ಚಾಮರಾಜನಗರ : ನನ್ನ ಅಳಿಯಂದಿರು ಇಬ್ಬರು ಚಾಮರಾಜನಗರ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳು. ಆದ್ರೆ ಪಕ್ಷದ ತೀರ್ಮಾನಕ್ಕೆ ಬದ್ಧವಾಗಿರುವಂತೆ ಹೇಳಿದ್ದೇನೆ ಎಂದು ಸಂಸದ ವಿ. ಶ್ರೀನಿವಾಸ ಪ್ರಸಾದ್ ಹೇಳಿದರು.
ಸೋಮವಾರ ಚಾಮರಾಜನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದ ಅವರು, ನನ್ನ ಇಬ್ಬರು ಅಳಿಯಂದಿರು ಹೊಂದಾಣಿಕೆಯಿಂದ ಇದ್ದಾರೆ. ಪಕ್ಷದ ಕೇಂದ್ರ ಚುನಾವಣಾ ಸಮಿತಿ ಯಾರಿಗೆ ಟಿಕೆಟ್ ನೀಡುತ್ತದೆಯೋ ಅವರನ್ನು ಬೆಂಬಲಿಸುವುದಾಗಿ ಹೇಳಿದ್ದೇನೆ. ನನ್ನ ಅಭಿಪ್ರಾಯವನ್ನು ನಾನು ವರಿಷ್ಠರಿಗೆ ತಿಳಿಸಲಿದ್ದು, ಬಹಿರಂಗವಾಗಿ ಹೇಳುವುದಿಲ್ಲ ಎಂದರು.
ಸುದೀರ್ಘ ಕಾಲ ರಾಜಕಾರಣದಲ್ಲಿದ್ದು, ಮಾರ್ಚ್ 17ಕ್ಕೆ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ. ಅಂದು ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಸಭಾಂಗಣದಲ್ಲಿ 'ಸ್ವಾಭಿಮಾನಿ ನೆನಪುಗಳು' ಎಂಬ ಪುಸ್ತಕ ಹೊರತರಲಿದ್ದು, ಅದರಲ್ಲಿ ನನ್ನ ರಾಜಕೀಯ ಜೀವನದ ಕುರಿತು ಬರೆದಿದ್ದೇನೆ. ಮಾಜಿ ಮುಖ್ಯಮಂತ್ರಿಗಳಾದ ಎಸ್ ಎಂ ಕೃಷ್ಣ, ವೀರಪ್ಪ ಮೊಯ್ಲಿ, ಜ್ಞಾನಪೀಠ ಪುರಸ್ಕೃತ ಸಾಹಿತಿ ಚಂದ್ರಶೇಖರ್ ಕಂಬಾರ್ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.
ನನ್ನ ಕೊನೆಯ ಅವಧಿಯ ಸಂಸತ್ ದಿನಗಳು ತೃಪ್ತಿಕರವಾಗಿವೆ. ನಾನು ಸಂಸತ್ತಿನಲ್ಲಿ ಹೆಚ್ಚು ಕ್ರಿಯಾಶೀಲನಾಗಿ ಭಾಗಿಯಾಗದಿದ್ದರೂ ಸಂಸದನಾಗಿ ಮಾಡಬೇಕಾದ ಕೆಲಸ ಮಾಡಿದ್ದೇನೆ. ಸೋಮಾರಿಯಾಗಿ ಕುಳಿತಿರಲಿಲ್ಲ. 17.5 ಕೋಟಿ ಅನುದಾನವನ್ನು ವಿವಿಧ ಕಾಮಗಾರಿಗಳಿಗೆ ಬಳಸಿದ್ದೇನೆ. ಸಾವಿರಾರು ಮಂದಿಯ ಕಷ್ಟ ಸುಖಗಳಲ್ಲಿ ಭಾಗಿಯಾಗಿದ್ದೇನೆ ಎಂದು ಸಂಸದ ಶ್ರೀನಿವಾಸ ಪ್ರಸಾದ್ ಹೇಳಿದರು.
ಇದನ್ನೂ ಓದಿ :ಸಂವಿಧಾನ ಜಾಗೃತಿ ದಿನದಂದು ಮೋದಿ ಬಗ್ಗೆ ಟೀಕೆ: ಕ್ಷಮೆ ಯಾಚಿಸಲು ಆಯೋಜಕರಿಗೆ ಸಿ ಟಿ ರವಿ ಆಗ್ರಹ