ಬೆಂಗಳೂರು:ವಾಲ್ಮೀಕಿ ನಿಗಮ ಹಗರಣವು ವಿಧಾನಮಂಡಲ ಅಧಿವೇಶನದಲ್ಲಿ ಭಾರೀ ಗದ್ದಲ ಎಬ್ಬಿಸಿದೆ. ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿಗರ ಆರೋಪಕ್ಕೆ ಪ್ರತಿಯಾಗಿ, ಹಿಂದಿನ ಸರ್ಕಾರದ ಅವಧಿಯಲ್ಲಿ ಆದ ಹಗರಣಗಳ ಪಟ್ಟಿಯನ್ನು ನೀಡಿದ್ದಾರೆ. ಅದರಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಹಗರಣ ನಡೆದಿದೆ ಎಂದು ಆರೋಪಿಸಿದ್ದು, ಆ ಇಲಾಖೆಯ ಮಾಜಿ ಸಚಿವರಾಗಿದ್ದ ಹಾಲಿ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಅವರ ಅಸಮಾಧಾನಕ್ಕೆ ಗುರಿಯಾಗಿದೆ.
ಈ ಬಗ್ಗೆ ಸಿಎಂಗೆ ಪತ್ರ ಬರೆದಿರುವ ಅವರು, ತಮ್ಮ ಮೇಲೆ ಮಾಡಿರುವ ಭ್ರಷ್ಟಾಚಾರದ ಆರೋಪಗಳನ್ನು ಸುಳ್ಳು ಎಂದು ಹೇಳಿ ಹಿಂಪಡೆಯಬೇಕು. ಇಲ್ಲವಾದಲ್ಲಿ ಪ್ರಕರಣವನ್ನು ಸಿಬಿಐಗೆ ವಹಿಸಿ ಎಂದು ಸವಾಲು ಹಾಕಿದ್ದಾರೆ.
ಪತ್ರದ ಸಾರಾಂಶ ಹೀಗಿದೆ:ಸಿಎಂಸಿದ್ದರಾಮಯ್ಯ ಅವರೇ, ಜುಲೈ 19 ರಂದು ವಿಧಾನಮಂಡಲ ಅಧಿವೇಶನದಲ್ಲಿ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಮಾಜಿ ಸಚಿವರ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಪಿಸಿದ್ದೀರಿ. ಇಲಾಖೆಯ ಕೊಳವೆ ಬಾವಿ ಟೆಂಡರ್ ಪ್ರಕ್ರಿಯೆಯಲ್ಲಿ ಹಗರಣ ನಡೆದಿದೆ ಎಂದು ದೂರಿದ್ದೀರಿ. ಈ ಬಗ್ಗೆ ನಿಮ್ಮ ಸಂಪುಟದ ಈಗಿನ ಸಚಿವ ಪ್ರಿಯಾಂಕ್ ಖರ್ಗೆ ಅಂದು ಸದನದಲ್ಲಿ ಪ್ರಸ್ತಾಪಿಸಿದಾಗ ಪ್ರಕರಣವನ್ನು ಸಿಐಡಿ ತನಿಖೆಗೆ ನಾನೇ ಶಿಫಾರಸ್ಸು ಮಾಡಿದ್ದೆ. ಅದು ಸರ್ಕಾರದ ಕಡತದಲ್ಲಿದೆ.
ನಾನು ಅಧಿಕಾರ ಸ್ವೀಕರಿಸುವ ಮೊದಲು ಕೊಳವೆ ಬಾವಿ, ಡ್ರಿಲ್ಲಿಂಗ್ ಮತ್ತು ಪಂಪ್ ಖರೀದಿ ಟೆಂಡರ್ ಪ್ರಕ್ರಿಯೆ ನಡೆದಿತ್ತು. ಟೆಂಡರ್‌ನಲ್ಲಿನ ಗೊಂದಲ ಮತ್ತು ಸಮಸ್ಯೆಗಳನ್ನು ನಿವಾರಿಸಲು ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಕೊಳವೆ ಬಾವಿ ಫಲಾನುಭವಿ ರೈತರ ಖಾತೆಗೆ ನೇರ ಹಣ ವರ್ಗಾವಣೆ(ಡಿಬಿಟಿ) ಯೋಜನೆ ಜಾರಿ ಮಾಡಿದ್ದೆ. ಟೆಂಡರ್ ಪ್ರಕ್ರಿಯೆಯಲ್ಲಿ ಮಧ್ಯವರ್ತಿಗಳಿಗೆ ಅವಕಾಶವಿಲ್ಲದೆ ರೈತರು ಏಜೆನ್ಸಿ ಮೂಲಕ ಕೊಳವೆ ಬಾವಿ ಕೊರೆಸಿಕೊಂಡರೂ, ಅವರ ಖಾತೆಗೆ ನೇರ ಹಣ ಹಾಕುವ ಯೋಜನೆ ಇದಾಗಿತ್ತು. ಇದನ್ನು ಜಾರಿ ಮಾಡಿದ್ದು ನಾನು ಎಂಬುದು ನಿಮಗೂ ತಿಳಿದಿದೆ. ಈಗ ವಾಲ್ಮೀಕಿ ನಿಗಮದ ಹಗರಣದಲ್ಲಿ ತಮ್ಮ ಸರ್ಕಾರಕ್ಕೆ ಎದುರಾದ ಸಮಸ್ಯೆಯನ್ನು ವಿರೋಧ ಪಕ್ಷದ ಮೇಲೆ ಹೊರಿಸಲು ಈ ಆರೋಪ ಮಾಡಿದ್ದೀರಿ ಎಂದು ಟೀಕಿಸಿದ್ದಾರೆ.