ಎಂಎಸ್ಐಎಲ್ ಎಂಡಿ ಮನೋಜ್ ಕುಮಾರ್ (ETV Bharat) ಚಾಮರಾಜನಗರ:ಕರ್ನಾಟಕ ಸರ್ಕಾಋಈ ಸ್ವಾಮ್ಯದ ಎಂಎಸ್ಐಎಲ್ನ ಚಿಟ್ ಫಂಡ್ ನೂತನ ಶಾಖೆಯನ್ನು ಚಾಮರಾಜನಗರದಲ್ಲಿ ಇಂದು ಉದ್ಘಾಟಿಸಿಲಾಯಿತು. ಈ ಮೂಲಕ ಎಂಎಸ್ಐಎಲ್ ಚಿಟ್ ಫಂಡ್ ಒಟ್ಟು 27 ಶಾಖೆಯನ್ನು ಹೊಂದಿದಂತಾಗಿದೆ.
ಚಾಮರಾಜನಗರ ಶಾಸಕ ಹಾಗೂ ಎಂಎಸ್ಐಎಲ್ ನಿಗಮದ ಅಧ್ಯಕ್ಷ ಸಿ.ಪುಟ್ಟರಂಗಶೆಟ್ಟಿ ನೂತನ ಶಾಖೆ ಉದ್ಘಾಟಿಸಿ ಮಾತನಾಡಿ, ಚೀಟಿ ವ್ಯವಹಾರದಲ್ಲಿ ಹಣ ಹಾಕಿ ಮೋಸ ಹೋಗುತ್ತಿದ್ದಾರೆ. ಆದರೆ, ಎಂಎಸ್ಐಎಲ್ ನ ಚಿಟ್ ಫಂಡ್ ಸರ್ಕಾರ ಸಂಸ್ಥೆಯಾಗಿದ್ದು, ಇಲ್ಲಿ ಹಣಕ್ಕೆ ಭದ್ರತೆ ಇರಲಿದೆ. ವ್ಯವಹಾರ ಪಾರದರ್ಶಕವಾಗಿರಲಿದೆ. ಚಾಮರಾಜನಗರ ಜನರ ಆರ್ಥಿಕ ಅಭಿವೃದ್ಧಿಗಾಗಿ ಈ ಶಾಖೆ ತೆರೆದಿದ್ದು ಖಾಸಗಿ ಕಂಪನಿ ಹಾಗೂ ವ್ಯಕ್ತಿಗಳನ್ನು ನಂಬಿ ಮೋಸ ಹೋಗುತ್ತಿದ್ದ ಜನರಿಗಾಗಿ ನಮ್ಮ ಸಂಸ್ಥೆ ಪರಿಹಾರವಾಗಿದೆ ಎಂದು ತಿಳಿಸಿದರು.
ಗ್ರಾಹಕರಿಗೆ ಗುಡ್ ನ್ಯೂಸ್:ಇನ್ನು, ಎಂಎಸ್ಐಎಲ್ ಎಂಡಿ ಮನೋಜ್ ಕುಮಾರ್ ಗ್ರಾಹಕರಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಕೇರಳ ಮಾದರಿಯಲ್ಲಿ ಸಂಸ್ಥೆಯನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿದ್ದಾರೆ. ಕಳೆದ ವರ್ಷ 412 ಕೋಟಿ ವ್ಯವಹಾರ ನಡೆದಿದ್ದು, ಈ ವರ್ಷ 500 ಕೋಟಿ ಗುರಿ ಹೊಂದಲಾಗಿದೆ. ಇನ್ನು, ಚಿಟ್ ಫಂಡ್ ಆ್ಯಪ್ ಕೂಡ ಅಭಿವೃದ್ಧಿ ಪಡಿಸುತ್ತಿದ್ದು, ಅಕ್ಟೋಬರ್ ಮೊದಲ ವಾರದಲ್ಲಿ ಟ್ರಯಲ್ ರನ್ ಮಾಡಿದ ಬಳಿಕ ಅಕ್ಟೋಬರ್ ಅಂತ್ಯದಲ್ಲಿ ಗ್ರಾಹಕರು ಆ್ಯಪ್ ಮೂಲಕವೇ ವ್ಯವಹಾರ ನಡೆಸಬಹುದಾಗಿದೆ ಎಂದು ಮಾಹಿತಿ ನೀಡಿದರು.
ಆ್ಯಪ್ ಮೂಲಕ ಸದಸ್ಯತ್ವ, ಕಂತು ಪಾವತಿ ಸೇರಿದಂತೆ ಎಲ್ಲವನ್ನೂ ನಿರ್ವಹಿಸ ಬಹುದಾಗಿದ್ದು ಗ್ರಾಹಕ ಸ್ನೇಹಿಯತ್ತ ಒಂದು ಹೆಜ್ಜೆ ಮುಂದೆ ಇಟ್ಟಿದ್ದೇವೆ. 5 ವರ್ಷದಲ್ಲಿ 100 ಶಾಖೆಗಳನ್ನು ತೆರೆದು ವಾರ್ಷಿಕ 5000 ಕೋಟಿ ವಹಿವಾಟು ನಡೆಸುವ ಗುರಿ ಹೊಂದಲಾಗಿದೆ ಎಂದರು.
ಇದನ್ನೂ ಓದಿ:ಮಲೆಮಹದೇಶ್ವರನ ಹುಂಡಿ ಎಣಿಕೆ: ತಿಂಗಳಲ್ಲಿ 1.76 ಕೋಟಿ ರೂ ಸಂಗ್ರಹ, 4 ದೇಶಗಳ ಕರೆನ್ಸಿ ಪತ್ತೆ