ಕರ್ನಾಟಕ

karnataka

ETV Bharat / state

ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು: ಯಡಿಯೂರಪ್ಪ

ಸಿದ್ದರಾಮಯ್ಯ ಪ್ರಾಮಾಣಿಕರೇ ಆಗಿದ್ದರೆ ಮುಡಾ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ ಹಾಗೂ ಬಿ.ವೈ.ವಿಜಯೇಂದ್ರ ಒತ್ತಾಯಿಸಿದ್ದಾರೆ.

B. Y. Vijayendra and B. S. Yediyurappa
ಬಿ.ವೈ.ವಿಜಯೇಂದ್ರ ಹಾಗೂ ಬಿ.ಎಸ್.ಯಡಿಯೂರಪ್ಪ (Etv Bharat)

By ETV Bharat Karnataka Team

Published : 5 hours ago

ಬೆಂಗಳೂರು: "ಲೋಕಾಯುಕ್ತದಲ್ಲಿ ನಡೆಯುತ್ತಿರುವ ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು" ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒತ್ತಾಯಿಸಿದರು.

ಚನ್ನಪಟ್ಟಣ ಉಪಚುನಾವಣೆಯ ಪ್ರಚಾರಕ್ಕೆ ತೆರಳುವ ಮುನ್ನ ತಮ್ಮ ಡಾಲರ್ಸ್ ಕಾಲೊನಿಯ ನಿವಾಸದ ಬಳಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಲೋಕಾಯುಕ್ತ ವಿಚಾರಣೆಗೆ ಒಳಪಟ್ಟಿದ್ದಾರೆ. ಲೋಕಾಯುಕ್ತ ತನಿಖೆಯಿಂದ ಏನೂ ಆಗಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಹಾಗಾಗಿ, ಮುಖ್ಯಮಂತ್ರಿಗಳು ತಾವು ಸಾಚಾ ಎಂಬುದನ್ನು ಬಿಂಬಿಸಿಕೊಳ್ಳಲು ವಿಚಾರಣೆಗೆ ಹಾಜರಾಗಿ ದೊಂಬರಾಟ ನಡೆಸಿದ್ದಾರೆ ಅಷ್ಟೇ" ಎಂದು ಟೀಕಿಸಿದರು.

"ಮುಡಾ ಹಗರಣದ ಸತ್ಯಾಸತ್ಯತೆ ಹೊರಬರಬೇಕು ಎಂದರೆ ಸಿಬಿಐ ತನಿಖೆ ಆಗಲೇಬೇಕು ಎಂದು ಎಲ್ಲರೂ ಹೇಳುತ್ತಿದ್ದಾರೆ. ನಾನು ಸಿಬಿಐ ತನಿಖೆಗೆ ಆಗ್ರಹಿಸುತ್ತೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ರಾಜಕೀಯ ಜೀವನ ತೆರೆದ ಪುಸ್ತಕ ಎಂದೆಲ್ಲ ಹೇಳುತ್ತಿದ್ದಾರೆ. ಅವರು ಪ್ರಾಮಾಣಿಕರಾಗಿದ್ದರೆ, ಮುಡಾ ಪ್ರಕರಣದ ಸತ್ಯಾಸತ್ಯತೆ ಹೊರಬರಬೇಕು ಎನ್ನುವ ಆಶಯ ಇದ್ದರೆ ಕೂಡಲೇ ಸಿಬಿಐ ತನಿಖೆಗೆ ಆದೇಶಿಸಲಿ" ಎಂದರು.

ಸಚಿವರು ರಾಜೀನಾಮೆ ನೀಡಲಿ:"ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ರಾಜೀನಾಮೆ ನೀಡಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಭ್ರಷ್ಟಾಚಾರ ಹೆಚ್ಚಾಗಿದೆ. ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಮದ್ಯ ಮಾರಾಟಗಾರರೇ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಹಾಗಾಗಿ ಅಬಕಾರಿ ಸಚಿವರು ರಾಜೀನಾಮೆ ನೀಡಬೇಕು" ಎಂದು ಒತ್ತಾಯಿಸಿದ ಅವರು, "ಮುಖ್ಯಮಂತ್ರಿಗಳು ಇದಕ್ಕೆ ಜವಾಬ್ದಾರಿ ಹೊರಬೇಕು" ಎಂದರು.

"ವಕ್ಫ್ ಆಸ್ತಿ ಕಬಳಿಕೆಯ ವಿರುದ್ಧ ಮಠಾಧೀಶರು, ಬಿಜೆಪಿ ನಾಯಕರು ಹೋರಾಟ ನಡೆಸಿದ್ದಾರೆ. ವಕ್ಫ್ ವಿವಾದಕ್ಕೆ ಕಾರಣರಾದ ಸಚಿವ ಜಮೀರ್‌ ಅಹ್ಮದ್ ಖಾನ್ ಅವರಿಂದ ರಾಜೀನಾಮೆ ಪಡೆದು ವಕ್ಫ್ ಭೂ ಕಬಳಿಕೆಯ ಬಗ್ಗೆ ಸಮಗ್ರ ತನಿಖೆ ನಡೆಸಬೇಕು" ಎಂದು ಬಿಎಸ್‌ವೈ ಒತ್ತಾಯಿಸಿದರು.

ಸಿಎಂಗೆ ಕ್ಲೀನ್‌ಚಿಟ್​ ಕೊಡಲು ಲೋಕಾಯುಕ್ತ ತರಾತುರಿ: "ಮುಖ್ಯಮಂತ್ರಿಗಳ ಭಯ ಲೋಕಾಯುಕ್ತ ಅಧಿಕಾರಿಗಳನ್ನು ಕಾಡುತ್ತಿದೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.

ಹಾವೇರಿ ಜಿಲ್ಲೆ ಶಿಗ್ಗಾಂವ್ ತಾಲೂಕಿನ ಬಂಕಾಪುರ ಕ್ರಾಸ್​ನಲ್ಲಿ ಮಾತನಾಡಿದ ಅವರು, ಲೋಕಾಯುಕ್ತ ಒತ್ತಡದಲ್ಲಿ ಕೆಲಸ ಮಾಡುತ್ತಿದೆ. ಮುಡಾ ಹಗರಣದ ಪ್ರಕರಣದಲ್ಲಿ ಲೋಕಾಯುಕ್ತ ಅಧಿಕಾರಿಗಳ ತನಿಖೆ ದಿಕ್ಕು‌ ನೋಡಿದರೆ, ತರಾತುರಿಯಲ್ಲಿ ನೋಟಿಸ್ ನೀಡಿದ್ದಾರೆ ಎನಿಸುತ್ತಿದೆ. ಲೋಕಾಯುಕ್ತ ಸಂಸ್ಥೆ ಎಷ್ಟು ಬೇಗ ಕ್ಲೀನ್‌ ಚಿಟ್ ಕೊಡಬೇಕು ಎನ್ನುವುದನ್ನು ವಿಚಾರ ಮಾಡಿದೆ. ರಾಜ್ಯದ ಮುಖ್ಯಮಂತ್ರಿ ಆರೋಪಿ ಸ್ಥಾನದಲ್ಲಿದ್ದಾರೆ. ನ್ಯಾಯಾಲಯಕ್ಕೆ ಗೌರವಕ್ಕೆ ಕೊಡಬೇಕು." ಎಂದರು.

"ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಒಂದು ಮನೆ ಇಲ್ಲ ಎನ್ನುವ ಕಾರಣಕ್ಕಾಗಿ ಶ್ರೀಮತಿ ಹೆಸರಿನಲ್ಲಿ 14 ಸೈಟ್ ತೆಗೆದುಕೊಂಡಿದ್ದಾರೆ" ಎಂದು ವಿಜಯೇಂದ್ರ ವ್ಯಂಗ್ಯವಾಡಿದರು.

"ಹಿಂದೆ ವಾಚ್ ಪ್ರಕರಣದಲ್ಲಿ, ಎಸಿಬಿ ರಚನೆ ಮಾಡಿ ತಾವು ಪ್ರಮಾಣಿಕರು ಅಂತಾ ಗುರುತಿಸಿಕೊಳ್ಳುತ್ತಿದ್ದಾರೆ. ತಾವು ಪ್ರಾಮಾಣಿಕರು ಅಂತಾ ತೋರಿಸುತ್ತಿದ್ದಾರೆ. ಲೋಕಾಯುಕ್ತ ತರಾತುರಿಯಲ್ಲಿ ವಿಚಾರಣೆ ಮಾಡಿ ಕ್ಲೀನ್ ಚಿಟ್ ಕೊಡಲು ದಿನೇಶ್​ ಎನ್ನುವ ಅಧಿಕಾರಿಯನ್ನು ಬಚ್ಚಿಟ್ಟಿದ್ದಾರೆ" ಎಂದು ಆರೋಪಿಸಿದರು.

"ಸಿದ್ದರಾಮಯ್ಯ ಅವರಿಗೆ ಆತಂಕ ಕಾಡುತ್ತಿದೆ. ಈಗ ಗೌರವ ಹರಾಜಾಗಿದ್ದು ಮುಖ್ಯಮಂತ್ರಿ ವಿಚಲಿತರಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ಪ್ರಾಮಾಣಿಕ ವ್ಯಕ್ತಿಯಾಗಿದ್ದರೆ ಸಿಬಿಐಗೆ ವಹಿಸಿಬೇಕಿತ್ತು. ಐದು ವರ್ಷ ಅಧಿಕಾರ ಪೂರ್ಣಗೊಳಿಸುತ್ತೇನೆ ಅಂದಿದ್ದಾರೆ. ಆದರೆ ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿಯನ್ನು ಕೆಳಗಿಳಿಸಲು ಈಗಾಗಲೇ ತಿರ್ಮಾನ ‌ಮಾಡಿದೆ. ಮುಹೂರ್ತ ಫಿಕ್ಸ್​ ಆಗಿದೆ. ಕಾಂಗ್ರೆಸ್ ಹೈಕಮಾಂಡ್ ಚರ್ಚೆ ನಡೆಯುತ್ತಿದೆ" ಎಂದು ಭವಿಷ್ಯ ನುಡಿದರು.

ಕೋವಿಡ್ ಸಮಯದಲ್ಲಿ ಹೆಣಗಳಿಂದಲೂ ಬೊಮ್ಮಾಯಿ ಲಂಚ ತಗೊಂಡಿದ್ದಾರೆ ಎಂಬ ಸಿದ್ದರಾಮಯ್ಯ ಆರೋಪ ಕುರಿತು ಮಾತನಾಡಿ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಇಷ್ಟು ಸಮಯ ಆಯಿತು. ಕೊರೊನಾ ಲೂಟಿ ಅಗಿದ್ದರೆ, ತನಿಖೆ ಮಾಡಬೇಕಿತ್ತು. ಅವರದೇ ಸರ್ಕಾರ ಇದೆ ಅಲ್ವಾ? ಇಷ್ಟು ದಿನ ಏನ್ ಮಾಡ್ತಿದ್ರು? ಹಿಟ್ ಆ್ಯಂಡ್​ ರನ್ ಮಾಡುತ್ತಿದ್ದಾರೆ. ಸಿಎಂ ಪ್ರಾಮಾಣಿಕನಾಗಿದ್ದಿದ್ದರೆ ವಕ್ಫ್​ ಆಸ್ತಿ ಹೊಡೆದವರು ಅವರ ಪಕ್ಷದಲ್ಲಿ ಇದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಲಿ" ಎಂದು ಹೇಳಿದರು.

ಇದನ್ನೂ ಓದಿ:ಎರಡು ಗಂಟೆ ತನಿಖೆ ಮುಗಿಸಿ ಲೋಕಾಯುಕ್ತ ಸಂಸ್ಥೆಯಿಂದ ಹೊರಗೆ ಬಂದ ಸಿಎಂ ಸಿದ್ದರಾಮಯ್ಯ

ABOUT THE AUTHOR

...view details