ನೀರಿಗಿಂತ ಹೆಚ್ಚು ಹೂಳಿನಿಂದಲೇ ತುಂಬಿರುವ ಬಂದರು: ದಡದಲ್ಲೇ ಮೀನುಗಾರರಿಗೆ ಜೀವಭಯ! (ETV Bharat) ಕಾರವಾರ: ಕಳೆದ ಎರಡೂವರೆ ದಶಕಗಳ ಹಿಂದೆ ನಿರ್ಮಾಣಗೊಂಡ ಮುದಗಾ ಬಂದರಿನಲ್ಲಿ ಇದೀಗ ಹೂಳಿನ ಸಮಸ್ಯೆ ಮೀನುಗಾರರಿಗೆ ದೊಡ್ಡ ತಲೆನೋವಾಗಿದೆ. ಬಂದರಿನಲ್ಲಿ ಸಮುದ್ರದ ನೀರು ತುಂಬಿಕ್ಕೊಳ್ಳುವುದಕ್ಕಿಂತ ಹೆಚ್ಚು ಹೂಳು ತುಂಬಿಕೊಂಡ ಕಾರಣ ಕಡಲಿಗಿಳಿಯುವ ಮುನ್ನವೇ ಮೀನುಗಾರರಿಗೆ ಜೀವಭಯ ಕಾಡುವಂತಾಗಿದೆ.
ಹೌದು, ತಾಲೂಕಿನ ಮುದಗಾ ಬಂದರು ಬೆಲೇಕೇರಿ, ಬೆಳಂಬಾರ, ಮಂಜಗುಣಿ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಗ್ರಾಮಗಳಿಗೆ ಜೀವನ ಕಟ್ಟಿಕೊಡುವ ಪ್ರಮುಖ ವಹಿವಾಟು ಕೇಂದ್ರ. ಈ ಬಂದರು ಮೂಲಕ ಪ್ರತಿನಿತ್ಯ ನೂರಾರು ಬೋಟ್‌ಗಳು ಮೀನುಗಾರಿಕೆಗೆ ತೆರಳುವುದರಿಂದ ಲಕ್ಷಾಂತರ ರೂ. ವ್ಯವಹಾರ ಕೂಡ ನಡೆಯುತ್ತಿದೆ. ಇದರಿಂದ ಸರ್ಕಾರಕ್ಕೂ ಕೋಟ್ಯಾಂತರ ರೂ. ಆದಾಯ ಕೂಡ ಸಿಗಲಿದೆ. ಇಷ್ಟಿದ್ದರೂ ಕೂಡ ಬಂದರಿನಲ್ಲಿ ಹೂಳು ತುಂಬಿಕೊಂಡು ದಶಕಗಳೇ ಕಳೆದರೂ ಈವರೆಗೂ ಹೂಳೆತ್ತುವ ಕೆಲಸವಾಗಿಲ್ಲ. ಸ್ಥಳೀಯ ಮೀನುಗಾರರು ಸರ್ಕಾರಕ್ಕೆ, ಉಸ್ತುವಾರಿ ಸಚಿವರು ಸೇರಿದಂತೆ ಇದೀಗ ಮೀನುಗಾರಿಕಾ ಸಚಿವರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಿಲ್ಲದಂತಾಗಿದೆ.
24 ವರ್ಷಗಳ ಹಿಂದೆ ನಿರ್ಮಾಣಗೊಂಡ ಬಂದರಿನಲ್ಲಿ ಈವರೆಗೂ ಒಮ್ಮೆಯೂ ಹೂಳೆತ್ತುವ ಕಾರ್ಯ ಆಗಿಲ್ಲ. ಇದರಿಂದ ಬಂದರಿನಲ್ಲಿ ನೀರಿಗಿಂತ ಹೆಚ್ಚು ಹೂಳೇ ತುಂಬಿಕೊಂಡಿದೆ. ದಕ್ಕೆಯಲ್ಲಿ ಬೋಟ್‌ಗಳು ಹೊರಡುವ ಮತ್ತು ಸಮುದ್ರದಿಂದ ವಾಪಸ್ ಬಂದಾಗ ಬೋಟ್‌ಗಳನ್ನು ಜಾಗೃತೆಯಿಂದ ಚಲಾಯಿಸಬೇಕಾದ ಅನಿವಾರ್ಯತೆ ಇದೆ. ಸಮುದ್ರದಲ್ಲಿ ಇಳಿತ ಇರುವಾಗ ದಡಕ್ಕೆ ಬಂದ ಬೋಟ್‌ಗಳು ಹೂಳಿನಲ್ಲಿ ಸಿಲುಕಿಕೊಳ್ಳುವ ಸ್ಥಿತಿ ಇದೆ. ಅದೆಷ್ಟೋ ಬಾರಿ ಬೋಟ್ ಹೂಳಿನಲ್ಲಿ ಹೂತುಕೊಂಡು ಮೀನು ಖಾಲಿ ಮಾಡಲು ಸಹ ಆಗದೇ ಕಷ್ಟ ಪಟ್ಟು ಹಿಡಿದು ತಂದ ಮೀನಿಗೂ ಬೆಲೆ ಸಿಗದಂತಾದ ಉದಾಹರಣೆಗಳೂ ಕೂಡ ನಡೆದಿದೆ.
ಬಂದರಿನಲ್ಲಿ ಸ್ಥಳೀಯ ಮೀನುಗಾರರಲ್ಲದೆ ಸೈಕ್ಲೋನ್ ಉಂಟಾದಾಗ ಉಡುಪಿ ಮಂಗಳೂರು ಹಾಗೂ ಹೊರ ರಾಜ್ಯದ ಬೋಟ್‌ಗಳು ಸಹ ಇಲ್ಲಿಯೇ ಬಂದು ಲಂಗರು ಹಾಕುತ್ತವೆ. ಈ ವೇಳೆ ಹೂಳಿನಲ್ಲಿ ಹುದುಗಿ ಒಂದಕ್ಕೊಂದು ಬೋಟ್‌ಗಳಿಗೆ ಘರ್ಷಣೆ ಉಂಟಾಗಿ ಬೋಟ್‌ಗಳಿಗೂ ಹಾನಿ ಉಂಟಾಗುತ್ತಿದೆ. ಗುರುವಾರ ಆಳ ಸಮುದ್ರದಲ್ಲಿ ಏಕಾಏಕಿ ತೂಫಾನ್ನಿಂದಾಗಿ ಬೋಟ್‌ಗಳು ವಾಪಸ್ ದಕ್ಕೆಗೆ ಆಗಮಿಸುತ್ತಿದ್ದ ವೇಳೆಯಲ್ಲಿ ಹತ್ತು ಬೋಟ್‌ಗಳು ಹೂಳಿನಲ್ಲಿ ಹೂತು ಹೋಗಿದ್ದು ಶುಕ್ರವಾರ ಸಂಜೆಯವರೆಗೂ ಹೂಳಿನಿಂದ ಮೇಲೆತ್ತಲಾಗದೇ ಬೋಟ್ ಮಾಲೀಕರು ಸಾಕಷ್ಟು ಕಷ್ಟ ಅನುಭವಿಸಬೇಕಾಯಿತು. ಬಂದರನ್ನು ನೂರು ಮೀಟರ್ ವಿಸ್ತರಣೆ ಮಾಡಿ ಹೂಳೆತ್ತುವ ಬಗ್ಗೆ ಹಲವಾರು ಬಾರಿ ಜಿಲ್ಲಾಡಳಿತಕ್ಕೆ ಹಾಗೂ ಮೀನುಗಾರಿಕಾ ಸಚಿವರಿಗೆ, ಶಾಸಕರಿಗೆ ಮನವಿ ನೀಡಿ ಗಮನಕ್ಕೆ ತರಲಾಗಿದ್ದರೂ ಇನ್ನೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಮೀನುಗಾರರು ಬೇಸರ ವ್ಯಕ್ತಪಡಿಸಿದ್ದಾರೆ.
"ನಮ್ಮ ಬದುಕು ನೀರ ಮೇಲಿನ ಗುಳ್ಳೆಯಂತೆ, ಯಾವಾಗ ಒಡೆಯುತ್ತದೆ ಎಂದು ಹೇಳಲಾಗದು. ಆಳ ಸಮುದ್ರದಲ್ಲಿ ಅವಘಡ ಆಗಿ ಸಾವು-ನೋವು ಸಂಭವಿಸುವುದುಂಟು. ಆದರೆ ಕೆಲಸ ಶುರು ಮಾಡುವ ಅಥವಾ ವಾಪಸ್ ಬಂದು ದಡ ಸೇರುವ ದಕ್ಕೆಯಲ್ಲೇ ಪ್ರಾಣಕ್ಕೆ ಕುತ್ತು ಉಂಟಾಗುವ ಆತಂಕ ಇರುವುದು ಅತ್ಯಂತ ದುರದೃಷ್ಟಕರ. ಆದಷ್ಟು ಬೇಗ ಹೂಳೆತ್ತುವುದರ ಮೂಲಕ ಈ ಆತಂಕವನ್ನು ದೂರ ಮಾಡಬೇಕು" ಎಂದು ಸ್ಥಳೀಯ ಯಾದೋಬಾ ಹರಿಕಂತ್ರ ಒತ್ತಾಯಿಸಿದರು.
"ಇನ್ನು ಬೆಲೆಕೇರಿಯಲ್ಲಿ ತಡೆಗೋಡೆ ನಿರ್ಮಿಸುತ್ತೇವೆ ಎಂದು ಹೇಳಿ ಬಹಳ ವರ್ಷಗಳೇ ಕಳೆದಿವೆ. ಆದರೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಅಲ್ಲಿ ಬೋಟ್ ಲಂಗರು ಹಾಕಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನಾವು ಮುದಗಾ ಬಂದರಿಗೆ ಬರಬೇಕಾಗುತ್ತದೆ. ಆದರೆ ಇಲ್ಲಿಯೂ ಹೂಳಿನ ಸಮಸ್ಯೆ ಹೆಚ್ಚಾಗಿದೆ. ಕೂಡಲೇ ಹೂಳೆತ್ತಿ ಅನಾಹುತ ತಪ್ಪಿಸಬೇಕು" ಎಂದು ಮೀನುಗಾರ ಶ್ರೀಕಾಂತ ಬೆಲೇಕೇರಿ ಆಗ್ರಹಿಸಿದರು.
ಇದನ್ನೂ ಓದಿ:ಪರಿಸರವಾದಿಗಳ ವಿರೋಧದ ನಡುವೆ ಇಂದು ವಧವನ್ ಬಂದರು ಯೋಜನೆಗೆ ಪ್ರಧಾನಿ ಭೂಮಿ ಪೂಜೆ - Largest Vadhavan Port