ಬೆಂಗಳೂರು : ಹಿಂದೂ ಧರ್ಮ ಪುನರುತ್ಥಾನಗೊಂಡು ಭಕ್ತಿಯ ಕಡೆಗೆ ದಾಪುಗಾಲನ್ನು ಇಂದು ಇಡುತ್ತಿದೆ. ಆದರೆ ಅದರೊಂದಿಗೆ ಜ್ಞಾನದ ಅನಿವಾರ್ಯತೆಯೂ ಎದುರಾಗುತ್ತಿದೆ. ಧರ್ಮದಲ್ಲಿ ಮುಖ್ಯವಾದದ್ದು ಜ್ಞಾನದ ಮಾರ್ಗವಾಗಿದೆ. ಮುಖ್ಯವಾಗಿ ಹಿಂದೂ ಸಂಸ್ಕೃತಿಯ ದಿವ್ಯ ಸ್ಥಳವಾದ ತಿರುಪತಿಯ ಬಗೆಗಿನ ಜ್ಞಾನ ಪಸರಿಸಲು 'ತಿರುಪತಿ ತಿಮ್ಮಪ್ಪ' ಪುಸ್ತಕ ದೀವಿಗೆಯಾಗಲಿದೆ ಎಂದು ಮೈಸೂರಿನ ರಾಜವಂಶಸ್ಥ, ಕೊಡಗು- ಮೈಸೂರು ಲೋಕಸಭಾ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ನಗರದ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿ ಭಾನುವಾರ ಅಭಿಜ್ಞಾ ಸಂಸ್ಥೆಯಿಂದ ಸಾ. ಕೃ ರಾಮಚಂದ್ರರಾವ್ ವಿರಚಿತ ಮಹಾಕೃತಿಯಾದ 'ತಿರುಪತಿ ತಿಮ್ಮಪ್ಪ' ಪುಸ್ತಕ ಬಿಡುಗಡೆ ಸಮಾರಂಭ ನಡೆಯಿತು. ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಅರ್ಧ ತಿಳಿದ ಜನಾಸೋಹವನ್ನೇ ಕಾಣುತ್ತಿದ್ದೇವೆ. ತಿಳುವಳಿಕೆಯೊಂದಿಗಿನ ಭಕ್ತಿ ಈಗಿನ ಅವಶ್ಯಕತೆಯಾಗಿದೆ. ಆದ್ದರಿಂದ ಸಮಯದಲ್ಲಿ ನಮ್ಮ ತಲೆಮಾರಿಗೆ ಇಂತಹ ಗ್ರಂಥದ ಅವಶ್ಯಕತೆ ಬಹಳಷ್ಟಿದೆ ಎಂದು ಅಭಿಪ್ರಾಯಪಟ್ಟರು.
ರಾಮಚಂದ್ರರಾವ್ ಅವರು ತಮ್ಮ ಜೀವನಕಾಲವನ್ನು ಕಳೆದದ್ದು ಮೈಸೂರಿನ ಸುವರ್ಣಯುಗದ ಕಾಲದಲ್ಲಿ ಮತ್ತು ಇಂದು ಲೋಕಾರ್ಪಣೆಯಾಗಿರುವ ಅವರ ಮಹಾಕೃತಿಯಾದ 'ತಿರುಪತಿ ತಿಮ್ಮಪ್ಪ' ದಲ್ಲಿ ಅಲ್ಲಿನ ಸ್ಥಳ ಮಹಿಮೆ ಸಂಪೂರ್ಣವಾಗಿ ಅಡಕವಾಗಿ. ಈ ಹಿನ್ನಲೆ ಇಂದಿನ ಕಾರ್ಯಕ್ರಮದಲ್ಲಿನ ಉಪಸ್ಥಿತಿ ನನ್ನ ಸೌಭಾಗ್ಯವಾಗಿದೆ ಎಂದು ಹೇಳಿದರು.
ಬೇಲಿಮಠ ಮಹಾಸಂಸ್ಥಾನದ ಪರಮಪೂಜ್ಯರಾದ ಶಿವಾನುಭವ ಚರಮೂರ್ತಿ ಶಿವರುದ್ರ ಮಹಾಸ್ವಾಮಿಗಳು ಮಾತನಾಡಿ, ಭಕ್ತಿ ಮಾರ್ಗದ ನಮ್ಮ ಪರಂಪರೆಯಲ್ಲಿ ರತ್ನದಂತೆ ಕಂಗೊಳಿಸುತ್ತಿರುವ ಪುಸ್ತಕವಾಗಿ ತಿರುಪತಿ ತಿಮ್ಮಪ್ಪ ಕಂಡುಬರುತ್ತಿದೆ. ಇದನ್ನು ದಯವಿಟ್ಟು ಓದಿ ಜ್ಞಾನದ ದೀವಿಗೆಯನ್ನು ನಮ್ಮಲಿ ಜಾಗೃತಗೊಳಿಸುವ ಕೆಲಸವನ್ನು ಮಾತ್ರ ನಾವುಗಳು ಮಾಡಬೇಕಿದೆ. ಅಂತರಂಗದ ಅನುಭವವನ್ನು ಪಡೆದುಕೊಂಡು ಮನುಷ್ಯ ಜನ್ಮವನ್ನು ಸಾರ್ಥಕಪಡಿಸಿಕೊಳ್ಳಲು ಮುಂದಾಗಬೇಕಿದೆ ಎಂದು ಹೇಳಿದರು.