ಬೆಳಗಾವಿ:ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಭೀಕರವಾಗಿ ಹತ್ಯೆ ಮಾಡಿರುವ ಪ್ರಕರಣ ಮೂಡಲಗಿ ತಾಲೂಕಿನ ಲಕ್ಷ್ಮೇಶ್ವರ ಬಳಿ ನಡೆದಿದೆ.
ಲಕ್ಷ್ಮೇಶ್ವರ ನಿವಾಸಿ ಮೌಲಾಸಾಬ ಯಾಸಿನ್ ಮೋಮಿನ್ (28) ಕೊಲೆಯಾದ ದುರ್ದೈವಿ. ಇಂದು ಬೆಳಗ್ಗೆ 10.30ರ ಸುಮಾರಿಗೆ ಮಚ್ಚು ಹಿಡಿದು ಬಂದ ತಂಡದಿಂದ ಏಕಾಏಕಿ ದಾಳಿ ನಡೆದಿದೆ. ನೋಡ ನೋಡುತ್ತಿದ್ದಂತೆ ಯುವಕನ ಮೇಲೆ ದಾಳಿ ಮಾಡಿ ಗ್ಯಾಂಗ್ ಪರಾರಿಯಾಗಿದೆ. ಘಟನೆಯಿಂದ ಲಕ್ಷ್ಮೇಶ್ವರ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಸ್ಥಳಕ್ಕೆ ಕುಲಗೋಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೊಲೆ ಆರೋಪಿ ಅಮೋಘ ಢವಳೇಶ್ವರನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಅಮೋಘನ ಪತ್ನಿಯನ್ನು ಬೈಕ್ ಮೇಲೆ ಕೊಲೆಯಾದ ಯಾಸಿನ್ ಮೋಮಿನ್ ಕರೆದುಕೊಂಡು ಹೋಗುತ್ತಿದ್ದ. ಇದೇ ವೇಳೆ ದಾಳಿ ಮಾಡಿದ ಅಮೋಘ, ಯಾಸಿನ್ ಮೋಮಿನ್ ಹಾಗೂ ಪತ್ನಿ ಮೇಲೆ ಹಲ್ಲೆ ಮಾಡಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಯಾಸಿನ್ ಸ್ಥಳದಲ್ಲಿಯೇ ಕೊನೆಯುಸಿರೆಳೆದ್ದಾನೆ. ಘಟನೆಯಲ್ಲಿ ಆರೋಪಿಯ ಪತ್ನಿ ತೀವ್ರ ಗಾಯಗೊಂಡಿದ್ದು, ಢವಳೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ, 'ಆರೋಪಿಯನ್ನು ಕುಲಗೋಡ ಪೊಲೀಸರು ಬಂಧಿಸಿದ್ದು, ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಲಿದ್ದಾರೆ. ತನಿಖೆ ಮುಂದುವರಿಸಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ:ಹುಬ್ಬಳ್ಳಿ: ಚಾಕುವಿನಿಂದ ಇರಿದು ವೈಷ್ಣೋದೇವಿ ದೇವಸ್ಥಾನದ ಪೂಜಾರಿಯ ಭೀಕರ ಕೊಲೆ