಸ್ಥರು ಆರೋಪಿಸಿದ್ದಾರೆ.

ಪೊಲೀಸ್ ಆಯುಕ್ತರ ಪ್ರತಿಕ್ರಿಯೆ:ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾಹಿತಿ ನೀಡಿದ್ದು, "ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದೇವೆ. ಅದೇ ರೀತಿ ಕಿಣಯೇ ಗ್ರಾಮದಲ್ಲಿನ ಯುವತಿ ಮನೆಗೆ ಸೂಕ್ತ ರಕ್ಷಣೆ ಕೂಡ ನೀಡಿದ್ದೇವೆ'' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ನಡು ರಸ್ತೆಯಲ್ಲೇ ಗ್ಯಾಂಗ್ ವಾರ್: ಅಡ್ಡಾದಿಡ್ಡಿ ಕಾರು ಚಲಾಯಿಸಿ ಹೊಡೆದಾಟ - ವಿಡಿಯೋ ವೈರಲ್ - Udupi Gang War

ತಮ್ಮ ಕಚೇರಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಮೇ 22ರಂದು ಬೆಳಗಾವಿ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಆರೋಪಿ‌ ವಿರುದ್ಧ ಐಪಿಸಿ ಸೆಕ್ಷನ್ 19/24 ರಡಿಯಲ್ಲಿ 354 E, 455, 427, 505, 506 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಯುವಕ ತೊಂದರೆ ಕೊಡುತ್ತಿದ್ದಾನೆ ಎಂದು ಯುವತಿ ಪ್ರಕರಣ ದಾಖಲಿಸಿದ್ದಾರೆ ಎಂದು ವಿವರಿಸಿದರು.

ಆರೋಪಿ ಪ್ರತಿ ದಿನ ತೊಂದರೆ, ಕಿರುಕುಳ ಕೊಟ್ಟಿದ್ದಾನೆ. ಅಲ್ಲದೇ ಮೊನ್ನೆ ಮತ್ತೆ ಮನೆ ಹತ್ತಿರ ಬಂದು ಗಲಾಟೆ ಮಾಡಿದ್ದಾನೆ ಎಂದು ಯುವತಿ ದೂರು ನೀಡಿದ್ದಾರೆ. ಯುವತಿ ನನ್ನ ಹತ್ತಿರ ಬಂದಿದ್ದರು. ಆಗ ತಕ್ಷಣವೇ ಗ್ರಾಮೀಣ ಪೊಲೀಸ್ ಠಾಣೆಗೆ ಕಳಿಸಿ ಕೊಟ್ಟಿದ್ದೆ. ಆ ಬಳಿಕ ಆರೋಪಿಯನ್ನು ವಶಕ್ಕೆ ಪಡೆದು, ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಯುವತಿ ಮನೆಗೆ ಭದ್ರತೆಯನ್ನು ಒದಗಿಸಲಾಗಿದೆ ಎಂದು ತಿಳಿಸಿದರು.

ಯುವತಿ ಕಾಲೇಜಿಗೆ ಹೋಗದೆ ಇರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ನಗರ ಪೊಲೀಸ್ ಆಯುಕ್ತರು, ಕಾಲೇಜಿಗೆ ರಜೆ ಇರುವ ಹಿನ್ನೆಲೆಯಲ್ಲಿ ಮನೆಯಲ್ಲೇ ಇದ್ದೇನೆ ಎಂದು ಯುವತಿ ಹೇಳಿದ್ದಾರೆ. ಕಾಲೇಜಿಗೆ ಹೋಗಲು ಸೂಕ್ತ ಭದ್ರತೆ ಕೊಡುತ್ತೇವೆ. ಈಗ ಆರೋಪಿ ಜೈಲಿನಲ್ಲಿ ಇದ್ದಾನೆ, ಅಲ್ಲದೇ ಈ ಬಗ್ಗೆ ಯುವತಿಯ ಪೋಷಕರ ಜೊತೆಗೂ ಮಾತನಾಡಿದ್ದೇವೆ. ಕೌನ್ಸಿಲಿಂಗ್ ಕೂಡ ಮಾಡಲಾಗಿದ್ದು, ಪೊಲೀಸ್ ಇಲಾಖೆಯಿಂದ ಯುವತಿಗೆ ಎಲ್ಲ ರೀತಿ ಸಹಾಯ ಮಾಡುವುದಾಗಿ ಸ್ಪಷ್ಟಪಡಿಸಿದರು.

ಇದನ್ನೂ ಓದಿ:ಕೊಡಗು: ನಿಶ್ಚಿತಾರ್ಥ ಮುಂದೂಡಿಕೆಯಾಗಿದ್ದಕ್ಕೆ ಬಾಲಕಿ ತಲೆ ಕಡಿದು ಕೊಲೆ; ಆರೋಪಿಗಾಗಿ ಪೊಲೀಸರ​ ಶೋಧ - Kodagu Girl Murder

Last Updated : May 25, 2024, 3:03 PM IST

ABOUT THE AUTHOR

...view details