ಬೆಂಗಳೂರು/ಮೈಸೂರು: ಮುಡಾ ನಿವೇಶನ ಹಂಚಿಕೆಯಲ್ಲಿನ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಇಡಿ ಅಧಿಕಾರಿಗಳು ಮೈಸೂರು ಹಾಗೂ ಬೆಂಗಳೂರಿನ 9ಕ್ಕೂ ಹೆಚ್ಚು ಕಡೆ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ಪ್ರಕರಣದ ಬಗ್ಗೆ ಒಂದು ಕಡೆ ಲೋಕಾಯುಕ್ತ ತನಿಖೆ ನಡೆಸುತ್ತಿದ್ರೆ, ಮತ್ತೊಂದು ಕಡೆ ಇಡಿ ಸಹಾ ಕೇಸ್ ದಾಖಲಿಸಿಕೊಂಡು ತನಿಖೆ ಮುಂದುವರಿಸಿದೆ. ಈಗಾಗಲೇ ಕಳೆದ ಶುಕ್ರವಾರ ಹಾಗೂ ಶನಿವಾರ ಸುಮಾರು 29 ಗಂಟೆಗಳ ಕಾಲ ಮುಡಾದಲ್ಲಿ ದಾಖಲೆಗಳನ್ನ ಪರಿಶೀಲನೆ ನಡೆಸಿ, ಕೆಲವು ಮಹತ್ವದ ದಾಖಲೆಗಳನ್ನು ಇಡಿ ಅಧಿಕಾರಿಗಳು ತೆಗೆದುಕೊಂಡು ಹೋಗಿದ್ದರು.
ಈ ಮಧ್ಯ ಮುಡಾದಲ್ಲಿ ದಾಖಲೆಗಳನ್ನು ಪರಿಶೀಲನೆ ಮಾಡಿರುವ ಇಡಿ ಅಧಿಕಾರಿಗಳು 50:50 ರ ಅನುಪಾತ ಹಾಗೂ ಇತರೆ ನಿವೇಶನಗಳ ಮಾರಾಟದ ಸಂಬಂಧ ಮಹತ್ವದ ದಾಖಲೆಗಳು ಹಾಗೂ ಹಣಕಾಸು, ವಹಿವಾಟಿನ ಬಗ್ಗೆ ಮಾಹಿತಿ ಪಡೆದಿತ್ತು. ಇಡಿ ಅಧಿಕಾರಿಗಳು ಇಂದು ಬೆಂಗಳೂರು, ಮೈಸೂರಿನಲ್ಲಿ ಬಿಲ್ಡರ್ಸ್ ಹಾಗೂ ಮಾಜಿ ಮುಡಾ ಅಧಿಕಾರಿಗಳ ಮನೆ, ಕಚೇರಿ ಮೇಲೆ ದಾಳಿ ನಡೆಸಿದ್ದಾರೆ.