ಹುಬ್ಬಳ್ಳಿ:ಕಾಂಗ್ರೆಸ್‌ನಿಂದ ಸಿಎಂ ಸಿದ್ದರಾಮಯ್ಯನವರ ಕೈ ಕಟ್ಟಿ ಹಾಕುವ ಪ್ರಯತ್ನ ನಡೆದಿದೆ. ಇದರಿಂದ ಆಡಳಿತ ಯಂತ್ರದ ಮೇಲೆ ತೀವ್ರ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ಸಂಸದ ಜಗದೀಶ್ ಶೆಟ್ಟರ್ ಹೇಳಿದರು.
ನಗರದ ವಿಮಾನ ನಿಲ್ದಾಣದಲ್ಲಿಂದು ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಪದವಿ ಕಿತ್ತಾಟ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಸಿದ್ದರಾಮಯ್ಯರ ಕೈಕಟ್ಟಿ ಹಾಕುವುದರಿಂದ ರಾಜ್ಯದಲ್ಲಿ ಅತಂತ್ರ ಸರ್ಕಾರ ಆಗುತ್ತೆ. ಇಂತಹ ಪರಿಸ್ಥಿತಿಯಿಂದ ಸರ್ಕಾರಕ್ಕೂ ಡ್ಯಾಮೇಜ್ ಆಗುತ್ತೆ. ಆಡಳಿತ ವ್ಯವಸ್ಥೆ ಹದಗಡುತ್ತಿದೆ ಆಂತರಿಕ ಕಲಹದಿಂದ ಸರ್ಕಾರಕ್ಕೆ ತೊಂದರೆ ಆಗುತ್ತದೆ. ಕಾಂಗ್ರೆಸ್ ಪಕ್ಷ ಈ ಬಗ್ಗೆ ದೃಢವಾದ ನಿರ್ಧಾರ ತೆಗೆದುಕೊಂಡು ಎಸ್ ಆರ್ ನೋ ಅಂತ ಹೇಳಬೇಕು ಎಂದರು.
ಈ ವಿಚಾರವಾಗಿ ಕಾಂಗ್ರೆಸ್ ಹೈಕಮಾಂಡ್ ಸ್ಪಷ್ಟವಾಗಿ ಏನೂ ಹೇಳುತ್ತಿಲ್ಲ. ಒಂದು ಸ್ಪಷ್ಟವಾದ ಸಿಗ್ನಲ್ ಅನ್ನು ಕಾಂಗ್ರೆಸ್ ಹೈಕಮಾಂಡ್ ಕೊಡಬೇಕಿತ್ತು. ಸಿದ್ದರಾಮಯ್ಯ ಐದು ವರ್ಷ ಇರಬೇಕು ಎನ್ನುವ ಕ್ಲಿಯರ್ ಸಿಗ್ನಲ್ ಕೊಡಬೇಕಿತ್ತು. ಒಂದು ಡಿಸಿಎಂ ಇದ್ದಿದ್ದು ಮೂರು ಡಿಸಿಎಂ ಆಗಲಿ ಮುಖ್ಯಮಂತ್ರಿ ಬದಲಾವಣೆ ಆಗಲಿ ಅನ್ನೋ ಗೊಂದಲ ನಿರ್ಮಾಣ ಮಾಡಿದ್ದಾರೆ. ಇದರಿಂದಾಗಿ ಆಡಳಿತ ವ್ಯವಸ್ಥೆ ಹದಗೆಟ್ಟಿದೆ. ಯಾರ ಮನಸಲ್ಲಿ ಏನಿದೆ ಅನ್ನೋದನ್ನು ಬೇರೆಯವರಿಂದ ಹೇಳಿಸುವ ಪ್ರಯತ್ನ ಆಗುತ್ತಿದೆ. ಏನು ಹೇಳಬೇಕು ಅನ್ನೋದನ್ನು ಹೈಕಮಾಂಡ್ ಮುಂದೆ ಹೇಳಬೇಕು ಎಂದು ಹೇಳಿದರು.
ಬಿಜೆಪಿ ಆಪರೇಷನ್ ಕಮಲ ಮತ್ತೊಂದು ಮಾಡುವುದು ಬೇಕಾಗಿಲ್ಲ. ಕಾಂಗ್ರೆಸ್‌ನ ಒಳ ಬೇಗುದಿಯಿಂದ ಶಾಸಕರ ಅಸಮಾಧಾನವೇ ಸರ್ಕಾರಕ್ಕೆ ಎಫೆಕ್ಟ್ ಆಗುತ್ತದೆ. ಗ್ಯಾರಂಟಿ ಯೋಜನೆಗಳಿಂದ ಎಲೆಕ್ಷನ್‌ನಲ್ಲಿ ಲಾಭ ಆಗುತ್ತೆ ಅಂತ ತಿಳಿದುಕೊಂಡಿದ್ದರು. ಲಾಭ ಆಗಿಲ್ಲ ಹೀಗಾಗಿ ವಾಪಸ್ ತೆಗೆದುಕೊಳ್ಳುವಂತೆ ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ. ಗ್ಯಾರಂಟಿ ಅನುಷ್ಠಾನಕ್ಕಾಗಿ ಸರ್ಕಾರದ ಖಜಾನೆ ಖಾಲಿ ಆಗುತ್ತಿದೆ. ವರಮಾನ ಹೆಚ್ಚಿಗೆ ಮಾಡಿಕೊಳ್ಳಲು ಡೀಸೆಲ್, ಪೆಟ್ರೋಲ್, ಹಾಲು, ಬಸ್ ಪ್ರಯಾಣ ದರ ಹೆಚ್ಚಳ ಮಾಡುತ್ತಿದ್ದಾರೆ. ಜನಸಾಮಾನ್ಯರು ಬಡವರು ಬಹಳ ಸಂಕಷ್ಟ ಅನುಭವಿಸುತ್ತಿದ್ದಾರೆ. ಗ್ಯಾರಂಟಿ ಯೋಜನೆಯಿಂದ ರಾಜ್ಯದ ಜನತೆಗೆ ತೊಂದರೆಯಾಗುತ್ತಿದೆ. ಖಜಾನೆ ಖಾಲಿಯಾಗುತ್ತಿದೆ ಅಂತ ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ. ಇದನ್ನೆಲ್ಲ ವಿಚಾರ ಮಾಡಿ ಸಿದ್ದರಾಮಯ್ಯನವರು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.