ಕರ್ನಾಟಕ

karnataka

ಮುಡಾ: ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ತನಿಖೆಗೆ ಆದೇಶಿಸದಂತೆ ಕೋರಿದ್ದ ಅರ್ಜಿ ವಜಾ - MUDA Petition Dismissed

By ETV Bharat Karnataka Team

Published : Aug 13, 2024, 7:13 PM IST

ಸಿಎಂ ವಿರುದ್ಧ ದಾಖಲಾಗಿರುವ ಖಾಸಗಿ ದೂರು ವಜಾಗೊಳಿಸುವಂತೆ ಸಲ್ಲಿಸಿದ ಅರ್ಜಿಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ.

People Representation Court
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ (ETV Bharat)

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಮರುಹಂಚಿಕೆ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ದಾಖಲಾಗಿರುವ ಖಾಸಗಿ ದೂರು ವಜಾಗೊಳಿಸುವಂತೆ ವಕೀಲ ಆಲಂ ಪಾಷಾ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು ಆದೇಶಿಸಿದೆ.

ಮೈಸೂರಿನ ಸ್ನೇಹಮಹಿ ಕೃಷ್ಣ ಎಂಬವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ವಿಚಾರಣೆ ಪ್ರಾರಂಭವಾಗುತ್ತಿದ್ದಂತೆ ಮಧ್ಯಂತರ ಅರ್ಜಿ ಸಲ್ಲಿಸಿ ತಮ್ಮ ವಾದ ಆಲಿಸುವಂತೆ ನ್ಯಾಯಾಧೀಶರಲ್ಲಿ ಆಲಂಪಾಷ ಮನವಿ ಮಾಡಿಕೊಂಡರು. ಇದಕ್ಕೆ ನ್ಯಾಯಾಧೀಶರು, "ನೀವು ಯಾವ ನಿಯಮಗಳ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದೀರಿ" ಎಂದು ಪ್ರಶ್ನಿಸಿದರು. ಇದಕ್ಕುತ್ತರಿಸಿದ ಅವರು, ತಾವು ಪಬ್ಲಿಕ್ ಪ್ರಾಸಿಕ್ಯೂಷನ್‌ಗೆ ನೆರವಾಗುವಂತೆ ವಾದ ಮಂಡಿಸುವುದಾಗಿ ಹೇಳಿದರು.

"ಆದರೆ ಪಿಸಿಆರ್ ಕನ್ಸಿಡರ್ ಆದ ಬಳಿಕ ಅಲ್ಲವೇ ನಿಮ್ಮ ವಾದ ಆಲಿಸುವುದು? ಅಲ್ಲದೆ, ಈ ಸಂದರ್ಭದಲ್ಲಿ ನಿಮ್ಮ ಮಧ್ಯಪ್ರವೇಶದಿಂದ ಗೊಂದಲ ಸೃಷ್ಟಿಯಾಗಲಿದೆ. ನಿಮಗೆ ಪ್ರಶ್ನಿಸುವ ಅಧಿಕಾರವೇನು" ಎಂದು ನ್ಯಾಯಾಧೀಶರು ಮತ್ತೆ ಪ್ರಶ್ನಿಸಿದರು. ಇದಕ್ಕೆ ಆಲಂಪಾಷಾ, "ಸಾರ್ವಜನಿಕ ಹಿತಾಸಕ್ತಿಯಿಂದ ಅರ್ಜಿ ಹಾಕಲಾಗಿದೆ" ವಾದಿಸಿದರು. ಮರು ಪ್ರಶ್ನಿಸಿದ ನ್ಯಾಯಾಧೀಶರು, "ಪ್ರಕರಣದಲ್ಲಿ ನಿಮ್ಮ ಪಾತ್ರ ಏನು? ನೀವು ಸಂತ್ರಸ್ತರಾ? ಇಲ್ಲ ಆರೋಪಿಯಾ? ಏನೆಂದು ದಾಖಲಿಸಿಕೊಳ್ಳಬೇಕು?" ಎಂದು ಕೇಳಿದರು.

ಈ ವೇಳೆ ಮಧ್ಯಪ್ರವೇಶಿಸಿದ ಸ್ನೇಹಮಹಿ ಕೃಷ್ಣ ಪರ ವಕೀಲೆ ಲಕ್ಷ್ಮಿ ಅಯ್ಯಂಗಾರ್, "ಪ್ರಕರಣದಲ್ಲಿ ಮೂರನೇ ವ್ಯಕ್ತಿ ಮಧ್ಯಪ್ರವೇಶ ಮಾಡಲು ಅಧಿಕಾರವಿಲ್ಲ. ಈ ರೀತಿ ಹೈಕೋರ್ಟ್ ಸಮಯ ವ್ಯರ್ಥ ಮಾಡಿದ್ದಕ್ಕೆ ದಂಡ ಹಾಕಿರುವ ಉದಾಹರಣೆಗಳಿವೆ. ಈ ರೀತಿ ಕೋರ್ಟ್ ಸಮಯ ವ್ಯರ್ಥ ಮಾಡಿದ್ದಕ್ಕೆ ದಂಡ ಹಾಕಬೇಕು. ಜತೆಗೆ ಮನವಿ ತಿರಸ್ಕರಿಸಬೇಕು" ಎಂದು ಕೇಳಿಕೊಂಡರು. ನಂತರ ಹೈಕೋರ್ಟ್ ಹಿಂದಿನ ಆದೇಶದ ಪ್ರತಿಯನ್ನು ಕೋರ್ಟ್​ಗೆ ಸಲ್ಲಿಸಿದರು.

ವಿಚಾರಣೆ ವೇಳೆ ಆಲಂಪಾಷಾ, "ಪಿಸಿಆರ್ ಅಂದರೆ ಪಬ್ಲಿಕ್ ಕಂಟ್ರೋಲ್ ಅಂತಾಗಿದೆ" ಎಂದು ವಾದಿಸಿದ್ದು, ಗರಂ ಆದ ನ್ಯಾಯಾಧೀಶರು, "ಇಲ್ಲಿ ರಾಜಕೀಯ ಡ್ರಾಮಾ ಮಾಡಬೇಡಿ" ಎಂದು ತರಾಟೆಗೆ ತೆಗೆದುಕೊಂಡರು. ಬಳಿಕ "ಮೊದಲು ನಿಮ್ಮ ಪಶ್ನಿಸುವ ಅಧಿಕಾರ ಸ್ಪಷ್ಟಪಡಿಸಿ" ಎಂದು ತಿಳಿಸಿ ಅರ್ಜಿ ವಜಾಗೊಳಿಸಿ ಆದೇಶಿಸಿದರು.

ಪ್ರತ್ಯೇಕವಾಗಿ ಆಲಿಸಲು ಮನವಿ ಪುರಸ್ಕರಿಸಿದ ನ್ಯಾಯಾಲಯ: ನ್ಯಾಯಾಧೀಶರು ಮುಖ್ಯಮಂತ್ರಿ ವಿರುದ್ಧ ಸಲ್ಲಿಕೆಯಾಗಿರುವ ಎರಡೂ ದೂರುಗಳನ್ನು ಒಟ್ಟಾಗಿ ವಿಚಾರಣೆ ನಡೆಸುವುದಾಗಿ ತಿಳಿಸಿ, ದೂರುದಾರರಲ್ಲಿ ಒಬ್ಬರಾದ ಅಬ್ರಾಹಂಗೆ ವಾದ ಮಂಡಿಸಲು ಸೂಚಿಸಿದರು. ಆಗ ಅಬ್ರಾಹಂ, "ನನ್ನ ಅರ್ಜಿಯಲ್ಲಿ ಬೇರೆ ಅಂಶಗಳನ್ನು ಸೇರಿಸಲಾಗಿದೆ. ಅದನ್ನು ಪ್ರತ್ಯೇಕವಾಗಿ ಆಲಿಸಬೇಕು" ಎಂದು ಕೋರಿದರು. ಇದಕ್ಕೆ ನ್ಯಾಯಾಧೀಶರು ಅನುಮತಿಸಿದರು.

ಇದನ್ನೂ ಓದಿ:ಮುಡಾ ಪ್ರಕರಣ: ಸಿಎಂ ಸಿದ್ದರಾಮಯ್ಯ ವಿರುದ್ಧ ನ್ಯಾಯಾಲಯಕ್ಕೆ ಮತ್ತೊಂದು ಖಾಸಗಿ ದೂರು - Muda Scam

ABOUT THE AUTHOR

...view details